ಬಗೆದಷ್ಟೂ ಹೊರಬರುವ ಕರ್ನಾಟಕ ಫುಟ್ಬಾಲ್‌ ಸ್ಟೇಡಿಯಂ ಕರಾಳ ಮುಖ! ಕ್ರೀಡಾಂಗಣದಲ್ಲಿನ ಅವ್ಯವಸ್ಥೆಗಳ ವಿರುದ್ಧ ಆಕ್ರೋಶ

| Published : Aug 22 2024, 12:50 AM IST / Updated: Aug 22 2024, 04:38 AM IST

ಬಗೆದಷ್ಟೂ ಹೊರಬರುವ ಕರ್ನಾಟಕ ಫುಟ್ಬಾಲ್‌ ಸ್ಟೇಡಿಯಂ ಕರಾಳ ಮುಖ! ಕ್ರೀಡಾಂಗಣದಲ್ಲಿನ ಅವ್ಯವಸ್ಥೆಗಳ ವಿರುದ್ಧ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿಲ್ಲದೇ ಪರದಾಡುತ್ತಿರುವ ಮಹಿಳಾ ಆಟಗಾರ್ತಿಯರು. ಲೀಗ್‌ನಲ್ಲಿ ಆಡಲು ಹಿಂದೇಟು. ಡ್ರೆಸ್ಸಿಂಗ್‌, ವಿಶ್ರಾಂತಿ ಕೋಣೆ ಸರಿಯಿಲ್ಲ. ಶೌಚಕ್ಕಾಗಿ ಪಕ್ಕದ ಮಾಲ್‌ಗೆ ತೆರಳುವ ಹಲವು ಆಟಗಾರ್ತಿಯರು. ಕ್ಲಬ್‌ ಮಾಲಕರಿಂದಲೇ ದೂರು

 ಬೆಂಗಳೂರು :  ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ)ಯ ಕರಾಳ ಮುಖಗಳು ಬಗೆದಷ್ಟೂ ಹೊರಬರುತ್ತಲೇ ಇದೆ. ಕಳೆದ 3 ದಿನಗಳಿಂದ ‘ಕನ್ನಡಪ್ರಭ’ ಪತ್ರಿಕೆಯು ಸ್ಟೇಡಿಯಂ ಬಗ್ಗೆ ಸತತವಾಗಿ ಪ್ರಕಟಿಸುತ್ತಿರುವ ವರದಿಗಳನ್ನು ಗಮನಿಸಿ, ಪೋಷಕರು ಮಾತ್ರವಲ್ಲದೇ ಆಟಗಾರ್ತಿಯರು, ಕ್ಲಬ್‌ಗಳ ಮಾಲಕರು ಕೂಡಾ ಕ್ರೀಡಾಂಗಣದಲ್ಲಿನ ಅವ್ಯವಸ್ಥೆಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

 ಕ್ರೀಡಾಂಗಣದ ಕಳಪೆ ನಿರ್ವಹಣೆ ವಿರುದ್ಧ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿರುವ ಕ್ರೀಡಾಂಗಣದಲ್ಲಿ ಸದ್ಯ ಕರ್ನಾಟಕ ಮಹಿಳಾ ಫುಟ್ಬಾಲ್‌ ಲೀಗ್ ನಡೆಯುತ್ತಿದೆ. ಜು.22ರಿಂದ ಲೀಗ್‌ ಆರಂಭಗೊಂಡಿದ್ದು, 10 ತಂಡಗಳು ಕಣದಲ್ಲಿವೆ. ಆದರೆ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರ್ತಿಯರು ಕ್ರೀಡಾಂಗಣದಲ್ಲಿನ ಮೂಲಸೌಕರ್ಯ ಕೊರತೆಯಿಂದ ರೋಸಿ ಹೋಗಿದ್ದಾರೆ.

ಕ್ರೀಡಾಂಗಣದಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ಸಣ್ಣದಾಗಿರುವ ಶೌಚಾಲಯ ಸೂಕ್ತ ನಿರ್ವಹಣೆಯಿಲ್ಲದೆ ಗಬ್ಬು ನಾರುತ್ತಿದೆ. ಅಲ್ಲಲ್ಲಿ ನೀರು ನಿಂತಿದ್ದು, ಬಕೆಟ್‌ಗಳು ಕೂಡಾ ಒಡೆದು ಹೋಗಿವೆ. ಇನ್ನು ಶೌಚಾಲಯದ ಬಾಗಿಲುಗಳು ಕೂಡಾ ಬೀಳುವ ಸ್ಥಿತಿಯಲ್ಲಿದೆ. ‘ಲೀಗ್‌ ಆರಂಭದಲ್ಲಿ ಶೌಚಾಲಯದಲ್ಲಿ ನೀರು ಇರಲಿಲ್ಲ. ಅದರ ಬಗ್ಗೆ ದೂರು ನೀಡಿದ ಬಳಿಕ ಈಗ ನೀರು ಬರುತ್ತಿದೆ. ಆದರೆ ಸ್ವಚ್ಛತೆ ಇಲ್ಲ’ ಎಂದು ಆಟಗಾರ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ರೀಡಾಂಗಣದಲ್ಲಿ ಡ್ರೆಸ್ಸಿಂಗ್‌ ಕೋಣೆ ಎಂದು ಕರೆಯಲ್ಪಡುವ ಕೋಣೆಯ ಸ್ಥಿತಿಯಂತೂ ಶೋಚನೀಯ. ಸರಿಯಾದ ಬಾಗಿಲುಗಳು ಕೂಡಾ ಇಲ್ಲದ, ಸೋರುತ್ತಿರುವ, ಕುರ್ಚಿಗಳೂ ಇಲ್ಲದ ಕೋಣೆಯಲ್ಲೇ ಆಟಗಾರರು ತಮ್ಮ ವಸ್ತ್ರಗಳನ್ನು ಬದಲಿಸಬೇಕಿದೆ

. ಅಲ್ಲಲ್ಲಿ ಇಲಿಗಳು ಅಡ್ಡಾಡುತ್ತಿದ್ದು, ಪಾರಿವಾಳಗಳ ವಾಸ ಸ್ಥಾನವಾಗಿ ಪರಿವರ್ತನೆಗೊಂಡಿದೆ. ಪುರುಷ ಆಟಗಾರರು ಹೇಗೋ ಸುಧಾರಿಸಿಕೊಂಡರೂ, ಸದ್ಯ ಮಹಿಳಾ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರ್ತಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ‘ಕನ್ನಡಪ್ರಭ’ ಪರಿಶೀಲನೆ ನಡೆಸಿದ್ದು, ಬಳಸಲು ಯೋಗ್ಯ ರೀತಿಯಲ್ಲಿಲ್ಲ. ಕೆಲ ಆಟಗಾರ್ತಿಯರು, ಪೋಷಕರು ಕೂಡಾ ಶೌಚಾಲಯ, ಡ್ರೆಸ್ಸಿಂಗ್‌ ಕೋಣೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಲೀಗ್‌ ಪಂದ್ಯಗಳ ವೇಳೆ ಶೌಚಕ್ಕಾಗಿ ಮಾಲ್‌ ಬಳಕೆ!

ರಾಜ್ಯ ಮಹಿಳಾ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳ ಕೆಲ ಆಟಗಾರ್ತಿಯರು ಶೌಚಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ ಪ್ರತಿಷ್ಠಿತ ಮಾಲ್‌ಗೆ ತೆರಳುತ್ತಿರುವ ವಿಚಾರ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ‘ಕ್ರೀಡಾಂಗಣದಲ್ಲಿ ಸೂಕ್ತ ಶೌಚಾಲಯದ ವ್ಯವಸ್ಥೆಯಿಲ್ಲ. ಹೀಗಾಗಿ ಆಟಗಾರ್ತಿಯರು ಪಕ್ಕದಲ್ಲೇ ಇರುವ ಮಾಲ್‌ಗೆ ಹೋಗಿ ಬರಬೇಕು. ಅವರಿಗೆ ಬೇರೆ ದಾರಿಯಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಕ್ಲಬ್‌ ನಿರ್ದೇಶಕರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. 

ಲೀಗ್‌ನಲ್ಲಿ ಆಡಲು ಹಿಂದೇಟು

ಕ್ರೀಡಾಂಗಣದ ದುಸ್ಥಿತಿ ಬಗ್ಗೆ ಸದ್ಯ ಆಟಗಾರ್ತಿರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಲೀಗ್‌ನಲ್ಲಿ ಆಡಲು ಹಿಂದೇಟು ಹಾಕುತ್ತಿದ್ದಾರೆ. 10 ಕ್ಲಬ್‌ಗಳಿಂದ 200ರಷ್ಟು ಆಟಗಾರ್ತಿಯರು, ಸಹಾಯಕ ಸಿಬ್ಬಂದಿ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಶೌಚಾಲಯ, ವಿಶ್ರಾಂತಿ ಕೋಣೆ, ಡ್ರೆಸ್ಸಿಂಗ್‌ ರೂಮ್‌ ವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಹಲವು ಆಟಗಾರ್ತಿಯರು ಲೀಗ್‌ನಲ್ಲಿ ಆಡಲು ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.

ಮಾತನಾಡಿದರೆ ಸಮಸ್ಯೆ ಆಗುತ್ತೆ: ಪೋಷಕರ ಅಳಲು

ರಾಜ್ಯ ಸಂಸ್ಥೆಯ ಕ್ರೀಡಾಂಗಣದ ಅವ್ಯವಸ್ಥೆ ಬಗೆಗಿನ ವರದಿ ಬಳಿಕ ಹಲವು ಕೋಚ್‌ಗಳು, ಪೋಷಕರು, ಕ್ರೀಡಾಭಿಮಾನಿಗಳು ‘ಕನ್ನಡಪ್ರಭ’ ಪತ್ರಿಕೆಯನ್ನು ಸಂಪರ್ಕಿಸುತ್ತಿದ್ದಾರೆ. ಕ್ರೀಡಾಂಗಣದಲ್ಲಿನ ತಮ್ಮ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ. ಆದರೆ ತಮ್ಮ ಹೆಸರು ಬಳಸದಂತೆ ಮನವಿ ಮಾಡುತ್ತಿದ್ದಾರೆ. ‘ಹೆಸರು ಹಾಕಬೇಡಿ ಸರ್‌. ಕ್ರೀಡಾಂಗಣದ ಬಗ್ಗೆ ಮಾತನಾಡಿದರೆ ಸಮಸ್ಯೆಯಾಗುತ್ತದೆ. ಸುಮ್ಮನೆ ಮಕ್ಕಳ ಭವಿಷ್ಯ ಹಾಳು ಮಾಡಬೇಕಾಗುತ್ತದೆ. ಅವರಿಂದ(ಕೆಎಸ್‌ಎಫ್‌ಎ) ತೊಂದರೆ ಎದುರಿಸಬೇಕಾಗುತ್ತದೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಬಟ್ಟೆ ಬದಲಾಯಿಸುವ ಕೋಣೆಗಳಲ್ಲಿ ಇಲಿಗಳು ತುಂಬಿವೆ. ಪಾರಿವಾಳಗಳು ಗೂಡು ಕಟ್ಟಿವೆ. ಕುರ್ಚಿಗಳು ಒಡೆದ ಸ್ಥಿತಿಯಲ್ಲಿವೆ. ಅಲ್ಲಿ ಕೂರಲು ಸರಿಯಾದ ವ್ಯವಸ್ಥೆಯಿಲ್ಲ. ತರಬೇತಿ ಮುಗಿಸಿ ಬಂದಾಗ ಬ್ಯಾಗ್‌ಗಳ ಮೇಲೆ ಹಕ್ಕಿಗಳ ಹಿಕ್ಕೆಗಳಿದ್ದವು.

- ಹೆಸರು ಹೇಳಲಿಚ್ಛಿಸದ ಕ್ಲಬ್‌ ನಿರ್ದೇಶಕ

ಹಾರ್ಟ್‌ ಅಟ್ಯಾಕ್‌ ಆಗ್ಬಹುದು!

ಶೌಚಾಲಯದ ಶೋಚನೀಯ ಸ್ಥಿತಿ ಬಗ್ಗೆ ವಿವರಿಸಿರುವ ಕ್ಲಬ್‌ ನಿರ್ದೇಶಕ, ಕ್ರೀಡಾಂಗಣದಲ್ಲಿರುವ ಶೌಚಾಲಯಗಳನ್ನು ನೋಡಿದರೆ ಹೃದಯಾಘಾತ ಆಗುವ ರೀತಿಯಲ್ಲಿದೆ ಎಂದಿದ್ದಾರೆ. ಬಳಕೆಗೆ ಯೋಗ್ಯವಲ್ಲದ, ಗಬ್ಬು ನಾರುವ ಶೌಚಾಲಯಗಳಿಗೆ ಹೋಗುವಾಗಲೇ ವಾಕರಿಕೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.