ರೈಫಲ್‌ ಸ್ವಚ್ಛಗೊಳಿಸುವಾಗ ಮಿಸ್ಸಾಗಿ ಫಿಸಿಯೋ ಮೇಲೆ ಗುಂಡು ಹಾರಿಸಿದ ಶೂಟರ್‌!

| Published : Mar 08 2024, 01:54 AM IST

ಸಾರಾಂಶ

ಮಹಿಳಾ ಶೂಟರ್‌ ಪೆಲೆಟ್‌ಗಳನ್ನು ತೆಗೆಯದೆ ರೈಫಲ್‌ ಕ್ಲೀನ್‌ ಮಾಡುತ್ತಿದ್ದರು. ಈ ವೇಳೆ ಫಿಸಿಯೋ ತಮ್ಮ ಕೊಠಡಿಯೊಳಕ್ಕೆ ಬರುತ್ತಿದ್ದಂತೆ ಗಾಬರಿಗೊಂಡ ಶೂಟರ್‌ ಆಕಸ್ಮಿಕವಾಗಿ ಟ್ರಿಗರ್‌ ಒತ್ತಿದ್ದಾರೆ.

ನವದೆಹಲಿ: ಬಂಗಾಳದ ಯುವ ಶೂಟರ್‌ ಒಬ್ಬರು ತಮ್ಮ ರೈಫಲ್‌ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಟ್ರಿಗರ್‌ ಒತ್ತಿದ ಪರಿಣಾಮ, ಫಿಸಿಯೋ ಒಬ್ಬರ ದವಡೆ ಮುರಿದ ಘಟನೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದೆ. ದವಡೆಯೊಳಗೆ ಸಿಲುಕಿದ್ದ ಪೆಲೆಟ್‌ (ಸಣ್ಣ ಗಾತ್ರದ ಗುಂಡು) ಹೊರ ತೆಗೆಯಲು ಶಸ್ತ್ರಚಿಕಿತ್ಸೆಗೆ ಒಳಗಾದ ಫಿಸಿಯೋ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ರೈಫಲ್‌ ಅಥವಾ ಪಿಸ್ತೂಲ್‌ ಸ್ವಚ್ಛಗೊಳಿಸುವಾಗ ಪೆಲೆಟ್‌ಗಳನ್ನು ಹೊರತೆಗೆಯಬೇಕು. ಆದರೆ ಮಹಿಳಾ ಶೂಟರ್‌ ಪೆಲೆಟ್‌ಗಳನ್ನು ತೆಗೆಯದೆ ರೈಫಲ್‌ ಕ್ಲೀನ್‌ ಮಾಡುತ್ತಿದ್ದರು. ಫಿಸಿಯೋ ತಮ್ಮ ಕೊಠಡಿಯೊಳಕ್ಕೆ ಬರುತ್ತಿದ್ದಂತೆ ಗಾಬರಿಗೊಂಡ ಶೂಟರ್‌ ಆಕಸ್ಮಿಕವಾಗಿ ಟ್ರಿಗರ್‌ ಒತ್ತಿದ್ದಾರೆ ಎಂದು ಆಕೆಯ ಕೋಚ್‌ ತಿಳಿಸಿದ್ದಾರೆ.

ಖೇಲೋ ವಿಜೇತರಿಗೆ ಸರ್ಕಾರಿ ಹುದ್ದೆ: ತೇಜಸ್ವಿನ್‌ ಆಕ್ಷೇಪ

ನವದೆಹಲಿ: ಖೋಲೋ ಇಂಡಿಯಾ ಕ್ರೀಡಾಕೂಟಗಳಲ್ಲಿ ಪದಕ ವಿಜೇತರು ಸರ್ಕಾರಿ ಹುದ್ದೆಗಳಿಗೆ ಅರ್ಹರಾಗುತ್ತಾರೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಘೋಷಿಸಿದ ಬೆನ್ನಲ್ಲೇ, ಭಾರತದ ಅಗ್ರ ಅಥ್ಲೀಟ್‌ಗಳಲ್ಲಿ ಒಬ್ಬರಾದ ತೇಜಸ್ವಿನ್‌ ಶಂಕರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೈಜಂಪ್‌ ಹಾಗೂ ಡೆಕಥ್ಲಾನ್‌ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ವಿನ್, ‘ಈ ರೀತಿಯ ಪ್ರಸ್ತಾಪಗಳು ಸೂಕ್ತವಲ್ಲ. ಕೇವಲ ಒಮ್ಮೆ ಪದಕ ಗೆದ್ದು ಕೆಲಸ ಗಿಟ್ಟಿಸಿಕೊಂಡರೆ ಅದಕ್ಕೆ ಅರ್ಥವಿರುವುದಿಲ್ಲ. ಸತತವಾಗಿ 3 ವರ್ಷ ರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದವರಿಗೆ ಅಥವಾ ಸತತ 5 ವರ್ಷ ರಾಷ್ಟ್ರೀಯ ರ್‍ಯಾಂಕಿಂಗ್‌ನಲ್ಲಿ ಅಗ್ರ-8ರಲ್ಲಿ ಸ್ಥಾನ ಉಳಿಸಿಕೊಂಡವರಿಗೆ ಮನ್ನಣೆ ನೀಡುವುದು ಉತ್ತಮ ಎನ್ನುವುದು ನನ್ನ ಅಭಿಪ್ರಾಯ. ಖೇಲೋ ಇಂಡಿಯಾ ಒಂದು ಅದ್ಭುತ ಕ್ರೀಡಾಕೂಟ. ಅದು ಕೇವಲ ಹುದ್ದೆ ಪಡೆಯಲು ಸೀಮಿತವಾಗಬಾರದು’ ಎಂದು ಟ್ವೀಟ್‌ ಮಾಡಿದ್ದಾರೆ.