ಡಬ್ಲ್ಯುಪಿಎಲ್‌: ಗುಜರಾತ್‌ಗೆ ಹ್ಯಾಟ್ರಿಕ್‌ ಸೋಲು!

| Published : Mar 02 2024, 01:46 AM IST

ಸಾರಾಂಶ

ಯು.ಪಿ.ವಾರಿಯರ್ಸ್‌ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ 6 ವಿಕೆಟ್‌ ಸೋಲು ಅನುಭವಿಸಿದ್ದು, ಇದು ಸತತ 3 ಸೋಲು.

ಬೆಂಗಳೂರು: 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನಲ್ಲಿ ಗುಜರಾತ್‌ ಜೈಂಟ್ಸ್‌ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಶುಕ್ರವಾರ ನಡೆದ ಯು.ಪಿ.ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ಗೆ 6 ವಿಕೆಟ್‌ ಸೋಲು ಎದುರಾಯಿತು.ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 20 ಓವರಲ್ಲಿ 5 ವಿಕೆಟ್‌ ನಷ್ಟಕ್ಕೆ 142 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ನಿಧಾನಗತಿಯ ಆರಂಭ ಪಡೆದಿದ್ದ ತಂಡಕ್ಕೆ ಫೋಬೆ ಲಿಚ್‌ಫೀಲ್ಡ್‌(35) ಹಾಗೂ ಆಶ್ಲೆ ಗಾರ್ಡ್ನರ್‌(30) ಆಸರೆಯಾದರು. ಸ್ಪಿನ್ನರ್‌ ಸೋಫಿ ಎಕ್ಲೆಸ್ಟೋನ್‌ಗೆ 3 ವಿಕೆಟ್‌ ದೊರೆಯಿತು.ಸಾಧಾರಣ ಗುರಿ ಬೆನ್ನತ್ತಿದ ವಾರಿಯರ್ಸ್‌ಗೆ ನಾಯಕಿ ಅಲೀಸಾ ಹೀಲಿ (33) ಉತ್ತಮ ಆರಂಭ ಒದಗಿಸಿದರು. ಬಳಿಕ 33 ಎಸೆತದಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 60 ರನ್‌ ಸಿಡಿಸಿದ ಗ್ರೇಸ್‌ ಹ್ಯಾರಿಸ್‌ ತಂಡವನ್ನು ಇನ್ನೂ 4.2 ಓವರ್‌ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು.ಡಬ್ಲ್ಯುಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಶ್ರೀಲಂಕಾದ ಚಾಮರಿ ಅಟಾಪಟ್ಟು, ಭಾರತದ ತಾರಾ ಆಲ್ರೌಂಡರ್‌ ದೀಪ್ತಿ ಶರ್ಮಾ ತಲಾ 17 ರನ್‌ ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು.ಸ್ಕೋರ್‌: ಗುಜರಾತ್‌ 20 ಓವರಲ್ಲಿ 142/5 (ಲಿಚ್‌ಫೀಲ್ಡ್‌ 35, ಗಾರ್ಡ್ನರ್‌ 30, ಸೋಫಿ 3-20), ವಾರಿಯರ್ಸ್‌ 15.4 ಓವರಲ್ಲಿ 143/4 (ಗ್ರೇಸ್‌ 60*, ಅಲೀಸಾ 33, ತನುಜಾ 2-23)