ಸಾರಾಂಶ
ಸಿಂಗಾಪುರ: ವಿಶ್ವ ಚೆಸ್ ಚಾಂಪಿಯನ್ ಫೈನಲ್‌ನಲ್ಲಿ ಸತತ 7 ಗೇಮ್‌ಗಳ ಡ್ರಾ ಬಳಿಕ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಹಾಲಿ ಚಾಂಪಿಯನ್, ಚೀನಾದ ಡಿಂಗ್ ಲಿರೆನ್ ವಿರುದ್ಧ 6-5 ಅಂಕಗಳಿಂದ ಗುಕೇಶ್ ಮುನ್ನಡೆ ಪಡೆದಿದ್ದಾರೆ.
ಇಬ್ಬರ ನಡುವೆ ಇನ್ನು 3 ಸುತ್ತಿನ ಪಂದ್ಯ ಬಾಕಿಯಿದೆ. ಮೂರರಲ್ಲಿ ಡ್ರಾ ಸಾಧಿಸಿದರೂ ಗುಕೇಶ್ ಚಾಂಪಿಯನ್ ಎನಿಸಿಕೊಳ್ಳಲಿದ್ದಾರೆ.ಭಾನುವಾರದ ಗೇಮ್‌ನಲ್ಲಿ 28ನೇ ನಡೆ ಬಳಿಕ ಗುಕೇಶ್‌ಗೆ ಗೆಲುವು ಒಲಿಯಿತು. 11ನೇ ನಡೆಗೆ ಗುಕೇಶ್ ಬರೋಬ್ಬರಿ 1 ಗಂಟೆ ವ್ಯಯಿಸಿದ್ದರು. ಆದರೂ ಬಳಿಕ ಪುಟಿದೆದ್ದ ಅವರು, ಪಂದ್ಯ ತಮ್ಮದಾಗಿಸಿಕೊಂಡರು.ಇಬ್ಬರ ನಡುವಿನ ಆರಂಭಿಕ ಗೇಮ್‌ನಲ್ಲಿ ಸೋತಿದ್ದ ಗುಕೇಶ್, 3ನೇ ಗೇಮ್‌ನಲ್ಲಿ ಗೆದ್ದಿದ್ದರು. ಇದೇ ಮೊದಲ ಬಾರಿ ಟೂರ್ನಿಯಲ್ಲಿ ಅವರು ಅಂಕ ಗಳಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸೋಮವಾರ 12ನೇ ಸುತ್ತು ನಡೆಯಲಿದೆ.
ಗುವಾಹಟಿ ಮಾಸ್ಟರ್ಸ್: ಸತೀಶ್, ಅಶ್ವಿನಿ-ತನಿಶಾ ಚಾಂಪಿಯನ್
ಗುವಾಹಟಿ: ಗುವಾಹಟಿ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ತನಿಶಾ ಕ್ರಾಸ್ಟೊ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಸತೀಶ್ ಕುಮಾರ್ ಚೊಚ್ಚಲ ಕಿರೀಟ ಜಯಿಸಿದ್ದಾರೆ.ಭಾನುವಾರ ನಡೆದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಭಾರತೀಯ ಜೋಡಿ, ಚೀನಾದ ಲಿಹುವಾ ಝೊಯು-ವಾಂಗ್ ಜಿ ಮೆಂಗ್ ವಿರದ್ಧ 21-18, 21-12ರಲ್ಲಿ ಗೆಲುವು ಸಾಧಿಸಿತು. ಮತ್ತೊಂದೆಡೆ ವಿಶ್ವ ನಂ.49 ಸತೀಶ್ ಕುಮಾರ್, ಫೈನಲ್‌ನಲ್ಲಿ ಚೀನಾದ ಝು ಕ್ಷುವಾನ್ ಚೆನ್ ವಿರುದ್ಧ 21-17, 21-14 ಅಂಕಗಳಲ್ಲಿ ಜಯಭೇರಿ ಬಾರಿಸಿದರು.
ಅನ್ಮೋಲ್‌ಗೆ ನಿರಾಸೆ: ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ 17 ವರ್ಷದ ಅನ್ಮೋಲ್ ಖಾರ್ಬ್ ನಿರಾಸೆ ಅನುಭವಿಸಿದರು. ಅವರು ಫೈನಲ್‌ನಲ್ಲಿ ಚೀನಾದ ಯಾನ್ ಯಾನ್ ವಿರುದ್ಧ 21-14, 13-21, 19-21ರಲ್ಲಿ ಪರಾಭವಗೊಂಡರು.