ಭಾರತದ ಕೈತಪ್ಪಿದ ಕಿರಿಯರ ಏಷ್ಯಾ ಕಪ್‌ : ಫೈನಲ್‌ನಲ್ಲಿ ಬಾಂಗ್ಲಾ ವಿರುದ್ಧ 59 ರನ್‌ ಸೋಲು

| Published : Dec 09 2024, 12:46 AM IST / Updated: Dec 09 2024, 05:40 AM IST

ಸಾರಾಂಶ

ಬಾಂಗ್ಲಾ ಸತತ 2ನೇ ಬಾರಿ ಟ್ರೋಫಿಗೆ ಮುತ್ತಿಟ್ಟಿತು. ಭಾರತ ಅಂಡರ್‌-19 ಏಷ್ಯಾಕಪ್‌ ಫೈನಲ್‌ನಲ್ಲಿ ಸೋತಿದ್ದು ಇದೇ ಮೊದಲು. ಈ ಹಿಂದೆ 8 ಬಾರಿಯೂ ಗೆದ್ದಿತ್ತು.

ದುಬೈ: ಅಂಡರ್‌-19 ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ 9ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳುವ ಭಾರತದ ಕನಸು ಭಗ್ನಗೊಂಡಿದೆ. ಭಾನುವಾರ ನಡೆದ 11ನೇ ಆವೃತ್ತಿ ಟೂರ್ನಿಯ ಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾದೇಶ ವಿರುದ್ಧ 59 ರನ್‌ ಆಘಾತಕಾರಿ ಸೋಲು ಎದುರಾಯಿತು. 

ಬಾಂಗ್ಲಾ ಸತತ 2ನೇ ಬಾರಿ ಟ್ರೋಫಿಗೆ ಮುತ್ತಿಟ್ಟಿತು.ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 49.1 ಓವರ್‌ಗಳಲ್ಲಿ 198 ರನ್‌ಗೆ ಆಲೌಟಾಯಿತು. ರಿಜಾನ್‌ ಹೊಸನ್‌ 47, ಮೊಹಮದ್‌ ಶಿಹಾಬ್‌ 40, ಫರೀದ್‌ ಹಸನ್‌ 39 ರನ್‌ ಗಳಿಸಿದರು. ಭಾರತದ ಪರ ಯುಧಜಿತ್‌ ಗುಹಾ, ಚೇತನ್‌ ಶರ್ಮಾ, ಹಾರ್ದಿಕ್‌ ರಾಜ್‌ ತಲಾ 2 ವಿಕೆಟ್‌ ಕಿತ್ತರು.ಸುಲಭ ಗುರಿ ಸಿಕ್ಕರೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಭಾರತ 35.2 ಓವರ್‌ಗಳಲ್ಲಿ 139 ರನ್‌ಗೆ ಆಲೌಟಾಯಿತು. 

ನಾಯಕ ಮೊಹಮದ್‌ ಅಮಾನ್‌(26) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು. ಹಾರ್ದಿಕ್‌ ರಾಜ್‌ 24, ಸಿದ್ಧಾರ್ಥ್‌ 20, ಕಾರ್ತಿಕೇಯ 21 ರನ್‌ ಗಳಿಸಿದರು. ಇಕ್ಬಾಸ್ ಹೊಸಲ್‌ 3 ವಿಕೆಟ್‌ ಕಿತ್ತರು.ಸ್ಕೋರ್‌: ಬಾಂಗ್ಲಾ 49.1 ಓವರಲ್ಲಿ 198/10 (ರಿಜಾನ್‌ 47, ಶಿಹಾಬ್‌ 40, ಯುಧಜಿತ್‌ 2-29), ಭಾರತ 35.2 ಓವರಲ್ಲಿ 139/10 (ಅಮಾನ್‌ 26, ಇಕ್ಬಾಲ್‌ 3-24)

ಪಂದ್ಯಶ್ರೇಷ್ಠ: ಇಕ್ಬಾಲ್‌ ಹೊಸೈನ್.

01ನೇ ಸೋಲು: ಭಾರತ ಅಂಡರ್‌-19 ಏಷ್ಯಾಕಪ್‌ ಫೈನಲ್‌ನಲ್ಲಿ ಸೋತಿದ್ದು ಇದೇ ಮೊದಲು. ಈ ಹಿಂದೆ 8 ಬಾರಿಯೂ ಗೆದ್ದಿತ್ತು.

02ನೇ ಟ್ರೋಫಿ: ಬಾಂಗ್ಲಾ ಸತತ 2ನೇ ಟ್ರೋಫಿ ಎತ್ತಿ ಹಿಡಿಯಿತು. 2+ ಬಾರಿ ಕಪ್‌ ಗೆದ್ದ ಕೇವಲ 2ನೇ ತಂಡ.