ವಿಶ್ವಕಪ್‌ನಲ್ಲಿ ಕೊಹ್ಲಿ ಫ್ಲಾಪ್‌ ಶೋ: 7 ಪಂದ್ಯಗಳಲ್ಲಿ ಕೇವಲ 75 ರನ್‌!

| Published : Jun 28 2024, 12:54 AM IST / Updated: Jun 28 2024, 04:09 AM IST

ಸಾರಾಂಶ

7 ಪಂದ್ಯಗಳಲ್ಲಿ ವಿರಾಟ್‌ ಗಳಿಸಿರುವುದು ಕೇವಲ 75 ರನ್‌. ಈ ವಿಶ್ವಕಪ್‌ನಲ್ಲಿ ಅವರ ಬ್ಯಾಟಿಂಗ್‌ ನೋಡಿದವರಿಗೇ ಇದು ನಿಜಕ್ಕೂ ಕೊಹ್ಲಿಯೇ ಆಡುತ್ತಿರುವುದಾ ಅನ್ನುವ ಅನುಮಾನ ಮೂಡದಿರಲು ಸಾಧ್ಯವೇ ಇಲ್ಲ.

ಪ್ರಾವಿಡೆನ್ಸ್‌(ಗಯಾನ): ಐಸಿಸಿ ಟಿ20 ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ತೀರಾ ಕಳಪೆಯಾಟವಾಡಿ ನಿರಾಸೆ ಮೂಡಿಸಿದ್ದಾರೆ. ‘ರನ್‌ ಮಷಿನ್‌’ ಕೊಹ್ಲಿಯ ಬ್ಯಾಟ್‌ ಈ ವಿಶ್ವಕಪ್‌ನಲ್ಲಿ ಹೆಚ್ಚು ಸದ್ದು ಮಾಡಿಲ್ಲ.

 7 ಪಂದ್ಯಗಳಲ್ಲಿ ವಿರಾಟ್‌ ಗಳಿಸಿರುವುದು ಕೇವಲ 75 ರನ್‌. ಈ ವಿಶ್ವಕಪ್‌ನಲ್ಲಿ ಅವರ ಬ್ಯಾಟಿಂಗ್‌ ನೋಡಿದವರಿಗೇ ಇದು ನಿಜಕ್ಕೂ ಕೊಹ್ಲಿಯೇ ಆಡುತ್ತಿರುವುದಾ ಅನ್ನುವ ಅನುಮಾನ ಮೂಡದಿರಲು ಸಾಧ್ಯವೇ ಇಲ್ಲ. ವಿರಾಟ್‌ ಈ ವಿಶ್ವಕಪ್‌ನಲ್ಲಿ ಬಾರಿಸಿರುವುದು ಕೇವಲ ಎರಡೇ ಎರಡು ಬೌಂಡರಿ. ಅವರಿಂದ 5 ಸಿಕ್ಸರ್‌ ದಾಖಲಾಗಿದೆ ಎನ್ನುವುದೊಂದೇ ಸಮಾಧಾನ.

ಇನ್ನು ಈ ಬಾರಿ 7 ಇನ್ನಿಂಗ್ಸಲ್ಲಿ 5ರಲ್ಲಿ ಒಂದಂಕಿ ಮೊತ್ತಕ್ಕೆ ಕೊಹ್ಲಿ ಔಟಾಗಿದ್ದಾರೆ. 2012ರಿಂದ 2022ರ ವರೆಗಿನ ಟಿ20 ವಿಶ್ವಕಪ್‌ಗಳಲ್ಲಿ ಅವರು 25 ಇನ್ನಿಂಗ್ಸ್‌ಗಳಲ್ಲಿ ಕೇವಲ 2 ಬಾರಿ ಮಾತ್ರ ಒಂದಂಕಿ ಮೊತ್ತಕ್ಕೆ ಔಟಾಗಿದ್ದರು. ಇನ್ನು ಈ ವಿಶ್ವಕಪ್‌ಗೂ ಮೊದಲು ಕೊಹ್ಲಿ ಸೊನ್ನೆಗೆ ಔಟಾಗಿರಲಿಲ್ಲ. ಈ ಬಾರಿ 2 ಬಾರಿ ಖಾತೆ ತೆರೆಯದೇ ಪೆವಿಲಿಯನ್‌ಗೆ ಮರಳಿದ್ದು, ಅವರ ಅಭಿಮಾನಿಗಳಿಗೆ ಭಾರೀ ಬೇಸರ ಮೂಡಿಸಿತು.

ಟಿ20ಗೆ ನಿವೃತ್ತಿ?: ಈ ವಿಶ್ವಕಪ್‌ ಬಳಿಕ ವಿರಾಟ್‌ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2022ರ ವಿಶ್ವಕಪ್‌ ಬಳಿಕವೇ ಅವರು ಟಿ20ಯಿಂದ ದೂರ ಉಳಿದಿದ್ದರು. ಆದರೆ ಈ ವಿಶ್ವಕಪ್‌ನಲ್ಲಿ ಅವರ ಅಗತ್ಯ ತಂಡಕ್ಕಿದೆ ಎನ್ನುವ ಕಾರಣಕ್ಕೆ ಮತ್ತೆ ಆಯ್ಕೆ ಮಾಡಲಾಗಿತ್ತು.

ಕೊಹ್ಲಿ ರನ್‌ ಬರ! 2024ರ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿಯ ಸ್ಕೋರ್‌

01(05) vs ಐರ್ಲೆಂಡ್‌

04(03) vs ಪಾಕಿಸ್ತಾನ00 (01) vs ಅಮೆರಿಕ24(24) vs ಅಫ್ಘಾನಿಸ್ತಾನ37(28) vs ಬಾಂಗ್ಲಾದೇಶ00 (05) vs ಆಸ್ಟ್ರೇಲಿಯಾ09(09) vs ಇಂಗ್ಲೆಂಡ್‌

ಕೊಹ್ಲಿಗೆ ಸಮಾಧಾನ ಹೇಳಿದ ದ್ರಾವಿಡ್‌!

ವಿರಾಟ್‌ ಕೊಹ್ಲಿ ಕಳಪೆ ಬ್ಯಾಟಿಂಗ್‌ ಮುಂದುವರಿಸಿ ಕೇವಲ 9 ರನ್‌ಗೆ ಔಟಾದ ಬಳಿಕ ಡ್ರೆಸ್ಸಿಂಗ್‌ ಕೋಣೆಯಲ್ಲಿ ಬೇಸರದಿಂದ ಕೂತಿದ್ದರು. ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌, ಕೊಹ್ಲಿ ಇದ್ದ ಜಾಗಕ್ಕೆ ತೆರಳಿ ಅವರನ್ನು ಸಮಾಧಾನಪಡಿಸಿದರು. ಕೊಹ್ಲಿ ಹಾಗೂ ದ್ರಾವಿಡ್‌ರ ಮಾತುಕತೆಯ ವಿಡಿಯೋ, ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.