ಸಾರಾಂಶ
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ)ಗೆ ಬ್ರಿಜ್‌ಭೂಷಣ್ ಆಪ್ತರ ನೇಮಕ ವಿರೋಧಿಸಿ ಪ್ರಶಸ್ತಿ ಹಿಂದಿರುಗಿಸುವವರ ಪಟ್ಟಿಗೆ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಕೂಡಾ ಸೇರ್ಪಡೆಗೊಂಡಿದ್ದಾರೆ. ಅವರು ಮಂಗಳವಾರ ‘ಎಕ್ಸ್’ ಮೂಲಕ ಪ್ರಶಸ್ತಿ ವಾಪ್ಸಿ ಘೋಷಣೆ ಮಾಡಿದ್ದು, ‘ನಾನು ಖೇಲ್ ರತ್ನ, ಅರ್ಜುನ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸುತ್ತಿದ್ದೇನೆ. ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತುಕೊಂಡಿರುವ ಮಾಜಿ ಅಧ್ಯಕ್ಷ ಬ್ರಿಜ್‌ರ ಆಪ್ತರು ಕುಸ್ತಿ ಸಂಸ್ಥೆಗೆ ಆಯ್ಕೆಯಾಗಿದ್ದರು. ಅದನ್ನು ವಿರೋಧಿಸಿ ಈಗಾಗಲೇ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪೂನಿಯಾ ಹಾಗೂ ಕಿವುಡರ ಒಲಿಂಪಿಕ್ ಚಾಂಪಿಯನ್ ವಿರೇಂದರ್ ಸಿಂಗ್ ಯಾದವ್ ತಮ್ಮ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸುವಾಗಿ ಘೋಷಿಸಿದ್ದರು. ಮತ್ತೊಂದೆಡೆ ಒಲಿಂಪಿಕ್ ಸಾಧಕಿ ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದ್ದರು. ಈ ನಡುವೆ ಭಾನುವಾರ ಕುಸ್ತಿ ಸಂಸ್ಥೆಯ ನೂತನ ಸಮಿತಿಯನ್ನೇ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿ, ಸಂಸ್ಥೆಗೆ ಸ್ವತಂತ್ರ ಸಮಿತಿ ನೇಮಕಕ್ಕೆ ಸೂಚಿಸಿದೆ.