ಐಸಿಸಿ ಟಿ20 ವಿಶ್ವಕಪ್‌ಗೆ ಎದುರಾಗಿದೆಯಂತೆ ಭಯೋತ್ಪಾದಕರ ಭೀತಿ. ಹೀಗೆಂದು ಹೇಳಿದ್ದಾರೆ ಟ್ರಿನಿಡಾಡ್‌ ದೇಶದ ಪ್ರಧಾನಿ. ವಿಂಡೀಸ್‌ನಲ್ಲಿ ನಡೆಯಲಿರುವ ಪಂದ್ಯಗಳಿಗೆ ಭೀತಿ. ನಮ್ಮ ಭದ್ರತಾ ವ್ಯವಸ್ಥೆ ಬಲಿಷ್ಠವಾಗಿದೆ, ಯಶಸ್ವಿಯಾಗಿ ವಿಶ್ವಕಪ್‌ ಆಯೋಜಿಸುತ್ತೇವೆ ಎನ್ನುತ್ತಿದೆ ಐಸಿಸಿ.

ಪೋರ್ಟ್‌ ಆಫ್‌ ಸ್ಪೇನ್‌: 2024ರ ಜೂ.1ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭಯೋತ್ಪಾದಕರ ದಾಳಿ ಭೀತಿ ಇದೆ ಎಂದು ಟ್ರಿನಿಡಾಡ್‌ ದೇಶದ ಪ್ರಧಾನಿ ಹೇಳಿದ್ದಾರೆ.

‘ಕೆರಿಬಿಯನ್‌ ದ್ವೀಪಗಳಲ್ಲಿ (ವೆಸ್ಟ್‌ಇಂಡೀಸ್‌) ನಡೆಯಲಿರುವ ಪಂದ್ಯಗಳಿಗೆ ಭೀತಿ ಎದುರಾಗಲಿದೆ. 21ನೇ ಶತಮಾನದಲ್ಲಿ ಭಯೋತ್ಪಾದಕರ ಭೀತಿ ಬೇರೆ ಬೇರೆ ರೀತಿಗಳಲ್ಲಿ ಇದ್ದೇ ಇರುತ್ತದೆ’ ಎಂದು ಪ್ರಧಾನಿ ಡಾ.ಕೀತ್‌ ರೋವ್ಲಿ ಹೇಳಿದ್ದಾರೆ.ರೋವ್ಲಿ ಯಾವ ಸಂಘಟನೆಯ ಹೆಸರನ್ನೂ ಬಹಿರಂಗಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ ಇಸ್ಲಾಮಿಲ್ ಸ್ಟೇಟ್‌ ತನ್ನ ಮುಖವಾಣಿಯ ಮೂಲಕ ಬೆದರಿಕೆ ನೀಡಿದೆ ಎಂದು ಹೇಳಲಾಗುತ್ತಿದೆ.

ನಮ್ಮ ಭದ್ರತಾ ವ್ಯವಸ್ಥೆ ಸುರಕ್ಷಿತ: ಐಸಿಸಿ ಸ್ಪಷ್ಟನೆ

ಭಯೋತ್ಪಾದಕರ ಭೀತಿ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಪ್ರತಿಕ್ರಿಯಿಸಿದೆ. ‘ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಪ್ರತಿಯೊಬ್ಬರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರಲಿದೆ. ನಮ್ಮ ಭದ್ರತಾ ವ್ಯವಸ್ಥೆಯೂ ಅತ್ಯಂತ ಗಟ್ಟಿಮುಟ್ಟಾಗಿದೆ. ಯಾವುದೇ ಸಮಸ್ಯೆ ಎದುರಾದರೂ ಅದನ್ನು ನಿಭಾಯಿಸಿ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲು ಸನ್ನದ್ಧವಾಗಿದ್ದೇವೆ’ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಿಂದ ಸ್ಥಳಾಂತರ?

ವಿಂಡೀಸ್‌ಗೆ ಉತ್ತರ ಪಾಕಿಸ್ತಾನದಲ್ಲಿ ನೆಲೆಯೂರಿರುವ ಉಗ್ರ ಸಂಘಟನೆ ಒಂದರಿಂದ ಬೆದರಿಕೆ ಬಂದಿದೆ ಎನ್ನಲಾಗುತ್ತಿದ್ದು, 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಐಸಿಸಿ ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬಹುದು ಎಂದು ಹೇಳಲಾಗುತ್ತಿದೆ.