ಸಾರಾಂಶ
ಪ್ಯಾರಿಸ್: ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಮಂಗಳವಾರ ಮಹಿಳೆಯರ 50 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ವಿನೇಶ್ ಅವರು ಕ್ಯೂಬಾದ ಯುಸ್ನೈಲಿಸ್ ಗುಜ್ಮಾನ್ ಲೊಪೆಜ್ ವಿರುದ್ಧ 5-0 ಅಂಕಗಳಿಂದ ಜಯಗಳಿಸಿದರು. ಈ ಮೂಲಕಕ ಒಲಿಂಪಿಕ್ಸ್ ಫೈನಲ್‌ಗೇರಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ.ಇದರೊಂದಿಗೆ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ. ಗುರುವಾರ ಫೈನಲ್ ಸ್ಪರ್ಧೆ ನಡೆಯಲಿದ್ದು, ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ವಿನೇಶ್ ಅವರು ಒಲಿಂಪಿಕ್ಸ್ ಚಾಂಪಿಯನ್ ಎನಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.ಸೆಮೀಸ್‌ಗೂ ಮುನ್ನವೇ 29 ವರ್ಷದ ವಿನೇಶ್ ವಿಶೇಷ ಸಾಧನೆ ಮಾಡಿದ್ದರು. ಮೊದಲ ಸುತ್ತಿನಲ್ಲಿ ಅವರು, ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ಯುಯಿ ಸುಸಾಕಿ ವಿರುದ್ಧ 3-2 ಅಂಕಗಳಿಂದ ರೋಚಕವಾಗಿ ಗೆದ್ದಿದ್ದರು. ಸತತ 82 ಗೆಲುವು ಸಾಧಿಸಿದ್ದ ಸುಸಾಕಿಗೆ ಮೊದಲ ಸೋಲುಣಿಸಿ ವಿನೇಶ್ ದಾಖಲೆ ಬರೆದಿದ್ದರು. ಬಳಿಕ ಕ್ವಾರ್ಟರ್ ಫೈನಲ್‌ನಲ್ಲಿ ವಿನೇಶ್ ಅವರು ಉಕ್ರೇನ್‌ನ ಲಿವಾಚ್ ಒಕ್ಸಾನ ವಿರುದ್ಧ 7-5 ಅಂಕಗಳಿಂದ ಜಯಭೇರಿ ಬಾರಿಸಿದ್ದರು.
ಸತತ 5ನೇ ಒಲಿಂಪಿಕ್ಸಲ್ಲೂ ಭಾರತಕ್ಕೆ ಕುಸ್ತಿಯಲ್ಲಿ ಪದಕಭಾರತ 2008ರಿಂದಲೂ ಸತತ 5ನೇ ಬಾರಿ ಒಲಿಂಪಿಕ್ಸ್ ಕುಸ್ತಿಯಲ್ಲಿ ಪದಕ ಗೆದ್ದಿದೆ. 2008 ಹಾಗೂ 2012ರಲ್ಲಿ ಸುಶೀಲ್ ಕುಮಾರ್ ಕಂಚು, 2016ರಲ್ಲಿ ಸಾಕ್ಷಿ ಮಲಿಕ್ ಕಂಚು, 2020ರಲ್ಲಿ ರವಿ ಕುಮಾರ್ ಬೆಳ್ಳಿ, ಬಜರಂಗ್ ಪೂನಿಯಾ ಕಂಚು ಜಯಿಸಿದ್ದರು. ಈ ಬಾರಿ ವಿನೇಶ್‌ಗೆ ಪದಕ ಖಚಿತವಾಗಿದೆ.