ಇತ್ತೀಚೆಗಷ್ಟೇ ಅವರನ್ನು ರಾಷ್ಟ್ರೀಯ ಡೋಪಿಂಗ್‌ ನಿಗ್ರಹ ಘಟಕ(ನಾಡಾ) ತಾತ್ಕಾಲಿಕ ಅಮಾನತುಗೊಳಿಸಿತ್ತು. ಸದ್ಯ ಅವರ ಮೇಲಿನ ಅಮಾನತನ್ನು ವಿಶ್ವ ಕುಸ್ತಿ ಒಕ್ಕೂಟ 2024ರ ಕೊನೆವರೆಗೂ ವಿಸ್ತರಿಸಿದೆ.

ನವದೆಹಲಿ: ಡೋಪಿಂಗ್‌ ಪರೀಕ್ಷೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಟೋಕಿಯೋ ಒಲಿಂಪಿಕ್ಸ್‌ ಕಂಚು ವಿಜೇತ, ಭಾರತದ ತಾರಾ ಕುಸ್ತಿಪಟು ಬಜರಂಗ್‌ ಪೂನಿಯಾರನ್ನು ವಿಶ್ವ ಕುಸ್ತಿ ಒಕ್ಕೂಟ ಅಮಾನತುಗೊಳಿಸಿದೆ. 

ಇದರೊಂದಿಗೆ ಬಜರಂಗ್‌ರ ಪ್ಯಾರಿಸ್‌ ಒಲಿಂಪಿಕ್ಸ್‌ ಕನಸು ಭಗ್ನಗೊಂಡಿದೆ.ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಮಾ.10ರಂದು ನಡೆದಿದ್ದ ಆಯ್ಕೆ ಟ್ರಯಲ್ಸ್‌ ಬಳಿಕ ಬಜರಂಗ್‌ ರಕ್ತದ ಮಾದರಿ ನೀಡಿರಲಿಲ್ಲ. ಹೀಗಾಗಿ ಇತ್ತೀಚೆಗಷ್ಟೇ ಅವರನ್ನು ರಾಷ್ಟ್ರೀಯ ಡೋಪಿಂಗ್‌ ನಿಗ್ರಹ ಘಟಕ(ನಾಡಾ) ತಾತ್ಕಾಲಿಕ ಅಮಾನತುಗೊಳಿಸಿತ್ತು.

 ಅಲ್ಲದೆ ಡೋಪ್‌ ಪರೀಕ್ಷೆ ಬಗ್ಗೆ ಮೇ 7ರೊಳಗೆ ಉತ್ತರಿಸಲು ಕಾಲಾವಕಾಶ ನೀಡಿತ್ತು. ಸದ್ಯ ಅವರ ಮೇಲಿನ ಅಮಾನತನ್ನು ವಿಶ್ವ ಕುಸ್ತಿ ಒಕ್ಕೂಟ 2024ರ ಕೊನೆವರೆಗೂ ವಿಸ್ತರಿಸಿದೆ. ಸದ್ಯ 65 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಬಜರಂಗ್‌ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಅಮಾನತು ಆದೇಶದಿಂದ ಅವರಿಗೆ ಆಘಾತ ಎದುರಾಗಿದೆ.

ಬ್ಯಾನ್‌ ಇದ್ರೂ ವಿದೇಶಿ ಅಭ್ಯಾಸಕ್ಕೆ ಅನುಮತಿ! 

ಬಜರಂಗ್‌ರನ್ನು ಕೆಲ ದಿನಗಳ ಹಿಂದೆಯೇ ನಾಡಾ ಅಮಾನತುಗೊಳಿಸಿತ್ತು. ಇದರ ಹೊರತಾಗಿಯೂ ಬಜರಂಗ್‌ ವಿದೇಶದಲ್ಲಿ ಅಭ್ಯಾಸ ನಡೆಸಲು ಭಾರತೀಯ ಕ್ರೀಡಾ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಏ.25ರಂದು ನಡೆದಿದ್ದ ಮಿಷನ್‌ ಒಲಿಂಪಿಕ್ ಸೆಲ್‌(ಎಂಒಸಿ) ಸಭೆಯಲ್ಲಿ ಬಜರಂಗ್‌ರ ವಿದೇಶ ಪ್ರವಾಸಕ್ಕೆ ₹8.82 ಲಕ್ಷ ರು. ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಆದರೆ ಬಜರಂಗ್‌ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.