ರಣಜಿ: ಕನ್ನಡಿಗ ವೇಗಿ ಕೌಶಿಕ್‌ ದಾಳಿಗೆ ಪಂಜಾಬ್‌ ಶೇಕ್‌!

| Published : Jan 06 2024, 02:00 AM IST

ರಣಜಿ: ಕನ್ನಡಿಗ ವೇಗಿ ಕೌಶಿಕ್‌ ದಾಳಿಗೆ ಪಂಜಾಬ್‌ ಶೇಕ್‌!
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಯುವ ವೇಗಿ ವಾಸುಕಿ ಕೌಶಿಕ್‌ ಮತ್ತೆ ಮತ್ತೆ ಎದುರಾಳಿಗಳ ನಿದ್ದೆಗೆಡಿಸುತ್ತಿದ್ದಾರೆ. ಈ ಬಾರಿ ಅವರ ಆರ್ಭಟಕ್ಕೆ ತತ್ತರಿಸಿದ್ದು ಪಂಜಾಬ್‌ ತಂಡ. ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಶುಕ್ರವಾರ ಅವರು ಪಡೆದಿದ್ದು 7 ವಿಕೆಟ್‌. ಪರಿಣಾಮ ಪಂಜಾಬ್‌ ಕೇವಲ 152ಕ್ಕೆ ಆಲೌಟ್‌. ಕರ್ನಾಟಕ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದೆ.

ಪಂಜಾಬ್‌ 152ಕ್ಕೆ ಆಲೌಟ್‌ । ಮೊದಲ ದಿನದಂತ್ಯಕ್ಕೆ ಕರ್ನಾಟಕ 3 ವಿಕೆಟ್‌ಗೆ 142

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕರ್ನಾಟಕದ ಯುವ ವೇಗಿ ವಾಸುಕಿ ಕೌಶಿಕ್‌ ಮತ್ತೆ ತಮ್ಮ ಮಾರಕ ದಾಳಿ ಮೂಲಕ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ. ಶುಕ್ರವಾರ ಇಲ್ಲಿ ಆರಂಭಗೊಂಡ ರಣಜಿ ಟ್ರೋಫಿ ಕ್ರಿಕೆಟ್‌ನ ಮೊದಲ ಪಂದ್ಯದಲ್ಲೇ ಕೌಶಿಕ್‌ ದಾಳಿಗೆ ತುತ್ತಾಗಿ ಪಂಜಾಬ್‌ ಕೇವಲ 152ಕ್ಕೆ ಆಲೌಟಾಗಿದೆ. ಬಳಿಕ ದೇವದತ್‌ ಪಡಿಕ್ಕಲ್‌ರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ರಾಜ್ಯಕ್ಕೆ ನೆರವಾಗಿದ್ದು, ಮೊದಲ ದಿನದಂತ್ಯಕ್ಕೆ ಕರ್ನಾಟಕ 3 ವಿಕೆಟ್‌ಗೆ 142 ರನ್ ಗಳಿಸಿದೆ. ತಂಡ ಕೇವಲ 10 ರನ್‌ ಹಿನ್ನಡೆಯಲ್ಲಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬನ್ನು ರಾಜ್ಯದ ವೇಗಿಗಳು ಇನ್ನಿಲ್ಲದಂತೆ ಕಾಡಿದರು. 4ನೇ ಓವರ್‌ನ ಕೊನೆ ಎಸೆತದಲ್ಲಿ ಪ್ರಭ್‌ಸಿಮ್ರನ್‌ರನ್ನು ಪೆವಿಲಿಯನ್‌ಗಟ್ಟುವ ಮೂಲಕ ಪಂಜಾಬ್‌ ಪತನಕ್ಕೆ ನಾಂದಿ ಹಾಡಿದ ಕೌಶಿಕ್‌, ಆ ನಂತರವೂ ಯಾರನ್ನೂ ಕ್ರೀಸ್‌ನಲ್ಲಿ ನಿಲ್ಲಲು ಬಿಡಲಿಲ್ಲ. ಅಗ್ರ 6 ಬ್ಯಾಟರ್‌ಗಳನ್ನು ಕೌಶಿಕ್‌ ಔಟ್‌ ಮಾಡಿದರು. ನೇಹಲ್‌ ವಧೇರಾ ಗಳಿಸಿದ 44 ರನ್‌ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತ. ಕೌಶಿಕ್‌ 41ಕ್ಕೆ 7 ವಿಕೆಟ್‌ ಕಬಳಿಸಿದರೆ, ವೈಶಾಕ್‌ 2, ಚೊಚ್ಚಲ ಪಂದ್ಯವಾಡಿದ ಸ್ಪಿನ್ನರ್‌ ರೋಹಿತ್‌ ಕುಮಾರ್‌ 1 ವಿಕೆಟ್‌ ಪಡೆದರು.

ಪಡಿಕ್ಕಲ್‌ ಮಿಂಚು: ಬಳಿಕ ಇನ್ನಿಂಗ್ಸ್‌ ಆರಂಭಿಸಿದ ರಾಜ್ಯಕ್ಕೆ ಪಡಿಕ್ಕಲ್‌ ಆಸರೆಯಾದರು. ನಾಯಕ ಮಯಾಂಕ್‌ ಶೂನ್ಯಕ್ಕೆ ನಿರ್ಗಮಿಸಿದ ಬಳಿಕ ಸಮರ್ಥ್‌ 38 ರನ್‌ ಗಳಿಸಿದರೆ, 80 ರನ್‌ ಬಾರಿಸಿರುವ ಪಡಿಕ್ಕಲ್‌ ಅವರು ಮನೀಶ್‌ ಪಾಂಡೆ(13) ಜೊತೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಪಂಜಾಬ್‌ ಮೊದಲ ಇನ್ನಿಂಗ್ಸ್‌ 152/10 (ನೇಹಲ್‌ 44, ಕೌಶಿಕ್‌ 7-41, ವೈಶಾಕ್‌2-35), ಕರ್ನಾಟಕ ಮೊದಲ ಇನ್ನಿಂಗ್ಸ್‌ 142/3(ಮೊದಲ ದಿನದಂತ್ಯಕ್ಕೆ)(ಪಡಿಕ್ಕಲ್‌ 80*, ಸಮರ್ಥ್‌ 38, ನಮನ್‌ 1-13)

02ನೇ ಬಾರಿ: ಕೌಶಿಕ್‌ ರಣಜಿ ಕ್ರಿಕೆಟ್‌ನಲ್ಲಿ 2ನೇ ಬಾರಿ 5+ ವಿಕೆಟ್‌ ಕಿತ್ತರು. ಕಳೆದ ಬಾರಿ ಕೇರಳ ವಿರುದ್ಧ 54ಕ್ಕೆ 6 ವಿಕೆಟ್‌ ಪಡೆದಿದ್ದರು.303ನೇ ಆಟಗಾರ: ರೋಹಿತ್‌ ಕುಮಾರ್‌ ರಣಜಿ ಆಡಿದ ಕರ್ನಾಟಕ 303ನೇ ಆಟಗಾರ. ಚೊಚ್ಚಲ ಪಂದ್ಯದಲ್ಲೇ 1 ವಿಕೆಟ್‌ ಪಡೆದರು.