ಟೆನಿಸ್‌ ಕೃಷ್ಣ: ಮಂಡ್ಯದಲ್ಲಿ ಜನ ಕಬಡ್ಡಿ, ಖೋ-ಖೋ ಆಡ್ತಿದ್ರು, ನಂಗೆ ಟೆನಿಸ್‌ ಮೇಲೆ ಲವ್‌ ಆಯ್ತು ಎಂದಿದ್ದ ಎಸ್ಸೆಂಕೆ

| Published : Dec 11 2024, 12:47 AM IST

ಟೆನಿಸ್‌ ಕೃಷ್ಣ: ಮಂಡ್ಯದಲ್ಲಿ ಜನ ಕಬಡ್ಡಿ, ಖೋ-ಖೋ ಆಡ್ತಿದ್ರು, ನಂಗೆ ಟೆನಿಸ್‌ ಮೇಲೆ ಲವ್‌ ಆಯ್ತು ಎಂದಿದ್ದ ಎಸ್ಸೆಂಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣ ಲೋಕಸಭೆಗೆ ಪ್ರವೇಶಿಸುವ ಮೊದಲು 1968ರಲ್ಲಿ ಅಮೆರಿಕಕ್ಕೆ ಹೋಗಿದ್ದರಂತೆ. ಆಗ ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂ ನಡೆಯುತ್ತಿತ್ತು. ಕ್ರೀಡಾಂಗಣಕ್ಕೆ ಹೋಗಿ ಪಂದ್ಯಗಳನ್ನು ವೀಕ್ಷಿಸಿದ್ದರು. ಅದು ಅವರು ಮೊದಲು ನೋಡಿದ ಗ್ರ್ಯಾನ್‌ ಸ್ಲಾಂ.

ಎಸ್‌.ಎಂ.ಕೃಷ್ಣ ಅವರ ಟೆನಿಸ್‌ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಬಾಲ್ಯದಿಂದಲೇ ಟೆನಿಸ್‌ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಕೃಷ್ಣ, ಟೆನಿಸ್‌ ಆಡಿದ್ದಾರೆ ಕೂಡ. ಟೆನಿಸ್‌ ಮೇಲಿನ ಪ್ರೀತಿ, ನೆಚ್ಚಿನ ಆಟಗಾರರು, ಅಚ್ಚುಮೆಚ್ಚಿನ ಪಂದ್ಯ, ರೋಚಕ ಕ್ಷಣಗಳ ಬಗ್ಗೆ ಅವರೇ ಈ ಹಿಂದೆ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಲಾಗಿದೆ.

ಟೆನಿಸ್‌ ಎಸ್‌.ಎಂ.ಕೃಷ್ಣ ಅವರ ‘ಫಸ್ಟ್‌ ಲವ್‌’. ಅನೇಕರು ಅವರನ್ನು ‘ಟೆನಿಸ್‌ ಕೃಷ್ಣ’ ಎಂದೇ ಕರೆಯುತ್ತಿದ್ದರು. ‘ಮಂಡ್ಯದಲ್ಲಿ ಎಲ್ಲರೂ ಕಬಡ್ಡಿ, ಖೋ-ಖೋ ಆಡುತ್ತಿದ್ದರು. ಆದರೆ ಅದ್ಯಾಕೋ ಗೊತ್ತಿಲ್ಲ ನನಗೆ ಟೆನಿಸ್‌ ಮೇಲೆ ಲವ್‌ ಆಯ್ತು. ಬಹುಶಃ ಆಟಗಾರರು ಬಣ್ಣ ಬಣ್ಣದ ಅಂಗಿ, ಶಾರ್ಟ್ಸ್‌ ತೊಟ್ಟು ಆಡುವುದನ್ನು ನೋಡಿ ಆಟದತ್ತ ವಾಲಿದೆ ಎನಿಸುತ್ತದೆ’ಎಂದು ಕೃಷ್ಣ ಒಮ್ಮೆ ಹೇಳಿಕೊಂಡಿದ್ದರು. ಬಹಳ ಇಷ್ಟಪಟ್ಟು ಟೆನಿಸ್‌ ಆಡುತ್ತಿದ್ದ ಕೃಷ್ಣ ಒಮ್ಮೆ ಮೈಸೂರಿನ ಯುವರಾಜ ಕಾಲೇಜನ್ನು ಪ್ರತಿನಿಧಿಸಿದ್ದರು. ಬೆಂಗಳೂರಿಗೆ ಬಂದು ಸೆಂಟ್ರಲ್‌ ಕಾಲೇಜು ವಿರುದ್ಧ ಆಡಿದ್ದರು. ಆದರೆ ಕೃಷ್ಣರ ಟೆನಿಸ್‌ ಬದುಕು ಟೇಕ್‌ ಆಫ್‌ ಆಗಲಿಲ್ಲ. ‘ಹೆಚ್ಚೆಂದೆರೆ ನಾನೊಬ್ಬ ಕ್ಲಬ್‌ ಲೆವೆಲ್‌ ಆಟಗಾರ’ ಎಂದು ಕೃಷ್ಣ ಅವರೇ ಹೇಳಿಕೊಂಡಿದ್ದರು.

ಕೃಷ್ಣ ಮೊದಲಿಗೆ ನೋಡಿದ ಗ್ರ್ಯಾನ್‌ಸ್ಲಾಂ ಯುಎಸ್‌ ಓಪನ್‌!ಕೃಷ್ಣ ಲೋಕಸಭೆಗೆ ಪ್ರವೇಶಿಸುವ ಮೊದಲು 1968ರಲ್ಲಿ ಅಮೆರಿಕಕ್ಕೆ ಹೋಗಿದ್ದರಂತೆ. ಆಗ ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂ ನಡೆಯುತ್ತಿತ್ತು. ಕ್ರೀಡಾಂಗಣಕ್ಕೆ ಹೋಗಿ ಪಂದ್ಯಗಳನ್ನು ವೀಕ್ಷಿಸಿದ್ದರು. ಅದು ಅವರು ಮೊದಲು ನೋಡಿದ ಗ್ರ್ಯಾನ್‌ ಸ್ಲಾಂ.

ಟಿಕೆಟ್‌ ಇಲ್ಲದೇ ವಿಂಬಲ್ಡನ್‌ ವೀಕ್ಷಿಸಿದ್ದ ಎಸ್‌ಎಂಕೆ!

1981ರಲ್ಲಿ ಕೃಷ್ಣ ಲಂಡನ್‌ಗೆ ಹೋಗಿದ್ದಾಗ ವಿಂಬಲ್ಡನ್‌ ಪಂದ್ಯಗಳನ್ನು ನೋಡಲೇಬೇಕು ಎಂದು ಸಂಕಲ್ಪ ಮಾಡಿಕೊಂಡಿದ್ದರಂತೆ. ಆದರೆ ಅವರ ಬಳಿ ಟಿಕೆಟ್‌ ಇರಲಿಲ್ಲ. ಯಾರೋ ಇನ್ಯಾರಿಗೂ ಕೊಟ್ಟ ಉಡುಗೊರೆಯನ್ನು ಬಳಸಿಕೊಂಡು, ಬ್ಲ್ಯಾಕ್‌ನಲ್ಲಿ ಟಿಕೆಟ್‌ ಖರೀದಿಸಿ ಕ್ರೀಡಾಂಗಣ ಆವರಣಕ್ಕೆ ಪ್ರವೇಶಿಸಿದ್ದರಂತೆ. ಆ ಉಡುಗೊರೆಯನ್ನು ಸ್ವೀಕರಿಸಬೇಕಿದ್ದ ಮಹಿಳೆ, ವಿಂಬಲ್ಡನ್‌ ಟೆನಿಸ್‌ ಸಂಸ್ಥೆ ಕಾರ್ಯದರ್ಶಿಯ ಆಪ್ತ ಸಹಾಯಕಿ. ಆಕೆಗೆ ಉಡುಗೊರೆ ನೀಡಿ, ಮೆಚ್ಚಿಸಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದಂತೆ.

ಬೋರಿಸ್‌ ಬೆಕರ್‌ರ ಫೈನಲ್‌ ಪಂದ್ಯ ನೋಡಲು ರಾತ್ರೋರಾತ್ರಿ ಲಂಡನ್‌ಗೆ!

1984ರ ಚುನಾವಣೆಯಲ್ಲಿ ಸೋತಿದ್ದ ಕೃಷ್ಣ, ಬಿಡುವಿನಿಂದ ಇದ್ದರಂತೆ. ಆಗ ಪತ್ರಿಕೆಗಳು ಜರ್ಮನಿಯ ಯುವ ಟೆನಿಸಿಗ ಬೋರಿಸ್‌ ಬೆಕರ್‌ರನ್ನು ಹಾಡಿ-ಕೊಂಡಾಡಿ ಅಟ್ಟಕ್ಕೇರಿಸಿದ್ದವಂತೆ. ಆತನ ಫೈನಲ್‌ ವೀಕ್ಷಿಸಲು ಸ್ನೇಹಿತನೊಂದಿಗೆ ರಾತ್ರೋ ರಾತ್ರಿ ಲಂಡನ್‌ಗೆ ತೆರಳಿದ್ದ ಕೃಷ್ಣ, ಟಿಕೆಟ್‌ ಗಿಟ್ಟಿಸಿಕೊಳ್ಳಲು ವಿಂಬಲ್ಡನ್‌ ಸಂಸ್ಥೆಯ ಕಾರ್ಯದರ್ಶಿಯ ಸಹಾಯಕಿಗೆ ಬೆಳ್ಳಿ ವಸ್ತುಗಳನ್ನು ಉಡುಗೊರೆಯಾಗಿ ಕೊಂಡೊಯ್ದಿದ್ದರಂತೆ. ‘ಬೋರ್ನ್‌ ಬೊರ್ಗ್‌ vs ಬೋರಿಸ್‌ ಬೆಕರ್‌ ನಡುವಿನ ಫೈನಲ್‌, ನಾನು ನೋಡಿದ ದಿ ಬೆಸ್ಟ್‌ ಟೆನಿಸ್‌ ಪಂದ್ಯ’ ಎಂದು ಕೃಷ್ಣ ಬಣ್ಣಿಸಿದ್ದರು.

ಫೆಡರರ್‌ ಆಟಕ್ಕೆ ಮನಸೋತಿದ್ದರು!

ಬೋರಿಸ್‌ ಬೆಕರ್‌ ಬಳಿಕ ಎಸ್‌.ಎಂ.ಕೃಷ್ಣರ ಮನಸೂರೆಗೊಂಡ ಆಟಗಾರ ರೋಜರ್‌ ಫೆಡರರ್‌. ಸ್ವಿಜರ್‌ಲೆಂಡ್‌ನ ಟೆನಿಸ್‌ ಮಾಂತ್ರಿಕನ ಆಟದ ಬಗ್ಗೆ ಕೃಷ್ಣ ಹಲವು ಸನ್ನಿವೇಶಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾರಾದರೂ ನಿಮಗೇಕೆ ವಿಂಬಲ್ಡನ್‌ ಬಗ್ಗೆ ಮರೆಯಲು ಆಗುವುದಿಲ್ಲ ಎಂದು ಕೇಳಿದರೆ, ನನ್ನ ಉತ್ತರ ‘ರೋಜರ್‌ ಫೆಡರರ್‌, ರೋಜರ್‌ ಫೆಡರರ್‌, ರೋಜರ್‌ ಫೆಡರರ್‌ ಮಾತ್ರ ಆಗಿರಲಿದೆ’ ಎಂದಿದ್ದರು.ಮಾಧ್ಯಮಗಳಿಗೆ ಹೆದರಿ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಕ್ಕೆ ಹೋಗಿರಲಿಲ್ಲ!

ಎಸ್‌.ಎಂ.ಕೃಷ್ಣ ವಿದೇಶಾಂಗ ಸಚಿವರಾಗಿದ್ದಾಗ ಒಮ್ಮೆ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಮೆಲ್ಬರ್ನ್‌ನಲ್ಲಿ ತಾವಿದ್ದ ಹೋಟೆಲ್‌ ಪಕ್ಕದಲ್ಲೇ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ನಡೆಯುತ್ತಿತ್ತು. ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ‘ಬನ್ನಿ ಮ್ಯಾಚ್‌ ನೋಡೋಣ’ ಎಂದು ಕರೆದಾಗ ಕೃಷ್ಣ ನಯವಾಗೇ ನಿರಾಕರಿಸಿದ್ದರಂತೆ. ಕಾರಣ, ಮಾಧ್ಯಮಗಳ ಭಯದಿಂದ. ‘ನಾನು ವಿಂಬಲ್ಡನ್‌ಗೆ ಹೋಗಿದ್ದೇ ಎನ್ನುವುದನ್ನೇ ದೊಡ್ಡ ವಿವಾದ ಮಾಡಲಾಗಿತ್ತು. ಅದಕ್ಕೇ ಆಸ್ಟ್ರೇಲಿಯನ್‌ ಓಪನ್‌ಗೆ ಹೋಗಲಿಲ್ಲ’ ಎಂದು ಕೃಷ್ಣ ಹೇಳಿಕೊಂಡಿದ್ದರು.