ಸಾರಾಂಶ
ಮಹಿಳಾ ಕ್ರಿಕೆಟ್ ಉತ್ತೇಜಿಸುವ ಉದ್ದೇಶದಿಂದ ಐಸಿಸಿಯಿಂದ ಮಹತ್ವದ ನಿರ್ಧಾರ
ಪುರುಷರ ವಿಶ್ವಕಪ್‌ಗಿಂತಲೂ ಹೆಚ್ಚು ನಗದು । 2022ರಲ್ಲಿ ಇದ್ದಿದ್ದು ₹11.65 ಕೋಟಿ
ದುಬೈ: ಮಹಿಳಾ ಕ್ರಿಕೆಟ್ ಉತ್ತೇಜಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂಬರುವ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಗೆಲ್ಲುವ ತಂಡಕ್ಕೆ ಬರೋಬ್ಬರಿ 39.55 ಕೋಟಿ ರು. ನಗದು ಬಹುಮಾನ ಲಭಿಸಿಲಿದೆ. ಇದು 2023ರಲ್ಲಿ ಪುರುಷರ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕಿದ್ದಕ್ಕಿಂತಲೂ ಹೆಚ್ಚು.
ಸೆ.30ರಿಂದ ನ.2ರ ವರೆಗೆ ನಡೆಯಲಿರುವ 13ನೇ ಆವೃತ್ತಿ ಟೂರ್ನಿಯ ಬಹುಮಾನ ಮೊತ್ತವನ್ನು ಸೋಮವಾರ ಐಸಿಸಿ ಪ್ರಕಟಿಸಿತು. ಟೂರ್ನಿ ಒಟ್ಟು 13.88 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು 122.5 ಕೋಟಿ ರು.) ಹೊಂದಿದೆ. ಇದು 2022ರ ವಿಶ್ವಕಪ್‌ಗೆ ಹೋಲಿಸಿದರೆ ಶೇಕಡಾ 297ರಷ್ಟು ಹೆಚ್ಚು. ಅಂದು ಒಟ್ಟು 31 ಕೋಟಿ ನಗದು ಬಹುಮಾನವಿತ್ತು. ಅದರಲ್ಲಿ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ₹11.65 ಕೋಟಿ ಲಭಿಸಿದ್ದರೆ, ರನ್ನರ್-ಅಪ್ ಇಂಗ್ಲೆಂಡ್ ₹5.30 ಕೋಟಿ ಪಡೆದಿತ್ತು. ಈ ಬಾರಿ ವಿಜೇತ ತಂಡವೇ ಬರೋಬ್ಬರಿ ₹39.55 ಕೋಟ ಗಳಿಸಲಿದ್ದು, ರನ್ನರ್-ಅಪ್ ತಂಡಕ್ಕೆ ₹19.77 ಕೋಟಿ ಸಿಗಲಿದೆ. ಸೆಮಿಫೈನಲ್ ಪ್ರವೇಶಿಸಿದ ಇತರ 2 ತಂಡಗಳಿಗೆ ತಲಾ ₹9.89 ಕೋಟಿ ಲಭಿಸಲಿದೆ. 2022ರಲ್ಲಿ ಸೆಮೀಸ್‌ಗೇರಿದ ತಂಡಗಳಿಗೆ ₹2.65 ಕೋಟಿ ಲಭಿಸಿದ್ದವು. ಇನ್ನು ಗುಂಪು ಹಂತದಲ್ಲಿ ಗೆಲ್ಲುವ ತಂಡಗಳು ₹30.29 ಲಕ್ಷ, ಗುಂಪಿನಲ್ಲಿ 5 ಮತ್ತು 6ನೇ ಸ್ಥಾನ ಪಡೆದ ತಂಡಗಳು ತಲಾ ₹62 ಲಕ್ಷ, 7 ಮತ್ತು 8ನೇ ಸ್ಥಾನಿ ತಂಡಗಳು ತಲಾ ₹24 ಲಕ್ಷ ಪಡೆದುಕೊಳ್ಳಲಿವೆ.
‘ಈ ಘೋಷಣೆಯು ಮಹಿಳಾ ಕ್ರಿಕೆಟ್‌ನಲ್ಲಿ ಒಂದು ನಿರ್ಣಾಯಕ ಮೈಲುಗಲ್ಲು. ಬಹುಮಾನದ ಮೊತ್ತ ನಾಲ್ಕು ಪಟ್ಟು ಹೆಚ್ಚಳ ಮಾಡಿದ್ದು ಮಹಿಳಾ ಕ್ರಿಕೆಟ್‌ಗೆ ಒಂದು ಹೆಗ್ಗುರುತು ಮತ್ತು ಅದರ ದೀರ್ಘಕಾಲೀನ ಬೆಳವಣಿಗೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಸಂದೇಶ ಸ್ಪಷ್ಟವಾಗಿದೆ. ಮಹಿಳೆಯರು ಕ್ರಿಕೆಟ್‌ಅನ್ನು ವೃತ್ತಿಪರವಾಗಿ ಆಯ್ಕೆ ಮಾಡಿಕೊಂಡರೆ ಪುರುಷರಷ್ಟೇ ಸಮಾನವಾಗಿ ನಡೆಸಿಕೊಳ್ಳುತ್ತೇವೆ’ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ.
ಈ ಬಾರಿ ಟೂರ್ನಿ ಗುವಾಹಟಿ, ಇಂದೋರ್, ನವಿ ಮುಂಬೈ, ವಿಶಾಖಪಟ್ಟಣಂ ಹಾಗೂ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ಈ ವರೆಗಿನ 12 ಆವೃತ್ತಿಗಳ ಪೈಕಿ ಆಸ್ಟ್ರೇಲಿಯಾ 7 ಬಾರಿ ಟ್ರೋಫಿ ಗೆದ್ದಿದ್ದು, ಇಂಗ್ಲೆಂಡ್ 4, ನ್ಯೂಜಿಲೆಂಡ್ 1 ಬಾರಿ ಚಾಂಪಿಯನ್ ಆಗಿದೆ. 2005, 2017ರಲ್ಲಿ ರನ್ನರ್-ಅಪ್ ಆಗಿದ್ದ ಭಾರತ, ಈ ಸಲ ಚೊಚ್ಚಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಎಷ್ಟು ಮೊತ್ತ ಏರಿಕೆ?
000 2022 2026
ಒಟ್ಟು ಮೊತ್ತ ₹31 ಕೋಟಿ ₹122.5 ಕೋಟಿ
ಚಾಂಪಿಯನ್ ₹11.65 ಕೋಟಿ ₹39.5 ಕೋಟಿ
ರನ್ನರ್-ಅಪ್ ₹5.30 ಕೋಟಿ ₹19.7 ಕೋಟಿ
ಸೆಮಿಫೈನಲ್ ₹2.65 ಕೋಟಿ ₹9.89 ಕೋಟಿ
ಪುರುಷರ ವಿಶ್ವಕಪ್
ನಗದು 50+ ಕೋಟಿ?
2023ರ ಪುರುಷರ ವಿಶ್ವಕಪ್‌ನಲ್ಲಿ ಒಟ್ಟು ನಗದು ಬಹುಮಾನ ₹88.26 ಕೋಟಿ ಇತ್ತು. ಅದರಲ್ಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ 35.31 ಕೋಟಿ ರು. ತನ್ನದಾಗಿಸಿಕೊಂಡಿತ್ತು. ಈ ಬಾರಿ ಮಹಿಳಾ ವಿಶ್ವಕಪ್‌ನ ನಗದು ಮೊತ್ತ ಬಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ, 2027ರ ಪುರುಷರ ವಿಶ್ವಕಪ್‌ನ ಮೊತ್ತವೂ ಏರಿಕೆಯಾಗುವುದು ಬಹುತೇಕ ಖಚಿತ. ಅಂದಾಜಿನ ಪ್ರಕಾರ, 2027ರಲ್ಲಿ ಟ್ರೋಫಿ ಗೆಲ್ಲುವ ತಂಡ ₹50 ಕೋಟಿಗೂ ಹೆಚ್ಚು ಗಳಿಸಬಹುದು ಎಂದು ಹೇಳಲಾಗುತ್ತಿದೆ.
)

;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))