ಸಾರಾಂಶ
ನವದೆಹಲಿ: ಐಪಿಎಲ್‌ನ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಈ ಋತುವಿನಲ್ಲಿ ಹೊಸ ಮಾಲಿಕತ್ವ ಪಡೆಯುವ ಸಾಧ್ಯತೆಯಿದೆ. ಔಷಧ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಟೊರೆಂಟ್ ಗ್ರೂಫ್ ಗುಜರಾತ್ ಫ್ರಾಂಚೈಸಿಯ ಶೇ.67ರಷ್ಟು ಪಾಲುದಾರಿಕೆ ಖರೀದಿಸಲು ಮುಂದಾಗಿದೆ.2021ರಲ್ಲಿ ಸಿವಿಸಿ ಕ್ಯಾಪಿಟಲ್ಸ್ 5626 ಕೋಟಿ ರು. ನೀಡಿ ಗುಜರಾತ್ ಟೈಟಾನ್ಸ್ ತಂಡವನ್ನು ಖರೀದಿಸಿತ್ತು. ಈ ಗುಂಪಿನ ಏಕೈಕ ಮಾಲೀಕರ ಲಾಕ್-ಇನ್ ಅವಧಿ ಫೆಬ್ರವರಿ 2025ರಲ್ಲಿ ಕೊನೆಗೊಳ್ಳಲಿದೆ. ಆ ಬಳಿಕ ತಂಡವನ್ನು ಮಾರಾಟ ಮಾಡಬಹುದಾಗಿದೆ. ಇದೀಗ ಅಹಮದಾಬಾದ್ ಮೂಲದ ಟೊರೆಂಟ್ ಸಂಸ್ಥೆಯು ಸಿವಿಎಸ್‌ನಿಂದ ಶೇ.67ರಷ್ಟು ಪಾಲನ್ನು ಖರೀದಿಸಲಿದೆ. ಈಗಾಗಲೇ ಒಪ್ಪಂದ ಪೂರ್ಣಗೊಂಡಿದ್ದು, ಐಪಿಎಲ್ ಆಡಳಿತ ಮಂಡಳಿಯಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ. ಮಾರ್ಚ್ 21ರಿಂದ ಆರಂಭವಾಗಲಿರುವ ಮುಂಬರುವ ಐಪಿಎಲ್‌ಗೂ ಮುನ್ನ ಗುಜರಾತ್ ತಂಡ ಟೊರೆಂಟ್ ಸಂಸ್ಥೆಯ ನಿಯಂತ್ರಣಕ್ಕೆ ಒಳಪಡಲಿದೆ.2021ರಲ್ಲಿ ಬಿಸಿಸಿಐ ಎರಡು ಹೊಸ ತಂಡಗಳಿಗೆ ಬಿಡ್‌ಗಳನ್ನು ಆಹ್ವಾನಿಸಿದಾಗ ಟೊರೆಂಟ್ ಆಸಕ್ತಿ ತೋರಿಸಿತ್ತು. ಆದರೆ ಬಿಡ್ ಗೆದ್ದಿರಲಿಲ್ಲ.