ಸಾರಾಂಶ
ಬೆಂಗಳೂರು : 2025ರ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಆಟಗಾರ್ತಿಯರ ಮಿನಿ ಹರಾಜು ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ.
ಕೇವಲ 19 ಸ್ಥಾನಗಳಿಗೆ ಹರಾಜು ನಡೆಯಲಿದ್ದು, 91 ಭಾರತೀಯರು ಸೇರಿ ಒಟ್ಟು 120 ಮಂದಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಕಳೆದ ಬಾರಿ ತಂಡದಲ್ಲಿದ್ದ ಬಹುತೇಕ ಆಟಗಾರ್ತಿಯರನ್ನು ಇತ್ತೀಚೆಗೆ 5 ಫ್ರಾಂಚೈಸಿಗಳು ತನ್ನಲ್ಲೇ ಉಳಿಸಿಕೊಂಡಿದ್ದವು.
ಕೆಲವೇ ಕೆಲ ಆಟಗಾರ್ತಿಯರನ್ನು ತಂಡದಿಂದ ಕೈಬಿಡಲಾಗಿದ್ದು, ಆ ಸ್ಥಾನಗಳನ್ನು ಹರಾಜಿನಲ್ಲಿ ಭರ್ತಿ ಮಾಡಲಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ₹3.25 ಕೋಟಿ ಹಣ ಹೊಂದಿದ್ದು, ಹರಾಜಿನಲ್ಲಿ ನಾಲ್ವರು ಆಟಗಾರ್ತಿಯರನ್ನು ಖರೀದಿಸಬೇಕಿದೆ. ಡೆಲ್ಲಿಯ 13 ವರ್ಷದ ಅನ್ಶು ನಾಗರ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಅತಿ ಕಿರಿಯ ಆಟಗಾರ್ತಿ.
ರಾಜ್ಯದ ನಾಲ್ವರು
ಹರಾಜಿನಲ್ಲಿ ಈ ಬಾರಿ ಕರ್ನಾಟಕದ ನಾಲ್ವರು ಪಾಲ್ಗೊಳ್ಳಲಿದ್ದಾರೆ. ಶುಭಾ ಸತೀಶ್, ಪ್ರತ್ಯುಷಾ ಸಿ., ಪ್ರತ್ಯೂಷಾ ಕುಮಾರ್ ಹಾಗೂ ನಿಕಿ ಪ್ರಸಾದ್ ಹರಾಜಿನಲ್ಲಿ ಅದೃಷ್ಠ ಪರೀಕ್ಷೆಗಿಳಿಯಲಿದ್ದಾರೆ.
ಹರಾಜು ಆರಂಭ: ಮಧ್ಯಾಹ್ನ 3 ಗಂಟೆಗೆ, ನೇರಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್ 18, ಸ್ಟಾರ್‌ಸ್ಪೋರ್ಟ್ಸ್.
ರಾಷ್ಟ್ರೀಯ ವನಿತಾ ಏಕದಿನ: ರಾಜ್ಯಕ್ಕೆ ಮೊದಲ ಸೋಲು
ಲಾಹ್ಲಿ(ಹರ್ಯಾಣ): ಈ ಬಾರಿ ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ಮೊದಲ ಸೋಲನುಭವಿಸಿದೆ. ಆರಂಭಿಕ ನಾಲ್ಕೂ ಪಂದ್ಯಗಳಲ್ಲಿ ಗೆದ್ದಿದ್ದ ರಾಜ್ಯ ತಂಡ, ಶನಿವಾರ ಬೆಂಗಾಲ್ ವಿರುದ್ಧ 7 ವಿಕೆಟ್‌ಗಳಿಂದ ಪರಾಭವಗೊಂಡಿತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ 43.3 ಓವರ್‌ಗಳಲ್ಲಿ 138 ರನ್‌ಗೆ ಆಲೌಟಾಯಿತು. ಕೆ.ಪ್ರತ್ಯೂಷಾ (39) ಹೊರತುಪಡಿಸಿ ಇತರರು ಕೈಕೊಟ್ಟರು. ಸಿ.ಪ್ರತ್ಯುಷಾ 23, ಅದಿತಿ ರಾಜೇಶ್ 23, ಶುಭಾ ಸತೀಶ್ 20 ರನ್ ಬಾರಿಸಿದರು. ಸುಲಭ ಗುರಿ ಬೆನ್ನತ್ತಿದ ಬೆಂಗಾಲ್ 34.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಧರಾ ಗುಜ್ಜರ್ ಔಟಾಗದೆ 62 ರನ್ ಸಿಡಿಸಿದರು. ಕರ್ನಾಟಕ ‘ಇ’ ಗುಂಪಿನಲ್ಲಿ 5 ಪಂದ್ಯಗಳಲ್ಲಿ 16 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಡಿ.16ಕ್ಕೆ ತ್ರಿಪುರಾ ವಿರುದ್ಧ ಸೆಣಸಾಡಲಿದೆ.