ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿ 8ನೇ ಶತಕದ ದಾಖಲೆ

| Published : Apr 07 2024, 01:55 AM IST / Updated: Apr 07 2024, 04:34 AM IST

ಸಾರಾಂಶ

ರಾಜಸ್ಥಾನ ವಿರುದ್ಧ 67 ಎಸೆತಗಳಲ್ಲಿ ಸೆಂಚುರಿ. ಕೊಹ್ಲಿ ಐಪಿಎಲ್‌ನಲ್ಲಿ 7500 ರನ್‌ ಮೈಲುಗಲ್ಲು ತಲುಪಿದ್ದು, ಈ ಸಾಧನೆ ಮಾಡಿದ ಮೊದಲ ಬ್ಯಾಟರ್‌ ಎನಿಸಿಕೊಂಡರು.

ಜೈಪುರ: ಪ್ರತಿ ಪಂದ್ಯದಲ್ಲೂ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ವಿರಾಟ್‌ ಕೊಹ್ಲಿ, ಐಪಿಎಲ್‌ನಲ್ಲಿ ತಮ್ಮ 8ನೇ ಶತಕ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಶನಿವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಕೊಹ್ಲಿ 72 ಎಸೆತಗಳಲ್ಲಿ 113 ರನ್‌ ಸಿಡಿಸಿದರು. ಐಪಿಎಲ್‌ನಲ್ಲಿ ಕ್ರಿಸ್‌ ಗೇಲ್‌ 6, ಬಟ್ಲರ್‌ 5, ಕೆ.ಎಲ್‌.ರಾಹುಲ್‌, ವಾಟ್ಸನ್‌, ವಾರ್ನರ್‌ ತಲಾ 4 ಶತಕ ಬಾರಿಸಿದ್ದಾರೆ.ಕೊಹ್ಲಿ 67 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ್ದು, ಇದು ಐಪಿಎಲ್‌ನಲ್ಲಿ ಎಸೆತಗಳ ಆಧಾರದಲ್ಲಿ ಅತಿ ನಿಧಾನದ ಶತಕ. 2009ರಲ್ಲಿ ಮನೀಶ್‌ ಪಾಂಡೆ ಡೆಕ್ಕನ್‌ ಚಾರ್ಜರ್ಸ್‌ ವಿರುದ್ಧ 67 ಎಸೆತಗಳಲ್ಲಿ ಶತಕ ಬಾರಿಸಿದ್ದರು. 

ಜೊತೆಯಾಟದ ದಾಖಲೆ: ಮೊದಲ ವಿಕೆಟ್‌ಗೆ ಜೊತೆಯಾದ ವಿರಾಟ್‌ ಹಾಗೂ ಫಾಫ್‌ ಡು ಪ್ಲೆಸಿ 125 ರನ್‌ ಸೇರಿಸಿದರು. ಐಪಿಎಲ್‌ನಲ್ಲಿ ಇದು ಈ ಜೋಡಿಯ 6ನೇ ಶತಕದ ಜೊತೆಯಾಟ. ಕೊಹ್ಲಿ-ಡಿ ವಿಲಿಯರ್ಸ್‌ 10, ಕೊಹ್ಲಿ-ಕ್ರಿಸ್‌ ಗೇಲ್ 9 ಬಾರಿ ಶತಕದ ಜೊತೆಯಾಟವಾಡಿದ್ದಾರೆ.

ಐಪಿಎಲ್‌ನಲ್ಲಿ 7500 ರನ್‌

ಕೊಹ್ಲಿ ಐಪಿಎಲ್‌ನಲ್ಲಿ 7500 ರನ್‌ ಮೈಲುಗಲ್ಲು ತಲುಪಿದ್ದು, ಈ ಸಾಧನೆ ಮಾಡಿದ ಮೊದಲ ಬ್ಯಾಟರ್‌ ಎನಿಸಿಕೊಂಡರು. ಅವರು ಈ ವರೆಗೆ 234 ಇನ್ನಿಂಗ್ಸ್‌ಗಳಲ್ಲಿ 7579 ರನ್‌ ಕಲೆಹಾಕಿದ್ದಾರೆ. ಅವರು 52 ಅರ್ಧಶತಕಗಳನ್ನೂ ಬಾರಿಸಿದ್ದಾರೆ. ಗರಿಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ ಶಿಖರ್‌ ಧವನ್‌ 2ನೇ ಸ್ತಾನದಲ್ಲಿದ್ದು, 220 ಇನ್ನಿಂಗ್ಸ್‌ಗಳಲ್ಲಿ 6755 ರನ್‌ ಕಲೆಹಾಕಿದ್ದಾರೆ. ಡೇವಿಡ್‌ ವಾರ್ನರ್‌ 6545, ರೋಹಿತ್‌ ಶರ್ಮಾ 5280 ರನ್‌ ಬಾರಿಸಿದ್ದಾರೆ.