ಸಾರಾಂಶ
ನಾಸಿರ್ ಸಜಿಪ
ಹೈದರಾಬಾದ್ : ಹಾಲಿ ಚಾಂಪಿಯನ್ ಪುಣೇರಿ ಪಲ್ಟನ್, ಚೊಚ್ಚಲ ಟ್ರೋಫಿ ಕನಸಿನಲ್ಲಿರುವ ತಮಿಳ್ ತಲೈವಾಸ್ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಭಾರಂಭ ಮಾಡಿವೆ. ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದ್ದ ತೆಲುಗು ಟೈಟಾನ್ಸ್, ಕಳೆದ ಬಾರಿ ರನ್ನರ್-ಅಪ್ ಹರ್ಯಾಣ ಸ್ಟೀಲರ್ಸ್ ಸೋಲನುಭವಿಸಿದವು.
ಇಲ್ಲಿನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೈಟಾನ್ಸ್ ವಿರುದ್ಧ ತಲೈವಾಸ್ 44-29 ಅಂಕಗಳಿಂದ ಜಯಗಳಿಸಿತು. ಟೈಟಾನ್ಸ್ ಭರ್ಜರಿ ಆರಂಭ ಪಡೆದರೂ ಬಳಿಕ ತಲೈವಾಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಟೈಟಾನ್ಸ್ ನಾಯಕ ಪವನ್ ಶೆರಾವತ್ ಮೊದಲ ರೈಡ್‌ನಲ್ಲೇ 3 ಸೇರಿ 4 ರೈಡ್‌ಗಳಲ್ಲಿ 6 ಅಂಕ ಗಳಿಸಿದರು. ಆದರೆ ತಲೈವಾಸ್‌ಗೆ ಮೇಲುಗೈ ಸಾಧಿಸಲು ಹೆಚ್ಚಿನ ಸಮಯ ಬೇಕಾಗಲಿಲ್ಲ. 8ನೇ ನಿಮಿಷದಲ್ಲಿ ಟೈಟಾನ್ಸ್‌ನ ಆಲೌಟ್ ಮಾಡಿದ ತಲೈವಾಸ್ 11-7ರಲ್ಲಿ ಮುಂದಿತ್ತು. ಮೊದಲಾರ್ಧಕ್ಕೆ 20-17ರಲ್ಲಿ ಮೇಲುಗೈ ಸಾಧಿಸಿದ ತಂಡ 2ನೇ ಅವಧಿಯಲ್ಲೂ ಲೀಡ್ ಬಿಟ್ಟುಕೊಡದೆ ಭರ್ಜರಿ ಜಯಗಳಿಸಿತು.
ಪುಣೇರಿಗೆ ಜಯ: ಪುಣೇರಿ ಹಾಗೂ ಹರ್ಯಾಣ ನಡುವಿನ 2ನೇ ಪಂದ್ಯ ಆರಂಭದಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾದರೂ, ಮೊದಲಾರ್ಧದ ಬಳಿಕ ಪುಣೇರಿ ಹಿಡಿತ ಸಾಧಿಸಿತು. ಮೊದಲ 20 ನಿಮಿಷಗಳ ಆಟ ಮುಕ್ತಾಯಕ್ಕೆ 19-13ರಿಂದ ಮುಂದಿದ್ದ ಪುಣೇರಿ, ಕೊನೆವರೆಗೂ ಪ್ರಾಬಲ್ಯ ಸಾಧಿಸಿ ತಾನೇಕೆ ಹಾಲಿ ಚಾಂಪಿಯನ್ ಎಂಬುದನ್ನು ತೋರಿಸಿಕೊಟ್ಟಿತು. ತಂಡಕ್ಕೆ 35-25ರಿಂದ ಜಯಲಭಿಸಿತು.
ಇಂದು ಬುಲ್ಸ್ vs ಜೈಂಟ್ಸ್‌ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಆಘಾತಕಾರಿ ಸೋಲುನುಭವಿಸಿದ್ದ ಬೆಂಗಳೂರು ಬುಲ್ಸ್ ತಂಡ ಭಾನುವಾರ ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಾಡಲಿದ್ದು, ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವ ಕಾತರದಲ್ಲಿದೆ. ಗುಜರಾತ್ ಮೊದಲ ಪಂದ್ಯದಲ್ಲೇ ಜಯಭೇರಿ ಮೊಳಗಿಸಲು ಕಾಯುತ್ತಿದೆ.ಇಂದಿನ ಪಂದ್ಯಗಳು
ಬೆಂಗಾಲ್-ಜೈಪುರ, ರಾತ್ರಿ 8 ಗಂಟೆಗೆ
ಬೆಂಗಳೂರು-ಗುಜರಾತ್, ರಾತ್ರಿ 9 ಗಂಟೆಗೆ