ಸಾರಾಂಶ
ಊರ್ವಿಲ್ ಪಟೇಲ್ ಮತ್ತೊಂದು ಸೆಂಚುರಿ ಧಮಾಕ. ಮುಷ್ತಾಕ್ ಅಲಿ ಟಿ20 ಟೂರ್ನಿಯ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್. 6 ದಿನಗಳ ಹಿಂದಷ್ಟೇ 28 ಎಸೆತದಲ್ಲಿ ಶತಕ ಬಾರಿಸಿದ್ದ ಗುಜರಾತ್ ಬ್ಯಾಟರ್.
ಇಂದೋರ್: 6 ದಿನಗಳ ಹಿಂದಷ್ಟೇ 28 ಎಸೆತಗಳಲ್ಲಿ ಶತಕ ಸಿಡಿಸಿ, ಭಾರತೀಯ ಆಟಗಾರನಿಂದ ಅತಿವೇಗದ ಟಿ20 ಶತಕದ ದಾಖಲೆ ಬರೆದಿದ್ದ ಗುಜರಾತ್‌ನ ಊರ್ವಿಲ್ ಪಟೇಲ್, ಇದೀಗ ಮತ್ತೊಂದು ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಉತ್ತರಾಖಂಡ ವಿರುದ್ಧ ಮಂಗಳವಾರ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಪಂದ್ಯದಲ್ಲಿ ಕೇವಲ 36 ಎಸೆತದಲ್ಲಿ ಶತಕ ಬಾರಿಸಿದರು.
ಈ ಮೂಲಕ 40ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ ಕೇವಲ 2ನೇ ಆಟಗಾರ ಎನ್ನುವ ದಾಖಲೆ ಬರೆದರು. ದ.ಆಫ್ರಿಕಾದ ಡೇವಿಡ್ ಮಿಲ್ಲರ್ 35 ಹಾಗೂ 38 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಉತ್ತರಾಖಂಡ 7 ವಿಕೆಟ್‌ಗೆ 182 ರನ್ ಗಳಿಸಿತು. ಊರ್ವಿಲ್ 41 ಎಸೆತದಲ್ಲಿ 11 ಸಿಕ್ಸರ್, 8 ಬೌಂಡರಿಯೊಂದಿಗೆ ಔಟಾಗದೆ 115 ರನ್ ಸಿಡಿಸಿದ ಪರಿಣಾಮ ಗುಜರಾತ್ 13.1 ಓವರಲ್ಲೇ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.