ಯುವರಾಜ್‌ ಸಿಂಗ್ ಭಾರತ ತಂಡದಿಂದ ಹೊರಬೀಳಲು ವಿರಾಟ್‌ ಕೊಹ್ಲಿ ಕಾರಣ : ಉತ್ತಪ್ಪ ಆರೋಪ!

| Published : Jan 11 2025, 12:47 AM IST / Updated: Jan 11 2025, 04:12 AM IST

ಸಾರಾಂಶ

ಯುವರಾಜ್ ಕಠಿಣ ಪರಿಸ್ಥಿತಿ ಎದುರಿಸಿ ಬಂದಿದ್ದರು. ಫಿಟ್ನೆಸ್ ಟೆಸ್ಟ್‌ನಲ್ಲಿ 2 ಅಂಕ ವಿನಾಯಿತಿ ಕೇಳಿದ್ದರು. ಅದಕ್ಕೆ ಕೊಹ್ಲಿ ಒಪ್ಪಲಿಲ್ಲ. ಯುವಿ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿ ಕಮ್‌ಬ್ಯಾಕ್ ಮಾಡಿದರು. ನಾಯಕತ್ವದಲ್ಲಿದ್ದವರು ಪ್ರೋತ್ಸಾಹಿಸಲಿಲ್ಲ.

ನವದೆಹಲಿ: ಕ್ಯಾನ್ಸರ್‌ನಿಂದ ಗೆದ್ದು ಟೀಂ ಇಂಡಿಯಾಗೆ ಮರಳಿದ್ದ ಕ್ರಿಕೆಟಿಗ ಯುವರಾಜ್ ಸಿಂಗ್‌ರ ಅಂತರಾಷ್ಟ್ರೀಯ ವೃತ್ತಿ ಜೀವನ ಮೊಟಕುಗೊಳ್ಳಲು ಆ ಸಂದರ್ಭದಲ್ಲಿ ತಂಡದ ನಾಯಕನಾಗಿದ್ದ ವಿರಾಟ್‌ ಕೊಹ್ಲಿ ಕಾರಣ ಎಂದು ಮಾಜಿ ಆಟಗಾರ ರಾಬಿನ್ ಉತ್ತಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಉತ್ತಪ್ಪ, ‘ಯುವರಾಜ್ ಕ್ಯಾನ್ಸರ್‌ ಸೋಲಿಸಿ, ಭಾರತ ತಂಡಕ್ಕೆ ಮರಳಿದ್ದರು. 2 ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್‌ರಂತಹ ಆಟಗಾರ ಕಷ್ಟ ಪಡುತ್ತಿರುವಾಗ ನೀವು ಅವರೊಂದಿಗೆ ಇದ್ದೀರಿ ಎಂದು ಹೇಳಬೇಕಿತ್ತು. ಆದರೆ ಹೇಳಲಿಲ್ಲ. ಯುವರಾಜ್ ಕಠಿಣ ಪರಿಸ್ಥಿತಿ ಎದುರಿಸಿ ಬಂದಿದ್ದರು. ಫಿಟ್ನೆಸ್ ಟೆಸ್ಟ್‌ನಲ್ಲಿ 2 ಅಂಕ ವಿನಾಯಿತಿ ಕೇಳಿದ್ದರು. ಅದಕ್ಕೆ ಕೊಹ್ಲಿ ಒಪ್ಪಲಿಲ್ಲ. ಯುವಿ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿ ಕಮ್‌ಬ್ಯಾಕ್ ಮಾಡಿದರು. ಆದರೆ ನಾಯಕತ್ವ ತಂಡದಲ್ಲಿದ್ದವರು ಪ್ರೋತ್ಸಾಹಿಸಲಿಲ್ಲ. ಆ ಸಮಯದಲ್ಲಿ ವಿರಾಟ್ ನಾಯಕನಾಗಿದ್ದರು. ತಮ್ಮ ಕಠಿಣ ವ್ಯಕ್ತಿತ್ವದಿಂದಾಗಿ ಎಲ್ಲವೂ ಅವರು ಅಂದುಕೊಂಡಂತೆ ನಡೆಯುತ್ತಿತ್ತು’ ಎಂದು ಉತ್ತಪ್ಪ ಹೇಳಿದ್ದಾರೆ.

ಕ್ರಿಕೆಟ್‌ಗೆ ವೇಗಿ ವರುಣ್‌ ಆ್ಯರೊನ್‌ ನಿವೃತ್ತಿ ಪ್ರಕಟ

ನವದೆಹಲಿ: ಭಾರತದ ವೇಗದ ಬೌಲರ್‌ ವರುಣ್‌ ಆ್ಯರೊನ್‌ ಶುಕ್ರವಾರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ಜಾರ್ಖಂಡ್‌ ತಂಡ ಗುಂಪು ಹಂತದಲ್ಲೇ ಹೊರಬಿದ್ದ ಬಳಿಕ 35 ವರ್ಷದ ವರುಣ್‌ ನಿವೃತ್ತಿ ಪ್ರಕಟಿಸಿದ್ದಾರೆ. 2011ರಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದ ವರುಣ್‌, ಈ ವರೆಗೂ 9 ಏಕದಿನ, 9 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. 2015ರ ಬಳಿಕ ಅವರಿಗೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿಲ್ಲ. ಕಳೆದ ವರ್ಷ ಅವರು ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು. ಅವರು 66 ಪ್ರಥಮ ದರ್ಜೆ, 88 ಲಿಸ್ಟ್‌ ಎ ಹಾಗೂ 95 ಟಿ20 ಪಂದ್ಯಗಳನ್ನಾಡಿದ್ದಾರೆ.