ಲಖನೌ ನಾಯಕತ್ವಕ್ಕೆ ರಾಜೀನಾಮೆ ನೀಡ್ತಾರಾ ಕೆ.ಎಲ್‌.ರಾಹುಲ್‌?

| Published : May 10 2024, 01:30 AM IST / Updated: May 10 2024, 04:22 AM IST

ಸಾರಾಂಶ

ಹರಾಜಿಗೂ ಮುನ್ನ ರಾಹುಲ್‌ರನ್ನು ತಂಡದಿಂದ ಕೈಬಿಡಲು ಫ್ರಾಂಚೈಸಿ ನಿರ್ಧರಿಸಿದೆ ಎಂದೂ ಹೇಳಲಾಗುತ್ತಿದೆ. ಆದರೆ 2 ಪಂದ್ಯ ಬಾಕಿ ಇರುವುದರಿಂದ ನಾಯಕತ್ವದಲ್ಲಿ ಮುಂದುವರಿಯಲೂಬಹುದು.

ನವದೆಹಲಿ: ಲಖನೌ ಸೂಪರ್‌ ಜೈಂಟ್ಸ್ ತಂಡದ ನಾಯಕತ್ವಕ್ಕೆ ಕೆ.ಎಲ್‌.ರಾಹುಲ್‌ ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ ಅವರನ್ನು 2025ರ ಮೆಗಾ ಹರಾಜಿಗೂ ಫ್ರಾಂಚೈಸಿಯು ತಂಡದಿಂದ ಕೈಬಿಡಲಿದೆ ಎಂದು ಹೇಳಲಾಗುತ್ತಿದೆ. 

2022ರ ಹರಾಜಿಗೂ ಮುನ್ನ ರಾಹುಲ್‌ರನ್ನು ₹17 ಕೋಟಿ ನೀಡಿ ಲಖನೌ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಈ ಬಾರಿ ತಂಡ ಸಾಧಾರಣ ಪ್ರದರ್ಶನ ತೋರುತ್ತಿದ್ದು, ಸ್ವತಃ ರಾಹುಲ್‌ ಕೂಡಾ ನಿಧಾನ ಆಟವಾಡುತ್ತಿದ್ದಾರೆ. ಅವರು 12 ಪಂದ್ಯಗಳಲ್ಲಿ 460 ರನ್‌ ಸಿಡಿಸಿದ್ದರೂ, ಸ್ಟ್ರೈಕ್‌ರೇಟ್‌ 136.09 ಇದೆ. ಅವರ ಪ್ರದರ್ಶನದ ಬಗ್ಗೆ ತಂಡದ ಮಾಲಿಕ ಸಂಜೀವ್‌ ಗೋಯೆಂಕಾ ಅತೃಪ್ತಿ ಹೊಂದಿದ್ದು, ಹೀಗಾಗಿ ಮುಂದಿನ 2 ಪಂದ್ಯಗಳಲ್ಲಿ ನಾಯಕತ್ವ ತೊರೆದು ಕೇವಲ ಬ್ಯಾಟಿಂಗ್‌ನತ್ತ ಗಮನ ಹರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

ರಾಹುಲ್‌ ಹುದ್ದೆ ತ್ಯಜಿಸಿದರೆ ಪೂರನ್‌ ನಾಯಕತ್ವ ವಹಿಸುವ ನಿರೀಕ್ಷೆಯಿದೆ. ಈ ಮೊದಲು 2016, 2017ರಲ್ಲಿ ಗೋಯೆಂಕಾ ರೈಸಿಂಗ್‌ ಪುಣೆ ತಂಡದ ಮಾಲಿಕತ್ವ ಹೊಂದಿದ್ದಾಗ 2017ರ ಆವೃತ್ತಿಗೂ ಮುನ್ನ ಧೋನಿಯನ್ನು ನಾಯಕತ್ವದಿಂದ ಕಿತ್ತು ಹಾಕಿ, ಸ್ಮಿತ್‌ಗೆ ಹೊಣೆ ನೀಡಿದ್ದರು.

ರಾಹುಲ್‌ಗೆ ಮಾಲಿಕ ತರಾಟೆ: ಫ್ಯಾನ್ಸ್‌ ಗರಂ

ಹೈದ್ರಾಬಾದ್‌ ವಿರುದ್ಧ ಹೀನಾಯ ಸೋಲಿನ ಬಳಿಕ ರಾಹುಲ್‌ರನ್ನು ಲಖನೌ ತಂಡದ ಮಾಲೀಕ ಸಂಜೀವ್‌ ಗೋಯೆಂಕಾ ಅವರು ಕ್ರೀಡಾಂಗಣದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌ ಆಗಿದ್ದು, ಗೋಯೆಂಕಾ ವರ್ತನೆ ವಿರುದ್ಧ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.