ಸಾರಾಂಶ
ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟು, ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಒಂದು ವಾರ ಸ್ಥಗಿತಗೊಳಿಸಿದೆ.
ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟು, ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಒಂದು ವಾರ ಸ್ಥಗಿತಗೊಳಿಸಿದೆ.
ಗುರುವಾರ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಅರ್ಧಕ್ಕೇ ಮೊಟಕುಗೊಂಡ ಬಳಿಕ, ಟೂರ್ನಿಯ ಭವಿಷ್ಯದ ಬಗ್ಗೆ ಪ್ರಶ್ನೆ ಎದ್ದಿದ್ದವು. ಲೀಗ್‌ನ ಇನ್ನುಳಿದ ಪಂದ್ಯಗಳನ್ನು ಸ್ಥಗಿತಗೊಳಿಸುವ ಬಗ್ಗೆ ವರದಿಯಾಗಿದ್ದವು. ಶುಕ್ರವಾರ ಈ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿರುವ ಐಪಿಎಲ್, ‘ತಕ್ಷಣಕ್ಕೆ ಜಾರಿ ಬರುವಂತೆ ಐಪಿಎಲ್‌ನ ಮುಂದಿನ ಪಂದ್ಯಗಳನ್ನು ಒಂದು ವಾರ ಕಾಲ ಸ್ಥಗಿತಗೊಳಿಸಲಾಗಿದೆ’ ಎಂದು ತಿಳಿಸಿದೆ.
ಪರಿಸ್ಥಿತಿ ಅವಲೋಕಿಸಿ ನಿರ್ಧಾರ:
''ಸಂಬಂಧಿತ ಅಧಿಕಾರಿಗಳು ಮತ್ತು ಪಾಲುದಾರರೊಂದಿಗೆ ಚರ್ಚಿಸಿ, ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಪಂದ್ಯಾವಳಿಯ ಹೊಸ ವೇಳಾಪಟ್ಟಿ ಮತ್ತು ಸ್ಥಳಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಪ್ರಕಟಿಸುತ್ತೇವೆ'' ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಐಪಿಎಲ್ ಮಾ.22ಕ್ಕೆ ಆರಂಭಗೊಂಡಿತ್ತು. ಗುರುವಾರ ಡೆಲ್ಲಿ-ಪಂಜಾಬ್ ಸೇರಿ ಒಟ್ಟು 58 ಪಂದ್ಯಗಳು ನಡೆದಿದೆ. ಲೀಗ್ ಹಂತದಲ್ಲಿ 12 ಹಾಗೂ ಪ್ಲೇ-ಆಫ್‌ನ 3 ಹಾಗೂ ಒಂದು ಫೈನಲ್ ಸೇರಿ ಒಟ್ಟು 16 ಪಂದ್ಯಗಳು ಬಾಕಿಯಿವೆ. ಮೇ 25ಕ್ಕೆ ಟೂರ್ನಿ ಕೊನೆಗೊಳ್ಳಬೇಕಿತ್ತು. ಆದರೆ ಸದ್ಯಕ್ಕೆ ಟೂರ್ನಿ ಒಂದು ವಾರ ಕಾಲ ಸ್ಥಗಿತಗೊಂಡಿದ್ದರೂ, ಪುನಾರಂಭಗೊಳ್ಳುವುದು ಮತ್ತಷ್ಟು ತಡವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ದೇಶದ ಸಮಗ್ರತೆ, ಭದ್ರತೆಗಿಂತ
ಕ್ರಿಕೆಟ್ ದೊಡ್ಡದೇನಲ್ಲ: ಬಿಸಿಸಿಐ
ಪಾಕ್ ವಿರುದ್ಧ ಭಾರತ ನಡೆಸುತ್ತಿರುವ ದಾಳಿಯನ್ನು ಬೆಂಬಲಿಸಿರುವ ಬಿಸಿಸಿಐ, ದೇಶದ ಜೊತೆ ದೃಢವಾಗಿ ನಿಲ್ಲುತ್ತದೆ ಎಂದು ತಿಳಿಸಿದೆ. ‘ಭಾರತದ ಸಶಸ್ತ್ರ ಪಡೆಗಳ ಶಕ್ತಿ ಮತ್ತು ಸನ್ನದ್ಧತೆ ಬಗ್ಗೆ ಬಿಸಿಸಿಐ ಸಂಪೂರ್ಣ ನಂಬಿಕೆ ಇಟ್ಟಿದ್ದರೂ, ಎಲ್ಲರ ಹಿತಾಸಕ್ತಿ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಬಿಸಿಸಿಐ ದೇಶದ ಜೊತೆ ದೃಢವಾಗಿ ನಿಲ್ಲುತ್ತದೆ. ಭಾರತ ಸರ್ಕಾರ, ಸಶಸ್ತ್ರ ಪಡೆಗಳು ಮತ್ತು ನಮ್ಮ ದೇಶದ ಜನರೊಂದಿಗೆ ನಾವು ನಮ್ಮ ಒಗ್ಗಟ್ಟು ವ್ಯಕ್ತಪಡಿಸುತ್ತೇವೆ'' ಎಂದು ತಿಳಿಸಿದೆ.
''ಕ್ರಿಕೆಟ್ ರಾಷ್ಟ್ರೀಯ ಉತ್ಸಾಹವಾಗಿದ್ದರೂ ದೇಶ ಮತ್ತು ಅದರ ಸಾರ್ವಭೌಮತ್ವ, ಸಮಗ್ರತೆ ಮತ್ತು ನಮ್ಮ ದೇಶದ ಭದ್ರತೆಗಿಂತ ದೊಡ್ಡದು ಯಾವುದೂ ಇಲ್ಲ. ಭಾರತವನ್ನು ರಕ್ಷಿಸುವ ಎಲ್ಲ ಪ್ರಯತ್ನಗಳನ್ನು ಬೆಂಬಲಿಸಲು ಬಿಸಿಸಿಐ ಬದ್ಧವಾಗಿದೆ’ ಎಂದಿದೆ.
ಬಿಸಿಸಿಐ ಮುಂದಿರುವ ಆಯ್ಕೆಗಳೇನು?
1. ಪರಿಸ್ಥಿತಿ ಸುಧಾರಿಸಿದ ಬಳಿಕ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿ, ಆಯಾಯ ನಗರಗಳಲ್ಲೇ ಪಂದ್ಯಗಳನ್ನು ಮುಂದುವರಿಸಬಹುದು.
2. ದೇಶದ ಉತ್ತರ ಭಾಗದ ರಾಜ್ಯಗಳಲ್ಲಿ ಸದ್ಯ ಪಂದ್ಯ ನಡೆಸುವುದು ಸೂಕ್ತವಲ್ಲದ ಕಾರಣ ಬೆಂಗಳೂರು, ಚೆನ್ನೈ ಸೇರಿದಂತೆ ದಕ್ಷಿಣ ಭಾರತದ ನಗರಗಳಲ್ಲಿ ಪಂದ್ಯಗಳನ್ನು ಆಡಿಸಬಹುದು.
3. ಯುದ್ಧ ಪರಿಸ್ಥಿತಿ ಸದ್ಯಕ್ಕೆ ಸರಿ ಹೋಗದಿದ್ದರೆ ಟೂರ್ನಿಯ ಉಳಿದ ಪಂದ್ಯಗಳನ್ನು ಬೇರೆ ದೇಶದಲ್ಲಿ ಆಯೋಜಿಸಬಹುದು.
ಕೋವಿಡ್‌ನಲ್ಲೂ ಅರ್ಧಕ್ಕೆ
ಸ್ಥಗಿತವಾಗಿದ್ದ ಐಪಿಎಲ್
ಐಪಿಎಲ್ ಅರ್ಧಕ್ಕೇ ಸ್ಥಗಿತಗೊಳ್ಳುವುದು ಇದೇ ಮೊದಲೇನಲ್ಲ. 2021ರಲ್ಲಿ ಕೋವಿಡ್‌ನಿಂದಾಗಿ ಹಲವು ತಿಂಗಳುಗಳ ಕಾಲ ಟೂರ್ನಿಯನ್ನು ಮೊಟಕುಗೊಳಿಸಲಾಗಿತ್ತು. ಏ.9ರಂದು ಆರಂಭಗೊಂಡಿದ್ದ ಟೂರ್ನಿ, ಕೋವಿಡ್ ಪ್ರಕರಣ ಹೆಚ್ಚಳದಿಂದಾಗಿ ಮೇ 2ರಂದು ಸ್ಥಗಿತಗೊಳಿಸಲಾಗಿತ್ತು. ಬಳಿಕ ಉಳಿದ ಪಂದ್ಯಗಳನ್ನು ಸೆ.19ರಿಂದ ಯುಎಇಯ 3 ಕ್ರೀಡಾಂಗಳಲ್ಲಿ ನಡೆಸಲಾಗಿತ್ತು.
ಆಟಗಾರರ ಸ್ಥಳಾಂತರ
ಬಿಸಿಸಿಐಗೆ ಚಾಲೆಂಜ್
ಟೂರ್ನಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದರೂ, ಬಿಸಿಸಿಐ ಮುಂದೆ ಆಟಗಾರರ ಸ್ಥಳಾಂತರದ ದೊಡ್ಡ ಸವಾಲು ಇದೆ. ಟೂರ್ನಿಯಲ್ಲಿ ಭಾರತದ 150ರಷ್ಟು ಆಟಗಾರರು ಹಾಗೂ 60ಕ್ಕೂ ಹೆಚ್ಚು ವಿದೇಶಿ ಕ್ರಿಕೆಟಿಗರು ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಭಾರತದ ಆಟಗಾರರು ತಮ್ಮ ನಗರಗಳಿಗೆ ತೆರಳಿದರೂ, ವಿದೇಶಿ ಆಟಗಾರರು ತಮ್ಮ ದೇಶಕ್ಕೆ ತೆರಳಲಿದ್ದಾರೆಯೋ ಅಥವಾ ಇಲ್ಲೇ ಉಳಿದುಕೊಳ್ಳಲಿದ್ದಾರೊ ಎಂಬ ಖಚಿತತೆಯಿಲ್ಲ. ಒಂದು ವೇಳೆ ತವರಿಗೆ ಮರಳುವುದಾದರೆ ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಡಬೇಕಿದೆ. ಆದರೆ ದೇಶದ ಹಲವು ವಿಮಾನ ನಿಲ್ದಾಣಗಳು ಸ್ಥಗಿತಗೊಂಡಿರುವುದು ಸ್ಥಳಾಂತರ ಸವಾಲು ಎನಿಸಿದೆ.
ಎಲ್ಲಾ ಫ್ರಾಂಚೈಸಿಗಳಿಂದ
ಭಾರತ ಸೈನ್ಯಕ್ಕೆ ಬೆಂಬಲ
ಶುಕ್ರವಾರ ಐಪಿಎಲ್‌ನ ಎಲ್ಲಾ 10 ಫ್ರಾಂಚೈಸಿಗಳು ಭಾರತೀಯ ಸೈನ್ಯಕ್ಕೆ ಬೆಂಬಲ ಸೂಚಿಸಿದವು. ‘ಬಿಕ್ಕಟ್ಟಿನ ಸಮಯದಲ್ಲಿ ನಾವು ಭಾರತೀಯ ಸಶಸ್ತ್ರ ಪಡೆಗಳ ಅಚಲ ಧೈರ್ಯ, ಶೌರ್ಯಕ್ಕೆ ತಲೆಬಾಗುತ್ತೇವೆ ಮತ್ತು ಭಾರತದ ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇವೆ. ಜೈ ಹಿಂದ್’ ಎಂದು ಆರ್‌ಸಿಬಿ ಬರೆದುಕೊಂಡಿದೆ. ‘ದೇಶ ಮೊದಲು. ಬೇರೆಲ್ಲವೂ ಆಮೇಲೆ’ ಎಂದು ಚೆನ್ನೈ ಬೆಂಬಲ ಸೂಚಿಸಿದೆ. ಇತರ ತಂಡಗಳೂ ಕೂಡಾ ಸಾಮಾಜಿಕ ತಾಣಗಳಲ್ಲಿ ಸೇನೆಯ ಸಾಧನೆಯನ್ನು ಕೊಂಡಾಡಿವೆ.
ವಾರದ ಬಳಿಕ ಐಪಿಎಲ್ ಪುನಾರಂಭ
ಆಗದಿದ್ದರೆ ಸೆಪ್ಟೆಂಬರ್‌ಗೆ ಕಾಯಬೇಕು!
ಪರಿಸ್ಥಿತಿ ತಿಳಿಯಾಗಿ ಒಂದು ವಾರದ ಬಳಿಕ ಐಪಿಎಲ್ ಪುನಾರಂಭಗೊಂಡರೆ ಜೂನ್ ಮೊದಲ ವಾರದಲ್ಲಿ ಕೊನೆಗೊಳ್ಳಬಹುದು. ಒಂದು ವೇಳೆ ವಾರದ ಬಳಿಕ ಟೂರ್ನಿ ಪುನಾರಂಭಗೊಳ್ಳದಿದ್ದರೆ, ಮತ್ತೆ ಪಂದ್ಯ ನಡೆಸಲು ಸೆಪ್ಟೆಂಬರ್‌ವರೆಗೂ ಕಾಯಬೇಕಾಗಬಹುದು. ಯಾಕೆಂದರೆ,
1. ಜೂನ್ ಮೊದಲ ವಾರ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಲಿದೆ. ಜೂ.20ರ ಬಳಿಕ 5 ಪಂದ್ಯಗಳ ಟೆಸ್ಟ್ ಸರಣಿ. ಆಗಸ್ಟ್ ಮೊದಲ ವಾರ ತವರಿಗೆ ವಾಪಸ್.
2. ಆಗಸ್ಟ್ 17ರಿಂದ 31 ರವರೆಗೆ ಬಾಂಗ್ಲಾದೇಶದಲ್ಲಿ ಏಕದಿನ, ಟಿ20 ಸರಣಿಯಲ್ಲಿ ಭಾರತ ಪಾಲ್ಗೊಳ್ಳಬೇಕಿದೆ.
3. ಐಪಿಎಲ್‌ಗಾಗಿ ಬಾಂಗ್ಲಾ ಸರಣಿಯನ್ನು ಭಾರತ ರದ್ದುಗೊಳಿಸಿದರೂ, ಅದೇ ಸಮಯಕ್ಕೆ ಅಂದರೆ ಆ.5ರಿಂದ 31ರ ವರೆಗೆ ಇಂಗ್ಲೆಂಡ್‌ನ ದಿ ಹಂಡ್ರೆಡ್ ಲೀಗ್ ನಡೆಯಲಿದೆ.
4. ಐಪಿಎಲ್‌ನ ಬಹುತೇಕ ಆಟಗಾರರು ದಿ ಹಂಡ್ರೆಡ್‌ನಲ್ಲಿ ಆಡಲಿದ್ದಾರೆ. ಹೀಗಾಗಿ ಆ ಸಮಯದಲ್ಲೂ ಐಪಿಎಲ್ ಅಸಾಧ್ಯ.
5. ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಸರಣಿ ನಿಗದಿಯಾಗಿದೆ. ಈ 2 ತಂಡಗಳ ಆಟಗಾರರೂ ಐಪಿಎಲ್‌ಗೆ ಲಭ್ಯವಿರುವುದಿಲ್ಲ.
6. ಆಗಸ್ಟ್ 15ರಿಂದ ಸೆ.22ರ ವರೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ ಇದೆ. ವಿಂಡೀಸ್‌ನ ಪ್ರಮುಖ ಆಟಗಾರರು ಲೀಗ್‌ನಲ್ಲಿ ಆಡಲಿದ್ದಾರೆ.
7. ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್‌ಗಾಗಿ ಬಿಡುವು ಇದೆ. ಭಾರತ-ಪಾಕ್ ಕ್ರಿಕೆಟ್ ಸದ್ಯಕ್ಕೆ ನಡೆಯುವ ಸಾಧ್ಯತೆಯಿಲ್ಲ. ಹೀಗಾಗಿ ಏಷ್ಯಾಕಪ್‌ನ ರದ್ದುಗೊಳಿಸಿ, ಅದೇ ಸಮಯದಲ್ಲಿ ಐಪಿಎಲ್ ನಡೆಸುವ ಆಯ್ಕೆ ಮಾತ್ರ ಬಿಸಿಸಿಐ ಮುಂದಿದೆ.
8. ಆದರೆ, ಸೆ.2ರಿಂದ 14ರವರೆಗೆ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಸರಣಿ ನಡೆಯಲಿದೆ. ಬೇರೆ ಬಿಡುವು ಇಲ್ಲದ ಕಾರಣ, ಆ 2 ದೇಶದ ಮಂಡಳಿಗಳ ಮನವೊಲಿಸಿ ಅಲ್ಲಿನ ಪ್ರಮುಖ ಆಟಗಾರರನ್ನು ಬಿಸಿಸಿಐ ಐಪಿಎಲ್‌ಗೆ ಕರೆತರಬಹುದು. ಸೆಪ್ಟೆಂಬರ್‌ನಲ್ಲೂ ಐಪಿಎಲ್ ಸಾಧ್ಯವಾಗದಿದ್ದರೆ ಬಳಿಕ ಬಿಸಿಸಿಐ ಡಿಸೆಂಬರ್‌ವರೆಗೂ ಕಾಯಬೇಕು.