ಸಾರಾಂಶ
ಕದನ ವಿರಾಮದ ಹಿನ್ನೆಲೆ 18ನೇ ಆವೃತ್ತಿ ಟೂರ್ನಿ ಮುಂದುವರಿಸಲು ಸಿದ್ಧತೆ: ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿರುವ ಬಿಸಿಸಿಐ - ಮುಂದಿನ ವಾರ ಪಂದ್ಯಗಳು ಆರಂಭಗೊಳ್ಳುವ ನಿರೀಕ್ಷೆ । ಧರ್ಮಶಾಲಾ ಹೊರತುಪಡಿಸಿ ಉಳಿದ 12 ಕ್ರೀಡಾಂಗಣಗಳಲ್ಲಿ ಪಂದ್ಯ: ವರದಿ
ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಸ್ಥಗಿತಗೊಳಿಸಲಾಗಿದ್ದ ಐಪಿಎಲ್ ಪಂದ್ಯಗಳನ್ನು ಪುನಾರಂಭಿಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಪಂದ್ಯಗಳು ಆಯಾಯ ನಗರಗಳಲ್ಲೇ ನಡೆಯುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಗುರುವಾರ ಡೆಲ್ಲಿ-ಪಂಜಾಬ್ ನಡುವಿನ ಪಂದ್ಯ ಅರ್ಧಕ್ಕೇ ಸ್ಥಗಿತಗೊಂಡ ಬಳಿಕ ಶುಕ್ರವಾರ ಇಡೀ ಟೂರ್ನಿಯನ್ನೇ ಮೊಟಕುಗೊಳಿಸಲಾಗಿತ್ತು. ಆಟಗಾರರು, ಪ್ರೇಕ್ಷಕರ ಸುರಕ್ಷತೆ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಸದ್ಯ ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದ್ದರಿಂದ ಟೂರ್ನಿ ಪುನಾರಂಭಿಸಲು ಬಿಸಿಸಿಐ ಕಾಯುತ್ತಿದೆ.
ಉತ್ತರ ಭಾರತದ ಬಹುತೇಕ ಕ್ರೀಡಾಂಗಣಗಳು ಪಾಕಿಸ್ತಾನದ ಗಡಿ ಭಾಗ ಅಥವಾ ಅದರ ಹತ್ತಿರದಲ್ಲೇ ಇರುವುದರಿಂದ ಐಪಿಎಲ್ ಪಂದ್ಯಗಳನ್ನು ದಕ್ಷಿಣ ಭಾರತದ ನಗರಗಳಿಗೆ ಸ್ಥಳಾಂತರಿಸುವುದು ಬಿಸಿಸಿಐ ಮುಂದಿರುವ ಆಯ್ಕೆಗಳಲ್ಲಿ ಒಂದಾಗಿತ್ತು. ಆದರೆ ಕದನ ವಿರಾಮ ಜಾರಿಗೊಂಡಿದ್ದರಿಂದ ಗಡಿಗೆ ತೀರಾ ಹತ್ತಿರದಲ್ಲಿರುವ ಧರ್ಮಶಾಲಾ(ಹಿಮಾಚಲ ಪ್ರದೇಶ) ಹೊರತುಪಡಿಸಿ ದೇಶದ ಇತರ 12 ಕ್ರೀಡಾಂಗಣಗಳಲ್ಲೂ ಪಂದ್ಯಗಳನ್ನು ಪುನಾರಂಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಬಗ್ಗೆ ಈಗಾಗಲೇ ಆಯಾಯ ರಾಜ್ಯ ಕ್ರಿಕೆಟ್ ಸಂಸ್ಥೆಗಳು, ಫ್ರಾಂಚೈಸಿಗಳ ಜೊತೆ ಐಪಿಎಲ್ ಆಡಳಿತ ಮಂಡಳಿ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಮಾ.22ಕ್ಕೆ ಆರಂಭಗೊಂಡ ಟೂರ್ನಿಯಲ್ಲಿ ಒಟ್ಟು 58 ಪಂದ್ಯಗಳು ನಡೆದಿದೆ. ಲೀಗ್ ಹಂತದಲ್ಲಿ 12 ಹಾಗೂ ಪ್ಲೇ-ಆಫ್‌ನ 3 ಹಾಗೂ ಒಂದು ಫೈನಲ್ ಸೇರಿ ಒಟ್ಟು 16 ಪಂದ್ಯಗಳು ಬಾಕಿಯಿವೆ. ಮೇ 25ಕ್ಕೆ ಟೂರ್ನಿ ಕೊನೆಗೊಳ್ಳಬೇಕಿತ್ತು.
ಸರ್ಕಾರದ ಜತೆ ಚರ್ಚೆ ಬಳಿಕ
ನಿರ್ಧಾರ: ಐಪಿಎಲ್ ಮುಖ್ಯಸ್ಥ
ಐಪಿಎಲ್ ಪುನಾರಂಭ ಬಗ್ಗೆ ಟೂರ್ನಿಯ ಮುಖ್ಯಸ್ಥ ಅರುಣ್ ಧುಮಾಲ್ ಪ್ರತಿಕ್ರಿಯಿಸಿದ್ದು, ‘ನಾವು ಸರ್ಕಾರದೊಂದಿಗೆ ಸಮಾಲೋಚಿಸಿ ನಿರ್ಧರಿಸುತ್ತೇವೆ’ ಎಂದಿದ್ದಾರೆ. ‘ಕದನ ವಿರಾಮ ಘೋಷಣೆಯಾಗಿದೆ. ಹೀಗಾಗಿ ಐಪಿಎಲ್ ಪುನಾರಂಭಿಸಿ ಬೇಗನೇ ಮುಕ್ತಾಯಗೊಳಿಸುವ ಸಾಧ್ಯತೆಯನ್ನು ನಾವು ಅನ್ವೇಷಿಸುತ್ತಿದ್ದೇವೆ. ಟೂರ್ನಿ ಆರಂಭಿಸಲು ಸಾಧ್ಯವಾದರೆ ಪಂದ್ಯಗಳು ನಡೆಸುವ ದಿನಾಂಕ, ಸ್ಥಳವನ್ನು ನಿರ್ಧರಿಸಬೇಕಾಗುತ್ತದೆ. ಈ ಬಗ್ಗೆ ಮಾಲೀಕರು, ಪ್ರಸಾರಕರು, ಪಾಲುದಾರರೊಂದಿಗೆ ಮಾತನಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಮೇ 15/16ರಿಂದಲೇ
ಐಪಿಎಲ್ ಮತ್ತೆ ಶುರು?
ಶುಕ್ರವಾರ ಸ್ಥಗಿತಗೊಂಡಿದ್ದ ಟೂರ್ನಿಯ ಪಂದ್ಯಗಳು ಮೇ15 ಅಥವಾ 16ರಿಂದಲೇ ಪುನಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಮೊದಲು ಮೇ 25ಕ್ಕೆ ಫೈನಲ್ ಪಂದ್ಯ ನಿಗದಿಯಾಗಿತ್ತು. ಸದ್ಯ ಕೆಲ ದಿನಗಳ ವಿರಾಮದಿಂದಾಗಿ ಮೇ ಕೊನೆಗೆ ಅಥವಾ ಜೂನ್ ಮೊದಲ ವಾರ ಟೂರ್ನಿ ಕೊನೆಗೊಳ್ಳಬಹುದು.