ಸಾರಾಂಶ
ಭಾರತಕ್ಕೆ ವಾಪಸಾದ ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಕುಸ್ತಿಪಟು ಅಮನ್ ಶೆರಾವತ್. ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತ. ದೆಹಲಿ ಲೆಫ್ಟಿನೆಂಟ್ ಗೌವರ್ನರ್‌ರಿಂದ ಗದೆ ಉಡುಗೊರೆ.
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಕುಸ್ತಿ ಪುರುಷರ 57 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತದ ಅಮನ್ ಶೆರಾವತ್ ಮಂಗಳವಾರ ತವರಿಗೆ ವಾಪಸಾದರು. ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಬಳಿಕ ತಾವು ಅಭ್ಯಾಸ ನಡೆಸುವ ಛತ್ರಸಾಲ್ ಕ್ರೀಡಾಂಗಣದಲ್ಲಿ ಅಮನ್‌ಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಮನ್, ಕಂಚಿನ ಪದಕದ ಪಂದ್ಯವನ್ನು ರಾಜ್ಯಮಟ್ಟದ ಪಂದ್ಯವೆಂದು ಭಾವಿಸಿ ಆಡಿದ್ದಾಗಿ ಹೇಳಿದರು.‘ಸೆಮಿಫೈನಲ್‌ನ ಆರಂಭದಲ್ಲೇ ನಾನು ಸುಲಭವಾಗಿ 6 ಅಂಕ ಬಿಟ್ಟುಕೊಟ್ಟೆ. ಒಲಿಂಪಿಕ್ಸ್ ಪಂದ್ಯದಲ್ಲಿ ಈ ರೀತಿಯ ಹಿನ್ನಡೆಯಾಯಿತು ಎಂದು ಮನಸಿಗೆ ನೋವಾಯಿತು. ಆದರೆ ಕಂಚಿನ ಪದಕದ ಪಂದ್ಯವನ್ನು ನಾನು ರಾಜ್ಯ ಮಟ್ಟದ ಪಂದ್ಯವೆಂದು ಭಾವಿಸಿ ಆಡಿದೆ. ಹೀಗಾಗಿ ಯಾವುದೇ ಒತ್ತಡಕ್ಕೆ ನಾನು ಸಿಲುಕಲಿಲ್ಲ’ ಎಂದರು. ಇದೇ ವೇಳೆ 2028ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಗುರಿ’ ಎಂದು 21 ವರ್ಷದ ಅಮನ್ ಭರವಸೆ ವ್ಯಕ್ತಪಡಿಸಿದರು.