ಸಾರಾಂಶ
ಧರ್ಮಶಾಲಾ: ತನ್ನದೇ ‘ಜೈಸ್‌ಬಾಲ್’ ಆಟದ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಬರೆಯುತ್ತಿರುವ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಶುಕ್ರವಾರ ಆರಂಭ ಗೊಂಡ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ನಲ್ಲಿ 57 ರನ್ ಸಿಡಿಸಿದ ಜೈಸ್ವಾಲ್ ಹಲವು ಮೈಲಿಗಲ್ಲುಗಳನ್ನು ಸಾಧಿಸಿದರು.
ಜೈಸ್ವಾಲ್ ಅತಿ ಕಡಿಮೆ ಪಂದ್ಯಗಳಲ್ಲಿ 1000 ರನ್ ಪೂರ್ಣಗೊಳಿಸಿದ ಭಾರತದ ಆಟಗಾರ ಎನಿಸಿಕೊಂಡರು. ಅವರು 9ನೇ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಿದ್ದು, ಸುನಿಲ್ ಗವಾಸ್ಕರ್(11), ಪೂಜಾರ(11) ದಾಖಲೆ ಮುರಿದರು.
ಒಟ್ಟಾರೆ ವಿಶ್ವದಲ್ಲೇ ವೇಗದ ಸಾವಿರ ರನ್ ಸರದಾರರ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ದಿಗ್ಗಜ ಬ್ಯಾಟರ್ ಡಾನ್ ಬ್ರಾಡ್ಮನ್(7 ಪಂದ್ಯ) ಪಟ್ಟಿಯಲ್ಲಿ ಮೊದಲಿಗರು.
ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಜೈಸ್ವಾಲ್ 2ನೇ ಸ್ಥಾನದಲ್ಲಿದ್ದಾರೆ. ಜೈಸ್ವಾಲ್ 16 ಇನ್ನಿಂಗ್ಸ್ ತೆಗೆದುಕೊಂಡರೆ, ವಿನೋದ್ ಕಾಂಬ್ಳಿ 14 ಇನ್ನಿಂಗ್ಸ್‌ನಲ್ಲೇ ಈ ಮೈಲಿಗಲ್ಲು ತಲುಪಿದರು.
ಸಿಕ್ಸರ್ ದಾಖಲೆ: ಟೆಸ್ಟ್‌ನಲ್ಲಿ ತಂಡವೊಂದರ ವಿರುದ್ಧ ಗರಿಷ್ಠ ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಜೈಸ್ವಾಲ್ ಅಗ್ರಸ್ಥಾನಕ್ಕೇರಿದರು.
ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ 9 ಇನ್ನಿಂಗ್ಸಲ್ಲಿ 26 ಸಿಕ್ಸರ್ ಬಾರಿಸಿದ್ದಾರೆ. ಅವರು ಸಚಿನ್‌ರನ್ನು ಹಿಂದಿಕ್ಕಿದರು. ಸಚಿನ್ ಆಸ್ಟ್ರೇಲಿಯಾ ವಿರುದ್ಧ 74 ಇನ್ನಿಂಗ್ಸ್‌ಗಳಲ್ಲಿ 25 ಸಿಕ್ಸರ್ ಸಿಡಿಸಿದ್ದರು.
ಇನ್ನು, ಸರಣಿಯ 5 ಪಂದ್ಯಗಳಲ್ಲೂ 50+ ರನ್ ಗಳಿಸಿದ ಕೇವಲ 2ನೇ ಬ್ಯಾಟರ್ ಜೈಸ್ವಾಲ್. ರುಸಿ ಮೋದಿ 1948-49ರಲ್ಲಿ ವಿಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದರು.
ಕೊಹ್ಲಿ ದಾಖಲೆ ಪತನ: ಜೈಸ್ವಾಲ್ ಸರಣಿಯಲ್ಲಿ 712 ರನ್ ಗಳಿಸಿದ್ದು, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರಲ್ಲಿ ಅಗ್ರಸ್ಥಾನಕ್ಕೇರಿದರು. ಈ ಮೊದಲು ವಿರಾಟ್ ಕೊಹ್ಲಿ 2016ರ ಸರಣಿಯಲ್ಲಿ 655 ರನ್ ಕಲೆಹಾಕಿದ್ದರು.
02ನೇ ಬ್ಯಾಟರ್: ಟೆಸ್ಟ್ ಸರಣಿಯಲ್ಲಿ 700+ ರನ್ ಗಳಿಸಿದ 2ನೇ ಭಾರತೀಯ ಬ್ಯಾಟರ್ ಜೈಸ್ವಾಲ್. ಸುನಿಲ್ ಗವಾಸ್ಕರ್ ಮೊದಲಿಗರು. ಅವರು ವೆಸ್ಟ್‌ಇಂಡೀಸ್ ವಿರುದ್ಧ 2 ಬಾರಿ(1971, 1978-79) ಈ ಸಾಧನೆ ಮಾಡಿದ್ದರು.