2.7 ಕೆ.ಜಿ. ತೂಕ ಇಳಿಸಲು ವಿನೇಶ್‌ರ ರಕ್ತ ತೆಗೆದು, ಕೂದಲು ಕತ್ತರಿಸಿದರು! ನಿರ್ಜಲೀಕರಣದಿಂದಾಗಿ ಹೆಚ್ಚು ನೀರು ಕುಡಿದಿದ್ದೇ ವಿನೇಶ್‌ಗೆ ಮುಳುವಾಯ್ತು

| Published : Aug 08 2024, 01:44 AM IST / Updated: Aug 08 2024, 04:15 AM IST

2.7 ಕೆ.ಜಿ. ತೂಕ ಇಳಿಸಲು ವಿನೇಶ್‌ರ ರಕ್ತ ತೆಗೆದು, ಕೂದಲು ಕತ್ತರಿಸಿದರು! ನಿರ್ಜಲೀಕರಣದಿಂದಾಗಿ ಹೆಚ್ಚು ನೀರು ಕುಡಿದಿದ್ದೇ ವಿನೇಶ್‌ಗೆ ಮುಳುವಾಯ್ತು
Share this Article
  • FB
  • TW
  • Linkdin
  • Email

ಸಾರಾಂಶ

ನಿರ್ಜಲೀಕರಣದಿಂದಾಗಿ ಹೆಚ್ಚು ನೀರು ಕುಡಿದಿದ್ದೇ ವಿನೇಶ್‌ಗೆ ಮುಳುವಾಯ್ತು. ಸಾಮಾನ್ಯವಾಗಿ 1.5 ಕೆ.ಜಿ. ತೂಕ ಹೆಚ್ಚುವ ಜಾಗದಲ್ಲಿ 2.7 ಕೆ.ಜಿ. ಜಾಸ್ತಿಯಾಯ್ತು. ಹೀಗಾಗಿ ಇಡೀ ರಾತ್ರಿ ತೂಕ ಇಳಿಸಲು ಹರಸಾಹಸ.

ಪ್ಯಾರಿಸ್‌: ವಿನೇಶ್‌ ಫೋಗಟ್‌ರ ತೂಕ ಸಾಮಾನ್ಯ ಸ್ಪರ್ಧಾ ದಿನಕ್ಕಿಂತ ಮಂಗಳವಾರ ಹೆಚ್ಚಾಗಿದ್ದು ಏಕೆ ಎನ್ನುವುದನ್ನು ಭಾರತ ತಂಡದ ಮುಖ್ಯ ವೈದ್ಯಾಧಿಕಾರಿ ಡಾ। ದಿನ್‌ಶಾ ಪರ್ದಿವಾಲಾ ವಿವರಿಸಿದ್ದಾರೆ. ‘ವಿನೇಶ್‌ರ ದೇಹದ ತೂಕ ಸಾಮಾನ್ಯವಾಗಿ 56-57 ಕೆ.ಜಿ. ಇರಲಿದೆ. ಒಲಿಂಪಿಕ್ಸ್‌ನಲ್ಲಿ 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆ ಮಾಡುವ ಕಾರಣ, ಕೆಲ ತಿಂಗಳುಗಳಿಂದ ಕಸರತ್ತು ಮಾಡಿ 50 ಕೆ.ಜಿ.ಗೆ ಇಳಿಸಿದ್ದರು.

 ಮಂಗಳವಾರ ತೂಕ ಪರೀಕ್ಷೆ ವೇಳೆ 49.90 ಕೆ.ಜಿ. ಇದ್ದ ವಿನೇಶ್‌, ಆ ಬಳಿಕ ಆಹಾರ ಸೇವಿಸಿದ್ದರು. ಸಾಮಾನ್ಯವಾಗಿ ವಿನೇಶ್‌ ತೂಕ ಪರೀಕ್ಷೆ ಹಾಗೂ ಮ್ಯಾಟ್‌ಗೆ ಇಳಿಯುವುದರ ನಡುವೆ 1.5 ಕೆ.ಜಿ. ತೂಕ ಹೆಚ್ಚಾಗುವಷ್ಟು ಆಹಾರ ಸೇವನೆ ಮಾಡುತ್ತಾರೆ. ಆದರೆ ಮಂಗಳವಾರ ಒಂದೇ ದಿನ 3 ಬೌಟ್‌ಗಳನ್ನು ಆಡಿದ್ದರಿಂದ ನಿರ್ಜಲೀಕರಣ ಉಂಟಾಗಿತ್ತು. ಹೀಗಾಗಿ ವಿನೇಶ್‌ ಹೆಚ್ಚು ನೀರು ಕುಡಿಯಬೇಕಾಗಿ ಬಂತು. ಇದರಿಂದಾಗಿ ಅವರ ತೂಕ ಸಾಮಾನ್ಯ ದಿನಕ್ಕಿಂತ ಹೆಚ್ಚಾಯಿತು. ಅವರ ದೇಹದ ತೂಕವನ್ನು 50 ಕೆ.ಜಿ.ಯೊಳಗೆ ಇಳಿಸಲು ಏನೆಲ್ಲಾ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ’ ಎಂದು ಪರ್ದಿವಾಲಾ ಹೇಳಿದ್ದಾರೆ.

ತೂಕ ಇಳಿಸಲು ಕಸರತ್ತು

- ಸೆಮಿಫೈನಲ್‌ ಬಳಿಕ ಪರಿಶೀಲಿಸಿದಾಗ ವಿನೇಶ್‌ ಫೋಗಟ್‌ ತೂಕ 52.70 ಕೆ.ಜಿ.- ಆಕೆ ಸ್ಪರ್ಧಿಸಿದ್ದು 50 ಕೆ.ಜಿ. ವಿಭಾಗದಲ್ಲಿ; ಹೀಗಾಗಿ ತೂಕ 50 ಕೆ.ಜಿ.ಗಿಂತ ಕಮ್ಮಿ ಇರಬೇಕಿತ್ತು

- ಹೀಗಾಗಿ ತೂಕ ಇಳಿಸಲು ಹರಸಾಹಸ. ಇಡೀ ದಿನ ಆಹಾರ ಮುಟ್ಟದೆ, ಒಂದು ತೊಟ್ಟು ನೀರು ಕುಡಿಯದೆ, ರಾತ್ರಿಯಿಡೀ ಮಲಗದೆ, ಸ್ಕಿಪ್ಪಿಂಗ್‌, ಸೈಕ್ಲಿಂಗ್‌, ಓಟದಲ್ಲಿ ತೊಡಗಿದ್ದರು- ರಾತ್ರಿ ಹಲವು ಗಂಟೆಗಳ ಕಾಲ ಹಬೆಯ ಚೇಂಬರ್‌ನಲ್ಲಿ ಕೂತು ಬೆವೆತರೂ ನಿರೀಕ್ಷೆಯಷ್ಟು ತೂಕ ಇಳಿಕೆಯಿಲ್ಲ

- ಆದರೂ ಒಂದೇ ರಾತ್ರಿಯಲ್ಲಿ 2.6 ಕೆ.ಜಿ. ತೂಕ ಇಳಿಸಲು ಯಶಸ್ವಿ. ಕೊನೆಯ 100 ಗ್ರಾಂ ಇಳಿಸಲು ಇನ್ನಿಲ್ಲದ ಪ್ರಯತ್ನ- ಉಡುಪು ಕತ್ತರಿಸಿ, ಕೂದಲು ಕಟ್‌ ಮಾಡಿ, ದೇಹದಿಂದ ಸ್ವಲ್ಪ ರಕ್ತ ಹೊರತೆಗೆದ ಭಾರತ ತಂಡದ ವೈದ್ಯರು. ಕೊನೆಗೆ ಜೀವಕ್ಕೆ ಅಪಾಯ ಎಂಬ ಸ್ಥಿತಿಗೆ ಬಂದಾಗ ಕೈಚೆಲ್ಲಿದರು

- ಅಂತಿಮವಾಗಿ ವಿನೇಶ್‌ರ ತೂಕ 50 ಕೆ.ಜಿ. ಅಥವಾ ಅದಕ್ಕಿಂತ ಕೆಳಗೆ ಇಳಿಯದ ಕಾರಣ ಸ್ಪರ್ಧೆಯಿಂದ ಅನರ್ಹ