ಸಾರಾಂಶ
ಮುಂಬೈ: ವಿಜಯ್ ಹಜಾರೆ ಏಕದಿನ ಟೂರ್ನಿಗೆ ಮುಂಬೈ ತಂಡದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಯುವ ಆಟಗಾರ ಪೃಥ್ವಿ ಶಾ ಭಾವನಾತ್ಮಕ ಪೋಸ್ಟ್ ಮಾಡಿದ ಬೆನ್ನಲ್ಲೇ, ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಈ ಬಗ್ಗೆ ಪ್ರತಿಕ್ರಿಯಿಸಿದೆ. ‘ಪೃಥ್ವಿ ಶಾ ನಿಯಮಿತವಾಗಿ ನಿಯಮ ಉಲ್ಲಂಘಿಸಿಸುತ್ತಿದ್ದರು. ಅಶಿಸ್ತು, ಫಿಟ್ನೆಸ್ ಸಮಸ್ಯೆಯೇ ಅವರನ್ನು ತಂಡದಿಂದ ಕೈಬಿಡಲು ಕಾರಣ’ ಎಂದಿದೆ.
ಎಂಸಿಎ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ‘ಮುಷ್ತಾಕ್ ಅಲಿ ಟಿ20 ಟೂರ್ನಿ ವೇಳೆ ಪೃಥ್ವಿ ಶಾ ಬೆಳಗ್ಗೆ 6 ಗಂಟೆ ವರೆಗೂ ಪಾರ್ಟಿ ಮಾಡಿದ್ದರು. ತರಬೇತಿಯನ್ನೂ ತಪ್ಪಿಸಿಕೊಳ್ಳುತ್ತಿದ್ದರು. ಸಾಮಾಜಿಕ ಮಾಧ್ಯಮಗಳ ಇಂತಹ ಪೋಸ್ಟ್ ಮುಂಬೈ ಆಟಗಾರರು ಮತ್ತು ಮಂಡಳಿಯ ಗಮನ ಸೆಳೆಯುತ್ತದೆ ಎಂದು ಭಾವಿಸಿದರೆ ತಪ್ಪಾಗುತ್ತದೆ.
ಶಾ ಅವರಿಗೆ ಬೇರೆ ಯಾರೂ ಶತ್ರುಗಳಿಲ್ಲ. ಅವರ ಪಾಲಿಗೆ ಅವರೇ ಶತ್ರು’ ಎಂದು ಹೇಳಿದ್ದಾರೆ.ಕೆಲವೊಮ್ಮೆ ಫೀಲ್ಡ್‌ನಲ್ಲಿ ಅವರನ್ನು ನಾವು ಪೃಥ್ವಿ ಶಾರನ್ನು ಬಚ್ಚಿಡಬೇಕಾಗುತ್ತೆ. ಅಷ್ಟೊಂದು ಫಿಟ್ನೆಸ್ ಸಮಸ್ಯೆ ಇದೆ. ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಾವು 10 ಜನ ಫೀಲ್ಡರ್ಸ್ ಜೊತೆ ಆಡಿದ್ದೆವು. ಚೆಂಡು ಅವರ ಬಳಿ ಹಾದು ಹೋದರೆ ಅದನ್ನು ಹಿಡಿಯಲು ಅವರು ವಿಫಲರಾಗುತ್ತಿದ್ದರು. ಬ್ಯಾಟಿಂಗ್ ಮಾಡುವಾಗಲೂ ಅವರು ಚೆಂಡಿಗೆ ಹತ್ತಿರವಾಗಲು ಸಮಸ್ಯೆಯನ್ನು ಎದುರಿಸುತ್ತಿದ್ದರು. ಅವರ ಫಿಟ್ನೆಸ್, ಶಿಸ್ತು, ವರ್ತನೆ ಅತ್ಯಂತ ಕಳಪೆಯಾಗಿತ್ತು. ಬೇರೆ ಬೇರೆ ಆಟಗಾರರಿಗೆ ಬೇರೆ ನಿಯಮಗಳು ಇರಬಾರದು’ ಎಂದು ಕಿಡಿಕಾರಿದ್ದಾರೆ.