ಸಾರಾಂಶ
ಕಳೆದ ತಿಂಗಳು ನೂತನವಾಗಿ ಆಯ್ಕೆಯಾಗಿದ್ದ ಭಾರತೀಯ ಕುಸ್ತಿ ಫೆಡರೇಷನ್‌ನ ಹೊಸ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಸಂಜಯ್ ಸಿಂಗ್ ಹೇಳಿಕೆ
ನವದೆಹಲಿ: ಕಳೆದ ತಿಂಗಳು ನೂತನವಾಗಿ ಆಯ್ಕೆಯಾಗಿದ್ದ ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ)ನ ಹೊಸ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಮುಂದಿನ ವಾರ ನ್ಯಾಯಾಲಯದ ಮೊರೆ ಹೋಗುವುದಾಗಿ ಸಮಿತಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಮಾಹಿತಿ ನೀಡಿರುವ ಅವರು, ‘ದೇಶದಲ್ಲಿ ಕುಸ್ತಿ ನಿಯಂತ್ರಣಕ್ಕೆ ಸರಿಯಾದ ಒಕ್ಕೂಟ ಅಗತ್ಯವಿದೆ. ಸಂವಿಧಾನದ ಪ್ರಕಾರ ಆಯ್ಕೆಯಾದ ಸಮಿತಿಯನ್ನು ಅಮಾನತಗೊಳಿಸಿದ್ದನ್ನು ಒಪ್ಪಲು ಸಾಧ್ಯವಿಲ್ಲ. ನಾವು ಮುಂದಿನ ವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ. ಜ.16ರಂದು ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತೇವೆ’ ಎಂದಿದ್ದಾರೆ.
ಜಾಗ್ರೆಬ್ ಕೂಟಕ್ಕೆ ಅಸಪರ್ಮಕವಾಗಿ ಭಾರತ ತಂಡ ಪ್ರಕಟಿಸಲಾಗಿದೆ. 5 ವಿಭಾಗಗಳಲ್ಲಿ ಭಾರತದಿಂದ ಸ್ಪರ್ಧಿಗಳೇ ಇಲ್ಲ. ಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದ ಹಲವರಿಗೆ ಅನ್ಯಾಯವಾಗಿದೆ. ಯುವ ಕುಸ್ತಿಪಟುಗಳು ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಇಂತಹ ಅನ್ಯಾಯ ತಪ್ಪಿಸಲು ಫೆಡರೇಷನ್ ಅಗತ್ಯವಿದೆ’ ಎಂದು ಸಂಜಯ್ ಹೇಳಿದ್ದಾರೆ.
ಕಳೆದ ಡಿ.21ರಂದು ಕುಸ್ತಿ ಸಂಸ್ತೆಗೆ ಚುನಾವಣೆ ನಡೆದು, ಸಂಜಯ್ ಸಿಂಗ್ ನೇತೃತ್ವದ ಸಮಿತಿ ಅಧಿಕಾರಕ್ಕೇರಿತ್ತು. ಅದೇ ದಿನ ಸಮಿತಿಯು ಕಿರಿಯರ ವಿಭಾಗದ ರಾಷ್ಟ್ರೀಯ ಕೂಟಗಳನ್ನು ಆಯೋಜಿಸುವುದಾಗಿ ತಿಳಿಸಿತ್ತು. ಆದರೆ ಕ್ರೀಡಾ ನಿಯಮ ಉಲ್ಲಂಘನೆ ಹಾಗೂ ಸಮಿತಿಯು ಹಿಂದಿನ ಸಮಿತಿಯ ಪದಾಧಿಕಾರಿಗಳ ನಿಯಂಯತ್ರಣದಲ್ಲಿ ಎಂಬ ಕಾರಣ ನೀಡಿ ಕ್ರೀಡಾ ಸಚಿವಾಲಯವು ಸಮಿತಿಯನ್ನೇ ಅಮಾನತುಗೊಳಿಸಿತ್ತು.