ವಾಂಖೇಡೆ ಕ್ರೀಡಾಂಗಣದಲ್ಲಿ ಅಶ್ವನಿ ಕುಮಾರ್‌ ವೇಗಕ್ಕೆ ತಲೆತಿರುಗಿ ಬಿದ್ದ ನೈಟ್‌ ರೈಡರ್ಸ್‌ !

| N/A | Published : Apr 01 2025, 12:51 AM IST / Updated: Apr 01 2025, 04:06 AM IST

ಸಾರಾಂಶ

ತು. ವಾಂಖೇಡೆ ಕ್ರೀಡಾಂಗಣದಲ್ಲಿ ತಮ್ಮ ಅಸಾಧಾರಣ ವೇಗದ ಬೌಲಿಂಗ್‌ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ 23 ವರ್ಷದ ಅಶ್ವನಿ ಕುಮಾರ್‌, ತಮ್ಮ ತಂಡಕ್ಕೆ ಈ ಆವೃತ್ತಿಯಲ್ಲಿ ಮೊದಲ ಜಯ ತಂದುಕೊಟ್ಟರು. 8 ವಿಕೆಟ್‌ಗಳಿಂದ ಗೆದ್ದ ಮುಂಬೈ, ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು.

ಮುಂಬೈ: ಹೊಸ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವುದರಲ್ಲಿ ಮುಂಬೈ ಇಂಡಿಯನ್ಸ್‌ಗೆ ಸರಿಸಾಟಿಯಿಲ್ಲ. ಅಂಥದ್ದೇ ಒಬ್ಬ ಉದಯೋನ್ಮುಖ ಎಡಗೈ ವೇಗಿಯನ್ನು ಸೋಮವಾರ ಕೋಲ್ಕತಾ ನೈಟ್‌ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಕಣಕ್ಕಿಳಿಸಿತು. 

ವಾಂಖೇಡೆ ಕ್ರೀಡಾಂಗಣದಲ್ಲಿ ತಮ್ಮ ಅಸಾಧಾರಣ ವೇಗದ ಬೌಲಿಂಗ್‌ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ 23 ವರ್ಷದ ಅಶ್ವನಿ ಕುಮಾರ್‌, ತಮ್ಮ ತಂಡಕ್ಕೆ ಈ ಆವೃತ್ತಿಯಲ್ಲಿ ಮೊದಲ ಜಯ ತಂದುಕೊಟ್ಟರು. 8 ವಿಕೆಟ್‌ಗಳಿಂದ ಗೆದ್ದ ಮುಂಬೈ, ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು.

ವಾಂಖೇಡೆಯಲ್ಲಿ ಟಾಸ್‌ ಗೆಲ್ಲುವ ತಂಡಗಳು ಮೊದಲು ಫೀಲ್ಡ್‌ ಮಾಡಲು ನಿರ್ಧರಿಸುವುದು ಸಾಮಾನ್ಯ. ಮುಂಬೈ ಸಹ ಅದೇ ನಿರ್ಧಾರವನ್ನು ತೆಗೆದುಕೊಂಡಿತು. ಮೊದಲ ಓವರಲ್ಲೇ ವಿಕೆಟ್‌ ಉರುಳಿಸುವ ಸಂಪ್ರದಾಯವನ್ನು ಮುಂದುವರಿಸಿದ ಟ್ರೆಂಟ್‌ ಬೌಲ್ಟ್‌, ಕೆಕೆಆರ್‌ನ ಆರಂಭಿಕ ಸುನಿಲ್‌ ನರೈನ್‌ (0)ಗೆ ಪೆವಿಲಿಯನ್‌ ದಾರಿ ತೋರಿಸಿದರೆ, ದೀಪಕ್‌ ಚಹರ್‌ ಎಸೆತದಲ್ಲಿ ಡಿ ಕಾಕ್‌ (1) ಔಟಾದರು. 2 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್‌ಗೆ ದಿಕ್ಕೇ ತೋಚದಂತೆ ಮಾಡಿದ್ದು ಅಶ್ವನಿ. ತಾವೆಸೆದ ಮೊದಲ ಎಸೆತದಲ್ಲೇ ರಹಾನೆಯನ್ನು ಔಟ್ ಮಾಡಿದರು.

ಕೇವಲ 3 ಓವರ್‌ ಬೌಲ್‌ ಮಾಡಿದ ಪಂಜಾಬ್‌ನ ಈ ಯುವ ವೇಗಿ, ರಹಾನೆ (11), ರಿಂಕು ಸಿಂಗ್‌ (17), ಮನೀಶ್‌ ಪಾಂಡೆ (19), ಆ್ಯಂಡ್ರೆ ರಸೆಲ್‌ (05)ರನ್ನು ಔಟ್‌ ಮಾಡಿ, ಕೆಕೆಆರ್‌ನ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ಅಂಗ್‌ಕೃಷ್‌ ರಘುವಂಶಿ (26) ಹಾಗೂ ಕೊನೆಯಲ್ಲಿ ರಮಣ್‌ದೀಪ್‌ ಸಿಂಗ್‌ (22) ಹೋರಾಟದಿಂದಾಗಿ ಕೆಕೆಆರ್‌ 100 ರನ್‌ ದಾಟಿತು. 16.2 ಓವರಲ್ಲಿ ತಂಡ 116 ರನ್‌ಗೆ ಆಲೌಟ್‌ ಆಯಿತು.

ಸುಲಭ ಗುರಿ ಬೆನ್ನತ್ತಿದ ಮುಂಬೈ ಮೊದಲ ವಿಕೆಟ್‌ಗೆ 46 ರನ್‌ ಜೊತೆಯಾಟ ಪಡೆಯಿತು. ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದ ರೋಹಿತ್‌ (13) ಮತ್ತೊಮ್ಮೆ ನಿರಾಸೆ ಮೂಡಿಸಿದರು. ದ.ಆಫ್ರಿಕಾ ಯುವ ವಿಕೆಟ್‌ ಕೀಪರ್‌-ಬ್ಯಾಟರ್‌ ರ್‍ಯಾನ್‌ ರಿಕೆಲ್ಟನ್‌ ಸಿಕ್ಸರ್‌ ಸುರಿಮಳೆ ಸುರಿಸಿ ಕೆಕೆಆರ್‌ಗೆ ನೀರಿಳಿಸಿದರು.

 41 ಎಸೆತದಲ್ಲಿ 4 ಬೌಂಡರಿ, 5 ಸಿಕ್ಸರ್‌ನೊಂದಿಗೆ 62 ರನ್‌ ಚಚ್ಚಿ ಔಟಾಗದೆ ಉಳಿದರು. ವಿಲ್‌ ಜ್ಯಾಕ್ಸ್‌ (16) ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲದಿದರೂ, ನಾಯಕ ಸೂರ್ಯಕುಮಾರ್‌ ತವರಿನ ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ. 9 ಎಸೆತದಲ್ಲಿ 27 ರನ್‌ ಸಿಡಿಸಿದರು. ಮುಂಬೈ ಇನ್ನೂ 7.1 ಓವರ್‌ ಬಾಕಿ ಇರುವಂತೆ ಪಂದ್ಯ ಜಯಿಸಿತು. 

ಸ್ಕೋರ್‌: ಕೆಕೆಆರ್‌ 16.2 ಓವರಲ್ಲಿ 116/10(ಅಂಗ್‌ಕೃಷ್‌ 26, ರಮಣ್‌ದೀಪ್‌ 22, ಅಶ್ವನಿ 4-24, ಚಹರ್‌ 2-19), ಮುಂಬೈ 12.5 ಓವರಲ್ಲಿ 121/2 (ರಿಕೆಲ್ಟನ್‌ 62*, ಸೂರ್ಯ 27*, ರಸೆಲ್‌ 2-35) ---

ಯಾರು ಈ ಅಶ್ವನಿ ಕುಮಾರ್‌?

ಪಂಜಾಬ್‌ನ ಝನ್‌ಜೇರಿ ಎಂಬ ಊರಿನ ಅಶ್ವನಿ ಕುಮಾರ್‌, ತಮ್ಮ ರಾಜ್ಯದ ಪರ ಕೇವಲ 4 ಟಿ20, 2 ರಣಜಿ ಟ್ರೋಫಿ ಪಂದ್ಯಗಳನ್ನಾಡಿದ್ದಾರೆ. ಕಳೆದ ವರ್ಷ ಶೇರ್‌-ಎ-ಪಂಜಾಬ್‌ ಟಿ20 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಇವರನ್ನು ಮುಂಬೈ ಇಂಡಿಯನ್ಸ್‌ನ ಸ್ಕೌಟಿಂಗ್‌ ತಂಡ ಗಮನಿಸಿ, ಐಪಿಎಲ್‌ ಆಯ್ಕೆ ಟ್ರಯಲ್ಸ್‌ಗೆ ಆಹ್ವಾನಿಸಿತ್ತು. ಟ್ರಯಲ್ಸ್‌ನಲ್ಲಿ ಮುಂಬೈ ಕೋಚ್‌ಗಳ ಗಮನ ಸೆಳೆದ ಅಶ್ವನಿಯನ್ನು ಹರಾಜಿನಲ್ಲಿ ₹30 ಲಕ್ಷಕ್ಕೆ ಖರೀದಿಸಲಾಗಿತ್ತು.

01ನೇ ಆಟಗಾರ

ಚೊಚ್ಚಲ ಐಪಿಎಲ್‌ ಪಂದ್ಯದಲ್ಲೇ 4 ವಿಕೆಟ್‌ ಗೊಂಚಲು ಪಡೆದ ಭಾರತದ ಮೊದಲಿಗ ಅಶ್ವನಿ ಕುಮಾರ್‌. 15ನೇ ಬೌಲರ್‌

ಐಪಿಎಲ್‌ನಲ್ಲಿ ತಾವೆಸೆದ ಮೊದಲ ಎಸೆತದಲ್ಲಿ ವಿಕೆಟ್‌ ಕಬಳಿಸಿದ 15ನೇ ಬೌಲರ್‌ ಅಶ್ವನಿ ಕುಮಾರ್‌.