ಜೆರುಸಲೇಂ: ಹಮಾಸ್‌ ರೀತಿ ಇಸ್ರೇಲ್‌ ಮೇಲೆ ಮತ್ತೆ ದಾಳಿಗೆ ಸಜ್ಜಾಗಿದ್ದ ಹಿಜ್ಬುಲ್ಲಾ ಉಗ್ರರು!

| Published : Oct 02 2024, 01:08 AM IST / Updated: Oct 02 2024, 08:25 AM IST

ಸಾರಾಂಶ

ಇಸ್ರೇಲ್ ಮೇಲೆ ಹಮಾಸ್ ನಡೆಸಿದ ರೀತಿಯ ದಾಳಿಯನ್ನು ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಕೂಡ ಯೋಜಿಸಿದ್ದರು ಎಂದು ಇಸ್ರೇಲ್‌ ಹೇಳಿದೆ. ಹಿಜ್ಬುಲ್ಲಾ ಉಗ್ರರನ್ನು ನಿರ್ನಾಮ ಮಾಡುವುದೇ ಇದಕ್ಕೆ ಕಾರಣ ಎಂದು ಇಸ್ರೇಲ್‌ ಸೇನೆಯ ವಕ್ತಾರ ಡೇನಿಯಲ್‌ ಹಗಾರಿ ತಿಳಿಸಿದ್ದಾರೆ.  

ಜೆರುಸಲೇಂ: ಇಸ್ರೇಲ್‌- ಪ್ಯಾಲೆಸ್ತೀನ್‌ ನಡುವಣ ಯುದ್ಧಕ್ಕೆ ಮೂಲ ಕಾರಣವಾದ, 2023ರ ಅ.7ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನಡೆಸಿದ್ದ ರೀತಿಯದ್ದೇ ದಾಳಿ ಯೋಜನೆಯನ್ನು ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಕೂಡ ರೂಪಿಸಿದ್ದರು. ಇದನ್ನು ತಪ್ಪಿಸಲೆಂದೇ ಹಿಜ್ಬುಲ್ಲಾ ಉಗ್ರರನ್ನು ನಾಶಪಡಿಸಲಾಗುತ್ತಿದೆ ಎಂದು ಇಸ್ರೇಲ್‌ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದೆ.

ತನ್ನ ಜತೆ ಗಡಿ ಹಂಚಿಕೊಂಡಿರುವ ದಕ್ಷಿಣ ಲೆಬನಾನ್‌ ಅನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಸೇನಾ ಪಡೆಗಳು ದಾಳಿಯನ್ನು ತೀವ್ರಗೊಳಿಸಿರುವಾಗಲೇ ಸೇನೆಯ ವಕ್ತಾರ ಡೇನಿಯಲ್‌ ಹಗಾರಿ ಅವರು ಮಂಗಳವಾರ ಹೊಸ ವಿಷಯವನ್ನು ತಿಳಿಸಿದ್ದಾರೆ.

ಇಸ್ರೇಲ್‌ಗೆ ನುಗ್ಗಿ, ಇಸ್ರೇಲಿಗರ ಮೇಲೆ ದಾಳಿ ಮಾಡಿ, ಅಮಾಯಕ ಪುರುಷ, ಮಹಿಳೆ ಹಾಗೂ ಮಕ್ಕಳ ನರಮೇಧ ನಡೆಸಲು ಲೆಬನಾನ್‌ನ ಉಗ್ರ ಸಂಘಟನೆ ಯೋಜನೆ ರೂಪಿಸಿತ್ತು. ಇದಕ್ಕೆ ‘ಕಾಂಖರ್‌ ಗಲೀಲಿ’ ಎಂಬ ಹೆಸರನ್ನೂ ಇಟ್ಟಿತ್ತು. 2023ರ ಅ.7ರಂದು ನಡೆದಂತಹುದೇ ದಾಳಿ ಇದಾಗಿತ್ತು. ಅದಕ್ಕೆ ಅವಕಾಶ ನೀಡಲು ನಾವು ತಯಾರಿಲ್ಲ ಎಂದು ಹೇಳಿದರು.

2023ರ ಅ.7ರಂದು ಸುಮಾರು 3000 ಹಮಾಸ್‌ ಉಗ್ರರು ಇಸ್ರೇಲ್‌ನೊಳಕ್ಕೆ ಭೂಮಿ, ಆಗಸ ಹಾಗೂ ಸಮುದ್ರ ಮುಖೇನ ನುಸುಳಿದ್ದರು. 1200 ಇಸ್ರೇಲಿ ಜನರನ್ನು ಕೊಂದು 251 ಮಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ಇಸ್ರೇಲಿಗರ ಮೇಲೆ ಲೈಂಗಿಕ ದೌರ್ಜನ್ಯ ಕೂಡ ಎಸಗಿದ್ದರು. ಆ ಘಟನೆಯಿಂದಾಗಿ ಇಸ್ರೇಲ್‌- ಪ್ಯಾಲೆಸ್ತೀನ್‌ ಮಧ್ಯೆ ಯುದ್ಧ ಆರಂಭವಾಯಿತು. ಈವರೆಗೂ ಅದು ನಿಂತಿಲ್ಲ.

ಇರಾನ್‌ ಗುಪ್ತಚರ ಸಂಸ್ಥೆ

ಮುಖ್ಯಸ್ಥ ಇಸ್ರೇಲ್‌ ಸ್ಪೈ: ಇರಾನ್‌ ಮಾಜಿ ಪ್ರಧಾನಿ

ಟೆಹ್ರಾನ್‌: ಇಸ್ರೇಲ್‌ ಬೇಹುಗಾರಿಕಾ ಸಂಸ್ಥೆ ಮೊಸಾದ್‌ ಕಾರ್ಯಾಚರಣೆ ವಿರುದ್ಧ ಕಾರ್ಯತಂತ್ರ ರೂಪಿಸಬೇಕಿದ್ದ ಇರಾನಿನ ಗುಪ್ತಚರ ಇಲಾಖೆ ಮುಖ್ಯಸ್ಥರೇ ಇಸ್ರೇಲಿ ಏಜೆಂಟ್‌ ಆಗಿದ್ದಾರೆ ಎಂದು ಇರಾನ್‌ನ ಮಾಜಿ ಅಧ್ಯಕ್ಷ ಮಹಮೂದ್‌ ಅಹ್ಮದಿನೆಜಾದ್‌ ಸ್ಫೋಟಕ ಆರೋಪ ಮಾಡಿದ್ದಾರೆ. ಮುಖ್ಯಸ್ಥ ಮಾತ್ರವಲ್ಲದೆ ಇನ್ನೂ 20 ಜನರು ಇಸ್ರೇಲ್‌ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಷಯ ಗೊತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಹ್ಮದಿನೇಜಾದ್‌ ಆರೋಪಿಸಿದ್ದಾರೆ. ಇತ್ತೀಚೆಗೆ ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ರಹಸ್ಯ ಸಭೆ ನಡೆಸುತ್ತಿದ್ದ ಸ್ಥಳದ ಮಾಹಿತಿಯನ್ನು ಇರಾನ್‌ ಗೂಢಚರ ಸಿಬ್ಬಂದಿಯೇ ಇಸ್ರೇಲ್‌ಗೆ ನೀಡಿದ್ದರು ಎಂದು ವರದಿಗಳು ಹೇಳಿದ್ದವು.

ಹಿಜ್ಬುಲ್ಲಾ ಬಾಸ್‌ ಸಾವಿಗೀಡಾಗಿದ್ದು

ಬಾಂಬ್‌ನಿಂದ ಅಲ್ಲ, ಉಸಿರುಗಟ್ಟಿ ಸಾವು: ವರದಿ

ಜೆರುಸಲೇಂ: ಲೆಬನಾನ್‌ನ ಹಿಜ್ಬುಲ್ಲಾ ಉಗ್ರ ಸಂಘಟನೆಯ ಪರಮೋಚ್ಚ ನಾಯಕ ಹಸನ್‌ ನಸ್ರಲ್ಲಾ ಸಾವಿಗೆ ವಿಷಾನಿಲ ಕಾರಣ ಎಂದು ಹೇಳಲಾಗುತ್ತಿದೆ. 80 ಟನ್‌ ತೂಕದ ಬಾಂಬ್‌ ದಾಳಿ ನಡೆದರೂ ನಸ್ರಲ್ಲಾ ಮೇಲೆ ಒಂದೂ ಗಾಯದ ಗುರುತು ಇಲ್ಲದಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.60 ಅಡಿ ಆಳದ ಬಂಕರ್‌ನಲ್ಲಿ ಕುಳಿತು ಹಿಜ್ಬುಲ್ಲಾ ನಾಯಕಗಣದ ಜತೆ ಇಸ್ರೇಲ್‌ ಮೇಲೆ ಹೇಗೆ ದಾಳಿ ನಡೆಸುವುದು ಎಂಬುದರ ಬಗ್ಗೆ ನಸ್ರಲ್ಲಾ ಸೆ.27ರಂದು ಸಭೆ ನಡೆಸುತ್ತಿದ್ದ. ಅದೇ ವೇಳೆ, ಇಸ್ರೇಲ್‌ನ ವಿಮಾನ 80 ಟನ್‌ ತೂಕದ ‘ಬಂಕರ್ ಬ್ಲಾಸ್ಟ್‌’ ಬಾಂಬ್‌ ಅನ್ನು ಹಾಕಿ ಆ ಸ್ಥಳವನ್ನೇ ಧ್ವಂಸಗೊಳಿಸಿತ್ತು. ಆ ಬಾಂಬ್‌ ಸ್ಫೋಟದ ವೇಳೆ ಸೃಷ್ಟಿಯಾದ ವಿಷಾನಿಲ ನಸ್ರಲ್ಲಾ ಇದ್ದ ರಹಸ್ಯ ಬಂಕರ್ ಪ್ರವೇಶಿಸಿತ್ತು. ಅದನ್ನು ಸೇವಿಸಿ ಆತ ಸಾವಿಗೀಡಾಗಿದ್ದಾನೆ ಇಸ್ರೇಲ್‌ನ ‘ಚಾನಲ್‌ 12’ ವರದಿ ಮಾಡಿದೆ. ಆದರೆ ಈ ಕುರಿತು ಹಿಜ್ಬುಲ್ಲಾ ಉಗ್ರ ಸಂಘಟನೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ.