ಗ್ರೀನ್‌ಲ್ಯಾಂಡ್ ವಶ ಕುರಿತು ಗ್ರೀನ್‌ಲ್ಯಾಂಡ್ ಪ್ರಧಾನಿ ಜೆನ್ಸ್-ಫ್ರೆಡರಿಕ್ ನೀಲ್ಸನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಭಾರಿ ಜಟಾಪಟಿಯೇ ಬುಧವಾರ ನಡೆದಿದೆ.
ವಾಷಿಂಗ್ಟನ್: ಗ್ರೀನ್‌ಲ್ಯಾಂಡ್ ವಶ ಕುರಿತು ಗ್ರೀನ್‌ಲ್ಯಾಂಡ್ ಪ್ರಧಾನಿ ಜೆನ್ಸ್-ಫ್ರೆಡರಿಕ್ ನೀಲ್ಸನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಭಾರಿ ಜಟಾಪಟಿಯೇ ಬುಧವಾರ ನಡೆದಿದೆ.
‘ನಾವು ಡೆನ್ಮಾರ್ಕ್‌ನ ಭಾಗವಾಗಲು ಬಯಸುತ್ತೇವೆಯೇ ಹೊರತು ಅಮೆರಿಕಕ್ಕೆ ಸೇರ್ಪಡೆ ಆಗುವುದಿಲ್ಲ’ ಎಂದು ಗ್ರೀನ್‌ಲ್ಯಾಂಡ್ ಪ್ರಧಾನಿ ಜೆನ್ಸ್-ಫ್ರೆಡರಿಕ್ ನೀಲ್ಸನ್ ಸ್ಪಷ್ಟಪಡಿಸಿದ್ದಾರೆ. ಆದರೆ ಆದರೆ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಟ್ರಂಪ್, ‘ಇಂಥ ಹೇಳಿಕೆ ಭಾರೀ ಸಮಸ್ಯೆ ಸೃಷ್ಟಿಸಲಿದೆ. ರಾಷ್ಟ್ರೀಯ ಭದ್ರತೆಯ ಉದ್ದೇಶಕ್ಕಾಗಿ ಅಮೆರಿಕಕ್ಕೆ ಗ್ರೀನ್‌ಲ್ಯಾಂಡ್ ಅಗತ್ಯವಿದೆ ಹಾಗೂ ನಾವು ನಿರ್ಮಿಸುತ್ತಿರುವ ಗೋಲ್ಡನ್ ಡೋಮ್ ವಾಯುರಕ್ಷಣಾ ವ್ಯವಸ್ಥೆಗೆ ಅದು ಅತ್ಯಗತ್ಯವಾಗಿದೆ. ಅದನ್ನು ಪಡೆಯಲು ನ್ಯಾಟೋ ನಮಗೆ ದಾರಿ ಮಾಡಿಕೊಡಬೇಕು. ಇದಕ್ಕಿಂತ ಕಮ್ಮಿ ನನಗೆ ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ.
ಗ್ರೀನ್‌ಲ್ಯಾಂಡ್ ಪ್ರಧಾನಿ ಹೇಳೋದೇನು?:
‘ನಾವೀಗ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದೇವೆ. ನಮ್ಮ ಮುಂದೆ ಅಮೆರಿಕ ಮತ್ತು ಡೆನ್ಮಾರ್ಕ್‌ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದರೆ ನಾವು ಖಂಡಿತ ಡೆನ್ಮಾರ್ಕ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ’ ಎಂದು ಕೊಪನ್‌ಹೆಗನ್‌ನಲ್ಲಿ ಡೆನ್ಮಾರ್ಕ್ ಪ್ರಧಾನಿ ಮೆಟೆ ಫೆಡ್ರಿಕ್ಸನ್ ಸಮ್ಮುಖದಲ್ಲೇ ಗ್ರೀನ್‌ಲ್ಯಾಂಡ್ ಪ್ರಧಾನಿ ನೀಲ್ಸನ್ ಘೋಷಿಸಿದ್ದಾರೆ.
ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಕುರಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಮತ್ತು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರ ಜತೆಗೆ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ನ ವಿದೇಶಾಂಗ ಸಚಿವರ ಮಾತುಕತೆ ನಡೆಯಲಿದೆ. ಇದಕ್ಕೂ ಮುನ್ನ ಗ್ರೀನ್ ಲ್ಯಾಂಡ್ ಪ್ರಧಾನಿ ಈ ರೀತಿಯ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಟ್ರಂಪ್ ಬೆದರಿಕೆ:
ಗ್ರೀನ್‌ಲ್ಯಾಂಡ್ ಪ್ರಧಾನಿ ಹೇಳಿಕೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನನಗೆ ಫ್ರೆಡರಿಕ್ ನೀಲ್ಸನ್ ಯಾರೆಂದೇ ಗೊತ್ತಿಲ್ಲ. ಆದರೆ, ಇಂಥ ಹೇಳಿಕೆ ಅವರಿಗೆ ದೊಡ್ಡ ಸಮಸ್ಯೆ ಸೃಷ್ಟಿಸಲಿದೆ’ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಇನ್ನು ಟ್ರುತ್ ಸೋಷಿಯಲ್ ಸಾಮಾಜಿಕ ಮಾಧ್ಯಮದಲ್ಲೂ ಪೋಸ್ಟ್ ಮಾಡಿರುವ ಟ್ರಂಪ್, ‘ರಾಷ್ಟ್ರೀಯ ಭದ್ರತೆಯ ಉದ್ದೇಶಕ್ಕಾಗಿ ನಮಗೆ ಗ್ರೀನ್‌ಲ್ಯಾಂಡ್ ಅಗತ್ಯವಿದೆ. ನಾವು ನಿರ್ಮಿಸುತ್ತಿರುವ ಗೋಲ್ಡನ್ ಡೋಮ್‌ಗೆ ಅದು ಅತ್ಯಗತ್ಯ. ಅದನ್ನು ಪಡೆಯಲು ನ್ಯಾಟೋ ನಮಗೆ ದಾರಿ ಮಾಡಿಕೊಡಬೇಕು. ನಾವು ಮಾಡದಿದ್ದರೆ, ರಷ್ಯಾ ಅಥವಾ ಚೀನಾ ಮಾಡುತ್ತದೆ. ಆದರೆ ಅದಕ್ಕೆ ನಾವು ಅವಕಾಶ ನೀಡಲ್ಲ. ಅಮೆರಿಕಕ್ಕೆ ನಾನು ಅಗಾಧ ಸೇನಾ ಶಕ್ತಿ ನೀಡಿದ್ದೇನೆ. ನಮ್ಮೊಂದಿಗೆ ಸೇರಿದರೆ ನ್ಯಾಟೋ ಕೂಡ ಬಲಶಾಲಿ ಆಗಲಿದೆ. ಅದಕ್ಕಿಂತ ಕಮ್ಮಿ ನನಗೆ ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ.
ಗ್ರೀನ್‌ಲ್ಯಾಂಡ್
ಬೇಕೇ ಬೇಕು
ರಾಷ್ಟ್ರೀಯ ಭದ್ರತೆಯ ಉದ್ದೇಶಕ್ಕಾಗಿ ನಮಗೆ ಗ್ರೀನ್‌ಲ್ಯಾಂಡ್ ಅಗತ್ಯವಿದೆ. ನಾವು ನಿರ್ಮಿಸುತ್ತಿರುವ ಗೋಲ್ಡನ್ ಡೋಮ್‌ಗೆ ಅದು ಅತ್ಯಗತ್ಯ. ಅದನ್ನು ಪಡೆಯಲು ನ್ಯಾಟೋ ನಮಗೆ ದಾರಿ ಮಾಡಿಕೊಡಬೇಕು.
- ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

