ಡೆಲ್ಲಿ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ ಅಬ್ಬರಿಸಿದ್ದ ಪ್ರಿಯಾನ್ಶ್‌. ಓವರಲ್ಲಿ 6 ಸಿಕ್ಸರ್‌ ಚಚ್ಚಿ ಗಮನ ಸೆಳೆದಿದ್ದ ಯುವ ಬ್ಯಾಟರ್‌. ಉತ್ತರ ಪ್ರದೇಶ ಟಿ20 ಲೀಗ್‌ನಲ್ಲಿ ಮಿಂಚಿದ್ದ ಸ್ವಸ್ತಿಕ್‌ ಛಿಕಾರ.

 ಬೆಂಗಳೂರು: 2025ರ ಐಪಿಎಲ್‌ ಹರಾಜಿನಲ್ಲಿ ಹಲವು ಯುವ ಆಟಗಾರರು ಬಿಕರಿಯಾಗಿದ್ದು, ಈ ಪೈಕಿ ಇಬ್ಬರು ಆಟಗಾರರು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ. ₹3.4 ಕೋಟಿಗೆ ಪಂಜಾಬ್‌ ತಂಡಕ್ಕೆ ಬಿಕರಿಯಾದ ದೆಹಲಿಯ ಸರ್ಕಾರಿ ಶಾಲೆ ಶಿಕ್ಷಕರ ಪುತ್ರ ಪ್ರಿಯಾನ್ಶ್‌ ಆರ್ಯಾ ಹಾಗೂ ₹30 ಲಕ್ಷಕ್ಕೆ ಆರ್‌ಸಿಬಿ ಪಾಲಾದ ಉತ್ತರ ಪ್ರದೇಶದ ಸ್ವಸ್ತಿಕ್‌ ಛಿಕಾರ, ದೇಶಿ ಕ್ರಿಕೆಟ್‌ನಲ್ಲಿ ‘ಸಿಕ್ಸರ್‌ ಮಷಿನ್‌’ಗಳೆಂದೇ ಕರೆಸಿಕೊಳ್ಳುತ್ತಿರುವ ಆಟಗಾರರು.

ಪ್ರಿಯಾನ್ಶ್‌ 2024ರ ಡೆಲ್ಲಿ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ ಕೇವಲ 10 ಇನ್ನಿಂಗ್ಸಲ್ಲಿ 608 ರನ್‌ ಚಚ್ಚಿದ್ದರು. ಒಂದೇ ಓವರಲ್ಲಿ 6 ಸೇರಿ ಟೂರ್ನಿಯಲ್ಲಿ 43 ಸಿಕ್ಸರ್‌ ಸಿಡಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದರು. ಐಪಿಎಲ್‌ ಹರಾಜು ಶುರುವಾಗುವ ಹಿಂದಿನ ದಿನ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಉ.ಪ್ರದೇಶ ವಿರುದ್ಧ 43 ಎಸೆತದಲ್ಲಿ 102 ರನ್‌ ಸಿಡಿಸಿದ್ದರು.

ಇನ್ನು, ಸ್ವಸ್ತಿಕ್‌ 2024ರ ಉ.ಪ್ರದೇಶ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ 1 ಶತಕ, 5 ಅರ್ಧಶತಕದೊಂದಿಗೆ 499 ರನ್‌ ಕಲೆಹಾಕಿ ಎಲ್ಲರ ಗಮನ ಸೆಳೆದಿದ್ದರು. ಈ ಇಬ್ಬರ ಬ್ಯಾಟಿಂಗ್‌ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಇಬ್ಬರ ಮೇಲೂ ಭಾರಿ ನಿರೀಕ್ಷೆ ಇಡಲಾಗಿದೆ.