ಅಂಡರ್‌ - 19 ಏಷ್ಯಾಕಪ್‌ : ಶ್ರೀಲಂಕಾವನ್ನು ಬಗ್ಗು ಬಡಿದು ಭಾರತ ಫೈನಲ್‌ಗೆ ಲಗ್ಗೆ

| Published : Dec 07 2024, 12:32 AM IST / Updated: Dec 07 2024, 04:18 AM IST

ಸಾರಾಂಶ

ಸೆಮೀಸ್‌ನಲ್ಲಿ ಲಂಕಾ ವಿರುದ್ಧ 7 ವಿಕೆಟ್‌ ಜಯ. 9ನೇ ಸಲ ಫೈನಲ್ ಪ್ರವೇಶ. ಭಾರತ ತಂಡ ಫೈನಲ್‌ನಲ್ಲಿ ಭಾನುವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ.

ಶಾರ್ಜಾ(ಯುಎಇ): 8 ಬಾರಿ ಚಾಂಪಿಯನ್‌ ಭಾರತ ಅಂಡರ್‌-19 ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ದಾಖಲೆಯ 9ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ನಡೆದ 11ನೇ ಆವೃತ್ತಿಯ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 7 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ 6ನೇ ಬಾರಿ ಪ್ರಶಸ್ತಿ ಸುತ್ತಿಗೇರುವ ಲಂಕಾ ಕನಸು ಭಗ್ನಗೊಂಡಿತು.

ಮೊದಲು ಬ್ಯಾಟ್‌ ಮಾಡಿದ ಲಂಕಾ 46.2 ಓವರ್‌ಗಳಲ್ಲಿ 173 ರನ್‌ಗೆ ಸರ್ವಪತನ ಕಂಡಿತು. ಲಾಕ್ವಿನ್‌ ಅಬೇಸಿಂಘೆ 69, ಶಾರುಜನ್‌ ಷಣ್ಮುಗನಾಥನ್‌ 42 ರನ್‌ ಗಳಿಸಿದ್ದು ಬಿಟ್ಟರೆ ಇತರರು ವೈಫಲ್ಯ ಅನುಭವಿಸಿದರು. ಚೇತನ್‌ ಶರ್ಮಾ 3, ಆಯುಶ್‌ ಮಾಥ್ರೆ, ಕಿರಣ್‌ ತಲಾ 2 ವಿಕೆಟ್‌ ಕಿತ್ತರು.ಸುಲಭ ಗುರಿಯನ್ನು ಭಾರತ ಕೇವಲ 21.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಗೆಲುವು ತನ್ನದಾಗಿಸಿಕೊಂಡಿತು.

 13 ವರ್ಷದ ವೈಭವ್‌ ಸೂರ್ಯವಂಶಿ(36 ಎಸೆತಗಳಲ್ಲಿ 67) ಸತತ 2ನೇ ಅರ್ಧಶತಕ ಬಾರಿಸಿದರು. ಆಯುಶ್‌ 34, ನಾಯಕ ಮೊಹಮದ್‌ ಅಮಾನ್‌ ಔಟಾಗದೆ 25 ರನ್‌ ಸಿಡಿಸಿದರು. ಸ್ಕೋರ್‌: ಶ್ರೀಲಂಕಾ 46.2 ಓವರ್‌ಗಳಲ್ಲಿ 173/10 (ಲಾಕ್ವಿನ್‌ 69, ಶಾರುಜನ್‌ 42, ಚೇತನ್‌ 3-34), ಭಾರತ 21.4 ಓವರ್‌ಗಳಲ್ಲಿ 175/3 (ವೈಭವ್‌ 67, ಆಯುಶ್‌ 34, ಪ್ರವೀಣ್‌ 1-27) ಪಂದ್ಯಶ್ರೇಷ್ಠ: ವೈಭವ್‌ ಸೂರ್ಯವಂಶಿ

ನಾಳೆ ಬಾಂಗ್ಲಾ ವಿರುದ್ಧ ಫೈನಲ್‌

ಭಾರತ ತಂಡ ಫೈನಲ್‌ನಲ್ಲಿ ಭಾನುವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಶುಕ್ರವಾರದ ಮತ್ತೊಂದು ಸೆಮೀಸ್‌ನಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾ 7 ವಿಕೆಟ್‌ ಗೆಲುವು ಸಾಧಿಸಿತು. ಹಾಲಿ ಚಾಂಪಿಯನ್‌ ಬಾಂಗ್ಲಾ ಸತತ 2ನೇ ಬಾರಿ ಫೈನಲ್‌ ಪ್ರವೇಶಿಸಿದೆ.