ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಪನ್ನುನ್‌ ಹತ್ಯೆ ಸಂಚು ವಿಫಲ: ವರದಿ

| Published : Nov 23 2023, 01:45 AM IST

ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಪನ್ನುನ್‌ ಹತ್ಯೆ ಸಂಚು ವಿಫಲ: ವರದಿ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ನೆಲದಲ್ಲಿ ಕೆನಡಾದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚನ್ನು ವಿಫಲಗೊಳಿಸಿರುವುದಾಗಿ ಅಮೆರಿಕ ಹೇಳಿಕೊಂಡಿದೆ.

ಭಾರತವೇ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ಗಂಭೀರ ಆರೋಪಅಮೆರಿಕ ಸರ್ಕಾರದ ಎಚ್ಚರಿಕೆ ಬಳಿಕ ಸಂಚು ವಿಫಲ

ವಾಷಿಂಗ್ಟನ್‌: ತನ್ನ ನೆಲದಲ್ಲಿ ಕೆನಡಾದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚನ್ನು ವಿಫಲಗೊಳಿಸಿರುವುದಾಗಿ ಅಮೆರಿಕ ಹೇಳಿಕೊಂಡಿದೆ. ಈ ಸಂಚಿನಲ್ಲಿ ಭಾರತೀಯರ ಕೈವಾಡ ಇದೆ ಎಂದು ಗೊತ್ತಾಗಿ ಭಾರತ ಸರ್ಕಾರಕ್ಕೆ ಹತ್ಯೆಯ ಹುನ್ನಾರದ ಬಗ್ಗೆ ಬೈಡೆನ್‌ ಸರ್ಕಾರ ಎಚ್ಚರಿಕೆ ನೀಡಿತ್ತು. ಈ ಮೂಲಕ ಆತನ ಹತ್ಯೆ ಸಂಚನ್ನು ಅಮೆರಿಕ ವಿಫಲಗೊಳಿಸಿತು ಎಂದು ಅಮೆರಿಕ ಪತ್ರಿಕೆ ‘ಫೈನಾನ್ಷಿಯಲ್‌ ಟೈಮ್ಸ್‌’ ವರದಿ ಮಾಡಿದೆ.

ಇತ್ತೀಚೆಗೆ ಕೆನಡಾದಲ್ಲಿ ಹರದೀಪ್‌ ಸಿಂಗ್‌ ನಿಜ್ಜರ್‌ ಎಂಬ ಖಲಿಸ್ತಾನಿ ಉಗ್ರನನ್ನು ಅಜ್ಞಾತರು ಹತ್ಯೆ ಮಾಡಿದ್ದರು. ಈ ಹತ್ಯೆಯಲ್ಲಿ ಭಾರತೀಯರ ಕೈವಾಡ ಇದೆ ಎಂದು ಕೆನಡಾ ಸರ್ಕಾರ ಆರೋಪಿಸಿತ್ತು. ಬಳಿಕ ಕೆನಡಾ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದ ಪನ್ನುನ್‌, ಭಾರತದ ವಿರುದ್ಧ ಬೇಕಾಬಿಟ್ಟಿ ವಾಗ್ದಾಳಿ ನಡೆಸಿದ್ದ. ಇತ್ತೀಚೆಗೆ ವಿಶ್ವಕಪ್‌ ಕ್ರಿಕೆಟ್ ಫೈನಲ್‌ ಪಂದ್ಯದ ವೇಳೆ ವಿಮಾನವೊಂದನ್ನು ಸ್ಫೋಟಿಸುವ ಬೆದರಿಕೆ ಹಾಕಿದ್ದ. ಇದರ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.ಅಮೆರಿಕ ಪತ್ರಿಕೆಯ ಈ ವರದಿ ಬಗ್ಗೆ ಭಾರತ ಸರ್ಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಆದರೆ ಈ ವರದಿ ಬಗ್ಗೆ ಪನ್ನುನ್‌ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯೆ ನೀಡಿದ್ದು, ‘ಅಮೆರಿಕ ನೆಲದಲ್ಲಿ ನನ್ನನ್ನು ಹತ್ಯೆ ಮಾಡುವ ಭಾರತದ ರಾಜತಾಂತ್ರಿಕರ ಸಂಚಿಗೆ ಅಮೆರಿಕ ಸರ್ಕಾರವೇ ಪ್ರತಿಕ್ರಿಯೆ ನೀಡಬೇಕು’ ಎಂದಿದ್ದಾನೆ. ಆದರೆ ಅಮೆರಿಕ ಸರ್ಕಾರ ಹತ್ಯೆ ಸಂಚಿನ ಬಗ್ಗೆ ಈ ಮುಂಚೆ ತಿಳಿಸಿತ್ತೇ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಅಮೆರಿಕ ಸರ್ಕಾರ ಕೂಡ ಈ ಸಂಚಿಗೆ ಸಂಬಂಧಿಸಿ ಯಾರನ್ನಾದರೂ ಬಂಧಿಸಿದೆಯೇ ಎಂಬ ಮಾಹಿತಿಯೂ ಲಭ್ಯವಿಲ್ಲ.