ಟಿ20 ವಿಶ್ವಕಪ್‌: ಪಾಕಿಸ್ತಾನಕ್ಕೆ ಅಮೆರಿಕ ‘ಸೂಪರ್‌’ ಶಾಕ್‌!

| Published : Jun 08 2024, 12:37 AM IST / Updated: Jun 08 2024, 04:43 AM IST

ಸಾರಾಂಶ

ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ಗೆ ಬೆಲೆತೆತ್ತ ಪಾಕಿಸ್ತಾನ. ಪಾಕ್‌ 159/7, ಯುಎಸ್‌ಎ 159/3 । ಪಂದ್ಯ ಟೈ, ಸೂಪರ್‌ ಓವರ್‌ನಲ್ಲಿ ಅಮೆರಿಕಕ್ಕೆ ಒಲಿದ ಗೆಲುವು.

ಟೆಕ್ಸಾಸ್‌: ಟ್ರೋಫಿ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿದಿದ್ದ ಮಾಜಿ ಚಾಂಪಿಯನ್‌ ಪಾಕಿಸ್ತಾನಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಎದುರಾಗಿದೆ. 

ಆತಿಥೇಯ ಅಮೆರಿಕ ವಿರುದ್ಧ ಗುರುವಾರ ರಾತ್ರಿ ಸುಲಭ ಗೆಲುವಿನೊಂದಿಗೆ ಶುಭಾರಂಭದ ನಿರೀಕ್ಷೆಯಲ್ಲಿದ್ದ ತಂಡ ಕಳಪೆ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ನಿಂದಾಗಿ ಸೂಪರ್‌ ಓವರ್‌ನಲ್ಲಿ ಪರಾಭವಗೊಂಡಿದೆ. 

ಸತತ 2ನೇ ಗೆಲುವಿನೊಂದಿಗೆ ಅಮೆರಿಕ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.ಮೊದಲು ಬ್ಯಾಟ್‌ ಮಾಡಿದ ಪಾಕ್‌ ಆರಂಭಿಕ ಆಘಾತದಿಂದ ಚೇತರಿಸಿ 7 ವಿಕೆಟ್‌ಗೆ 159 ರನ್‌ ಕಲೆಹಾಕಿತು. 4.4 ಓವರಲ್ಲಿ 26 ರನ್‌ ಗಳಿಸಿದ್ದಾಗಲೇ ಪ್ರಮುಖ 3 ರನ್‌ ವಿಕೆಟ್‌ ಕಳೆದುಕೊಂಡ ತಂಡಕ್ಕೆ ಆಸರೆಯಾಗಿದ್ದು ನಾಯಕ ಬಾಬರ್‌ ಆಜಂ(44) ಹಾಗೂ ಶದಾಬ್‌ ಖಾನ್‌(40). ರಕ್ಷಣಾತ್ಮಕ ಆಟದ ಮೂಲಕ ಈ ಜೋಡಿ ತಂಡಕ್ಕೆ ಚೇತರಿಕೆ ನೀಡಿದರೆ, ಶಾಹೀನ್‌ ಅಫ್ರಿದಿ(23), ಇಫ್ತಿಕಾರ್‌(18) ಆಟ ತಂಡವನ್ನು 150ರ ಗಡಿ ದಾಟಿಸಿತು. ಕರ್ನಾಟಕ ಮೂಲಕ ನೋಸ್ತುಷ್‌ ಕೆಂಜಿಗೆ 3 ವಿಕೆಟ್‌ ಕಿತ್ತರು.

ಅಮೋಘ ಆಟ: ತನ್ನ ಬೌಲರ್‌ಗಳ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದ ಪಾಕ್‌, ಅಮೆರಿಕವನ್ನು ಸುಲಭದಲ್ಲಿ ಕಟ್ಟಿಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಪಾಕ್‌ಗೆ ಆತ್ಮವಿಶ್ವಾಸಕ್ಕೆ ಆತಿಥೇಯ ತಂಡದ ಬ್ಯಾಟರ್‌ಗಳು ತಣ್ಣೀರೆರಚಿದರು. ನಾಯಕ ಮೋನಂಕ್‌ ಪಟೇಲ್‌(38 ಎಸೆತಗಳಲ್ಲಿ 50), ಆ್ಯಂಡ್ರೀಸ್‌ ಗೌಸ್‌(35), ಕಳೆದ ಪಂದ್ಯದ ಹೀರೊ ಆ್ಯರೊನ್‌ ಜಾನ್ಸ್‌(ಔಟಾಗದೆ 36) ಹಾಗೂ ನಿತೀಶ್‌ ಕುಮಾರ್‌(ಔಟಾಗದೆ 14) ಅತ್ಯಾಕರ್ಷಕ ಆಟ ಪಂದ್ಯದಿಂದಾಗಿ ಪಂದ್ಯ ಟೈ ಆಯಿತು. ರೌಫ್‌ರ ಕೊನೆ ಎಸೆತದಲ್ಲಿ 5 ರನ್‌ ಬೇಕಿದ್ದಾಗ ನಿತೀತ್ ಬೌಂಡರಿ ಬಾರಿಸಿದರು.ಸ್ಕೋರ್‌: ಪಾಕಿಸ್ತಾನ 159/7 (ಆಜಂ 44, ಶದಾಬ್‌ 40, ನೋಸ್ತುಷ್‌ 3-30), ಅಮೆರಿಕ 159/3 (ಮೋನಂಕ್‌ 50, ಜಾನ್ಸ್‌ 36*, ಅಮೀರ್‌ 1-25)

ರೋಚಕ ಸೂಪರ್‌ ಓವರ್‌

ಸೂಪರ್‌ ಓವರಲ್ಲಿ ಅಮೆರಿಕ ಮೊದಲು ಬ್ಯಾಟ್‌ ಮಾಡಿತು. ಅಮೀರ್‌ರ ಮೊದಲ 3 ಎಸೆತಗಳಲ್ಲಿ ಜಾನ್ಸ್‌ ಬೌಂಡರಿ ಸೇರಿ 7 ರನ್‌ ಸಿಡಿಸಿದರು. ಬಳಿಕ ವೈಡ್‌ ಜೊತೆ ಮತ್ತೊಂದು ರನ್‌ ಬಂತು. 4ನೇ ಎಸೆತದಲ್ಲಿ ಸಿಂಗಲ್‌ ಪಡೆದರೆ, 5ನೇ ಎಸೆತ ಮತ್ತೆ ವೈಡ್‌. ಅದರಲ್ಲೂ ಒಂದು ಹೆಚ್ಚುವರಿ ರನ್. 5ನೇ ಎಸೆತದಲ್ಲಿ ಜಾನ್ಸ್‌ನಿಂದ 2 ರನ್‌. 6ನೇ ಎಸೆತ ಮತ್ತೆ ವೈಡ್‌. ಓವರ್ ಥ್ರೋ ಮೂಲಕವೂ 2 ರನ್‌ ಹೆಚ್ಚುವರಿಯಾಗಿ ಲಭಿಸಿತು. ಕೊನೆ ಎಸೆತದಲ್ಲಿ 1 ರನ್‌ ಸಿಕ್ಕಿದ್ದರಿಂದ ಪಾಕ್‌ಗೆ 19 ರನ್‌ ಗುರಿ. ಸೌರಭ್‌ ನೇತ್ರವಾಲ್ಕರ್‌ರ 2ನೇ ಎಸೆತದಲ್ಲಿ ಇಫ್ರಿಕಾರ್‌ ಬೌಂಡರಿ ಬಾರಿಸಿದರೂ, 3ನೇ ಎಸೆತದಲ್ಲಿ ಔಟಾದರು. ಶದಾಬ್‌ 4ನೇ ಎಸೆತದಲ್ಲಿ ಬೌಂಡರಿ, 5ನೇ ಎಸೆತದಲ್ಲಿ 2 ರನ್‌ ದೋಚಿದರೆ, 5 ರನ್‌ ಬೇಕಿದ್ದ ಕೊನೆ ಎಸೆತದಲ್ಲಿ ಕೇವಲ 1 ರನ್‌ ಗಳಿಸಿದರು.

05ನೇ ಬಾರಿ: ಟಿ20 ವಿಶ್ವಕಪ್‌ನಲ್ಲಿ ಪಂದ್ಯ ಟೈ ಆಗಿದ್ದು ಇದು 5ನೇ ಬಾರಿ. 2007ರಲ್ಲಿ 1, 2012ರಲ್ಲಿ 2 ಹಾಗೂ ಈ ಬಾರಿ 2 ಪಂದ್ಯ ಟೈ ಆಗಿವೆ.