ದಿಟ್ಟೆ ವಿನೇಶ್‌ ಒಲಿಂಪಿಕ್ಸ್‌ನಲ್ಲಿ ಮೆಡಲ್‌ ಗೆಲ್ಲದಿದ್ದರೂ ಭಾರತೀಯರ ಪಾಲಿಗೆ ಹೀರೋ!

| Published : Aug 08 2024, 01:40 AM IST / Updated: Aug 08 2024, 04:18 AM IST

ಸಾರಾಂಶ

ಭಾರತೀಯ ಕುಸ್ತಿಪಟುಗಳ ಪಾಲಿಗೆ, ಅಭಿಮಾನಿಗಳ ಪಾಲಿಗೆ, ಭಾರತೀಯ ಕ್ರೀಡಾಪಟುಗಳೆಲ್ಲರ ಪಾಲಿಗೆ ವಿನೇಶ್‌ ಎಂದಿಗೂ ಸಾಧಕಿಯಾಗೇ ಉಳಿಯಲಿದ್ದಾರೆ.

ಪ್ಯಾರಿಸ್‌: ಈ ಬಾರಿ ಒಲಿಂಪಿಕ್ಸ್‌ನಲ್ಲಿ ವಿನೇಶ್‌ಗೆ ಪದಕ ಗೆಲ್ಲುವ ಅವಕಾಶ ತಪ್ಪಿರಬಹುದು. ಆದರೆ ಅವರು ಭಾರತೀಯರ ಪಾಲಿಗೆ ಹೀರೋ. 

ಕಳೆದ ವರ್ಷ ಭಾರತೀಯ ಕುಸ್ತಿ ಸಂಸ್ಥೆ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಕುಸ್ತಿಪಟುಗಳು ರಸ್ತೆಗಿಳಿದು ಪ್ರತಿಭಟಿಸಿದ್ದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿನೇಶ್‌, 40 ದಿನಕ್ಕೂ ಹೆಚ್ಚು ಕಾಲ ರಸ್ತೆಯಲ್ಲೇ ಉಳಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ಅವರನ್ನು ಪೊಲೀಸರು ರಸ್ತೆಯಲ್ಲಿ ಎಳೆದಾಡಿ, ಬಂಧಿಸಿದ ಪ್ರಸಂಗವೂ ನಡೆದಿತ್ತು. ಹೆಚ್ಚೂ ಕಡಿಮೆ ಒಂದು ವರ್ಷ ಕಾಲ ಕುಸ್ತಿ ಸ್ಪರ್ಧೆಯಿಂದಲೇ ದೂರ ಉಳಿದಿದ್ದ ವಿನೇಶ್‌, ಕುಸ್ತಿಗೆ ಮತ್ತೆ ಮರಳುವ ಬಗ್ಗೆಯೇ ಅನುಮಾನ ಮೂಡಿತ್ತು. ಆದರೆ ಅವರು ಛಲ ಬಿಟ್ಟಿರಲಿಲ್ಲ. ಬೆಟ್ಟದಷ್ಟು ಟೀಕೆಗಳು ಎದುರಾಗುತ್ತಿದ್ದರೂ ಹೋರಾಟ ಬಿಡಲಿಲ್ಲ.ಈ ನಡುವೆ ಅವರಿಗೆ 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಅವಕಾಶವೂ ಕೈತಪ್ಪಿತ್ತು. 

ರಸ್ತೆಯಲ್ಲಿನ ಹೋರಾಟದ ನಡುವೆ ಕುಸ್ತಿ ಮ್ಯಾಟ್‌ನಲ್ಲಿ ಮತ್ತಷ್ಟು ಶ್ರಮ ಪಡಬೇಕಾದ ಅನಿವಾರ್ಯತೆ ಎದುರಾಯಿತು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲೇಬೇಕು ಎನ್ನುವ ಹಠದಿಂದ 50 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಲು ನಿರ್ಧರಿಸಿದರು. ಆದರೆ ಅರ್ಹತೆ ಪಡೆಯುವುದು ಸಹ ಸವಾಲಾಗಿ ಪರಿಣಮಿಸಿತ್ತು. 

ಕೊನೆ ಕ್ಷಣದಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡ ವಿನೇಶ್‌ಗೆ ಮೊದಲ ಸುತ್ತಿನಲ್ಲೇ ಭಾರಿ ದೊಡ್ಡ ಸವಾಲು ಎದುರಾಯಿತು. ಅಂತಾರಾಷ್ಟ್ರೀಯ ಕುಸ್ತಿಯಲ್ಲಿ ಒಮ್ಮೆಯೂ ಸೋಲು ಕಾಣದ ಜಪಾನ್‌ನ ಸುಸಾಕಿ, ವಿನೇಶ್‌ರ ಮೊದಲ ಎದುರಾಳಿಯಾದರು. ಆದರೆ ಸುಸಾಕಿ ವಿರುದ್ಧ ಗೆದ್ದು ವಿನೇಶ್‌ ಕುಸ್ತಿ ಜಗತ್ತಿಗೇ ಅಚ್ಚರಿ ಮೂಡಿಸಿದರು.

 ಬಳಿಕ ಫೈನಲ್‌ ಪ್ರವೇಶಿಸಿ, ಐತಿಹಾಸಿಕ ಪದಕದ ನಿರೀಕ್ಷೆಯಲ್ಲಿದ್ದರು. ತೂಕ ಹೆಚ್ಚಳ ಘಟನೆಯಿಂದ ವಿನೇಶ್‌ ಪದಕ ವಂಚಿತರಾಗಿರಬಹುದು, ಆದರೆ ಭಾರತೀಯ ಕುಸ್ತಿಪಟುಗಳ ಪಾಲಿಗೆ, ಅಭಿಮಾನಿಗಳ ಪಾಲಿಗೆ, ಭಾರತೀಯ ಕ್ರೀಡಾಪಟುಗಳೆಲ್ಲರ ಪಾಲಿಗೆ ವಿನೇಶ್‌ ಎಂದಿಗೂ ಸಾಧಕಿಯಾಗೇ ಉಳಿಯಲಿದ್ದಾರೆ.

ವಿನೇಶ್‌ಗೆ ಮತ್ತೆ ಮತ್ತೆ ಕೈಕೊಡುತ್ತಿರುವ ಅದೃಷ್ಟ

ವಿನೇಶ್‌ಗೆ ತಮ್ಮ ಕುಸ್ತಿ ವೃತ್ತಿ ಬದುಕಿನಲ್ಲಿ ಅದೃಷ್ಟ ಕೈ ಹಿಡಿದಿದ್ದಕ್ಕಿಂತ ಕೈ ಕೊಟ್ಟಿದ್ದೇ ಹೆಚ್ಚು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್‌, ಚೀನಾದ ಸುನ್‌ ಯನಾನ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಂಡಿ ಗಾಯಗೊಂಡು ಕ್ರೀಡಾಕೂಟದಿಂದಲೇ ಹೊರಬಿದ್ದಿದ್ದರು. ಆ ಬಳಿಕ ದೀರ್ಘ ಕಾಲ ಚಿಕಿತ್ಸೆ ಪಡೆದಿದ್ದ ಅವರು 2018ರಲ್ಲಿ ಮತ್ತೆ ವೃತ್ತಿಪರ ಕುಸ್ತಿಗೆ ಮರಳಿದ್ದರು. ನಂತರ, ವಿಶ್ವ ನಂ.1 ಆಟಗಾರ್ತಿಯಾಗಿ 2020ರ ಟೋಕಿಯೋ ಒಲಿಂಪಿಕ್ಸ್‌ನ 53 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ಅವರು, ಕ್ವಾರ್ಟರ್‌ ಫೈನಲ್‌ನಲ್ಲಿ ಆಘಾತಕಾರಿ ಸೋಲನುಭವಿಸಿದ್ದರು. ಈ ಬಾರಿ ಪದಕ ಖಚಿತಪಡಿಸಿಕೊಂಡಿದ್ದರೂ ಅನರ್ಹಗೊಂಡಿದ್ದಾರೆ.