ಸಾರಾಂಶ
ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯಲಿವೆ.
ನ್ಯೂಜಿಲೆಂಡ್ 2000ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಆದರೆ ಈಗಿನ ತಂಡದಲ್ಲಿರುವ ಯಾವ ಆಟಗಾರ್ತಿಯರೂ ಆ ಐತಿಹಾಸಿಕ ಗೆಲುವು ಸಾಧಿಸಿದ ತಂಡದಲ್ಲಿ ಇರಲಿಲ್ಲ. ಇನ್ನು ದಕ್ಷಿಣ ಆಫ್ರಿಕಾ ಯಾವುದೇ ಮಾದರಿಯಲ್ಲಿ ಈ ವರೆಗೂ ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳಲು ಕಾತರಿಸುತ್ತಿದೆ.
ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ ಸತತ 10 ಟಿ20 ಪಂದ್ಯಗಳನ್ನು ಸೋತಿತ್ತು. ಆದರೆ ಸೋಫಿ ಡಿವೈನ್ ನೇತೃತ್ವದ ತಂಡ ವಿಶ್ವಕಪ್‌ನಲ್ಲಿ ಅಮೋಘ ಲಯ ಪ್ರದರ್ಶಿಸಿದ್ದು, ಫೈನಲ್‌ನಲ್ಲೂ ಉತ್ತಮ ಆಟವಾಡಲು ಉತ್ಸುಕಗೊಂಡಿದೆ. ಹಿರಿಯ ಆಟಗಾರ್ತಿ ಸೂಝಿ ಬೇಟ್ಸ್, ತಾರಾ ಆಲ್ರೌಂಡರ್ ಅಮೆಲಿಯಾ ಕೆರ್ರ್ ತಂಡ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ, 2023ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಸೋಲಿನ ಕಹಿಯನ್ನು ಮರೆಯಲು ಹಪಹಪಿಸುತ್ತಿದೆ. ಸೆಮೀಸ್‌ನಲ್ಲಿ 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಸೋಲುಣಿಸಿ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ದ.ಆಫ್ರಿಕಾಕ್ಕೆ ನಾಯಕಿ ಲಾರಾ ವೂಲ್ವಾರ್ಟ್, ತಜ್ಮಿನ್ ಬ್ರಿಟ್ಸ್, ಸುನೆ ಲುಸ್, ಅನ್ನೆಕೆ ಬಾಷ್, ಮಾರಿಯಾನೆ ಕಾಪ್ ನೊನ್ಕುಲುಲೆಕೊ ಎಂಲಾಬಾರಂತಹ ಬಲಿಷ್ಠ ಆಟಗಾರ್ತಿಯರ ಬಲವಿದೆ.
ಎರಡೂ ತಂಡಗಳು ಸಂಘಟಿತ ಹೋರಾಟದ ಫಲವಾಗಿ ಫೈನಲ್‌ವರೆಗೂ ಸಾಗಿ ಬಂದಿದ್ದು, ಪ್ರಶಸ್ತಿ ಸುತ್ತಿನಲ್ಲೂ ಪ್ರಾಬಲ್ಯ ಮೆರೆಯಲು ಕಾಯುತ್ತಿವೆ. ಪಂದ್ಯ ಆರಂಭ: ಸಂಜೆ 7.30ಕ್ಕೆ, ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್