ಸತತ 82 ಪಂದ್ಯಗಳಲ್ಲಿ ಗೆದ್ದಿದ್ದ ಸುಸಾಕಿಗೆ ಮೊದಲ ಸೋಲಿನ ಶಾಕ್‌ ನೀಡಿದ ವಿನೇಶ್‌!

| Published : Aug 07 2024, 01:06 AM IST

ಸಾರಾಂಶ

ಭಾರತ ತಂಡ ಬ್ರೆಜಿಲ್‌ ಅನ್ನು ಸೋಲಿಸಿದರೆ ಜಗತ್ತು ಎಷ್ಟು ಅಚ್ಚರಿ ಪಡುತ್ತದೆಯೋ, ಭಾರತೀಯರಿಗೆ ಎಷ್ಟು ಸಂತೋಷವಾಗುತ್ತದೆಯೋ ವಿನೇಶ್‌ರ ಈ ಗೆಲುವನ್ನು ಕೂಡಾ ಅದೇ ರೀತಿ ಸಂಭ್ರಮಿಸಬೇಕು.

ಪ್ಯಾರಿಸ್‌: ಭಾರತದ ತಾರಾ ಕುಸ್ತಿಪಟು ವಿನೇಶ್‌ ಫೋಗಟ್‌ ಮಹಿಳೆಯ 50 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.ಆದರೆ ವಿನೇಶ್‌ ಫೋಗಟ್‌ಗೆ ಮೊದಲ ಸುತ್ತಿನಲ್ಲಿ ಎದುರಾಗಿದ್ದು ಅಂತಿಂತಾ ಎದುರಾಳಿಯಲ್ಲ. ಜಪಾನ್‌ನ ಯುಯಿ ಸುಸಾಕಿ ತನ್ನ ಅಂತಾರಾಷ್ಟ್ರೀಯ ಕುಸ್ತಿ ವೃತ್ತಿಬದುಕಿನಲ್ಲಿ ಸೋಲನ್ನೇ ಕಂಡಿರಲಿಲ್ಲ. ಆಕೆಯ ಸಾಧನೆಗಳನ್ನು ನೋಡಿದರೆ ಸಾಕು ಎದುರಾಳಿ ಸೋಲೊಪ್ಪಿಕೊಳ್ಳಬೇಕು ಅಂತಹ ಮಹಾನ್‌ ಸಾಧಕಿ ಆಕೆ. ವಿನೇಶ್‌ರ ಈ ಗೆಲುವನ್ನು ಬಹಳ ಸರಳವಾಗಿ ಹೇಳಬೇಕು ಎಂದರೆ ಫುಟ್ಬಾಲ್‌ನಲ್ಲಿ ಭಾರತ ತಂಡ ಬ್ರೆಜಿಲ್‌ ಅನ್ನು ಸೋಲಿಸಿದರೆ ಜಗತ್ತು ಎಷ್ಟು ಅಚ್ಚರಿ ಪಡುತ್ತದೆಯೋ, ಭಾರತೀಯರಿಗೆ ಎಷ್ಟು ಸಂತೋಷವಾಗುತ್ತದೆಯೋ ಈ ಗೆಲುವನ್ನು ಅದೇ ರೀತಿ ಸಂಭ್ರಮಿಸಬೇಕು. ವಿನೇಶ್‌ರ ಗೆಲುವು ವಿಶೇಷ ಏಕೆ?

- ಈ ಪಂದ್ಯಕ್ಕೂ ಮುನ್ನ ಸುಸಾಕಿ ತಮ್ಮ ಕುಸ್ತಿ ಜೀವನದಲ್ಲಿ ನೋಡಿದ್ದಿದ್ದು ಕೇವಲ 3 ಸೋಲು. ಅದೂ 2010ರಲ್ಲಿ ಅವರು 5ನೇ ಕ್ಲಾಸ್‌ನಲ್ಲಿ ಇದ್ದಾಗ. - ಈ ಸೋಲಿಗೂ ಮುನ್ನ ಸುಸಾಕಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಬದುಕಿನಲ್ಲಿ 82-0 ಗೆಲುವು-ಸೋಲಿನ ದಾಖಲೆ ಹೊಂದಿದ್ದರು. - ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಿಂದ ಫೈನಲ್‌ವರೆಗೂ ಒಂದೇ ಒಂದು ಅಂಕ ಬಿಟ್ಟುಕೊಡದೆ ಚಿನ್ನದ ಪದಕ ಗೆದ್ದಿದ್ದರು. - ಸುಸಾಕಿ 4 ಬಾರಿ ವಿಶ್ವ ಚಾಂಪಿಯನ್‌ ಆಗಿದ್ದಾರೆ.