ಇಸ್ಲಾಮಾಬಾದ್‌: ಮೂರೂವರೆ ತಿಂಗಳು ಪೂರೈಸಿರುವ ಇರಾನ್‌ ಜೊತೆಗಿನ ಯುದ್ಧ ಸ್ಥಗಿತ ಸಂಬಂಧ ಭಾನುವಾರ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಡೀಲ್‌ನ ಮಧ್ಯವರ್ತಿ ದೇಶವಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಕೂಡ ಇದೇ ಮಾತು ಹೇಳಿದ್ದಾರೆ.

ಆದರೆ ಡೀಲ್‌ ಆಗುತ್ತದೆ, ಆದ್ರೆ ಇಂದಲ್ಲ ಎಂದು ಎದುರಾಳಿ ದೇಶ ಇರಾನ್‌ ಸ್ಪಷ್ಟನೆ ನೀಡಿದೆ.

ಈ ಕುರಿತು ಟ್ರುತ್‌ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್‌, ‘ಭಾನುವಾರವೇ ನಾವು ಇರಾನ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ. ಇದು 2015ರಲ್ಲಿ ಇರಾನ್‌ ಜತೆ ಅಂದಿನ ಅಧ್ಯಕ್ಷ ಬರಾಕ್‌ ಒಬಾಮಾ ಮಾಡಿಕೊಂಡ ಒಪ್ಪಂದಕ್ಕಿಂತ ಪೂರ್ಣ ಭಿನ್ನವಾಗಿರಲಿದೆ. ಈ ಒಪ್ಪಂದದ ಬಳಿಕ ಇರಾನ್‌ ಅಣ್ವಸ್ತ್ರ ಹೊಂದುವುದರಿಂದ ಪೂರ್ಣ ಹಿಂದಕ್ಕೆ ಸರಿಯಲಿದೆ. ಹೋರ್ಮಜ್‌ ಜಲಸಂಧಿ ಎಲ್ಲರಿಗೂ ಮುಕ್ತವಾಗಲಿದೆ. ಜೊತೆಗೆ ಯಾವುದೇ ಹಣಕಾಸಿನ ವಿನಿಮಯ ಇರುವುದಿಲ್ಲ. ಅಗತ್ಯ ಬಿದ್ದರೆ ಇರಾನ್‌ನ ಅಣ್ವಸ್ತ್ರ ಸಾಮರ್ಥ್ಯ ನಿರ್ನಾಮ ಮಾಡಲು ಅಮೆರಿಕ ತನ್ನ ಸೇನಾ ಬಲ ಬಳಸಲಿದೆ ಎಂದು ಹೇಳಿದ್ದಾರೆ. ಜೊತೆಗೆ ಪರಿಸ್ಥಿತಿ ತಿಳಿಯಾದ ಬಳಿಕ, ನಮ್ಮ ಬಿ2 ಬಾಂಬರ್‌ ದಾಳಿಯಲ್ಲಿ ನೆಲಸಮವಾಗಿರುವ ಇರಾನ್‌ನ ಸಂಸ್ಕರಿತ ಯುರೇನಿಯಂ ಅನ್ನು ಅಮೆರಿಕ ಸುರಕ್ಷಿತವಾಗಿ ಹೊರತೆಗೆಯಲಿದೆ ಎಂದು ಹೇಳಿದ್ದಾರೆ.


ಪಾಕ್‌ ಸುಳಿವು:

ಇದಕ್ಕೂ ಮೊದಲು ಯುದ್ಧ ಸ್ಥಗಿತ ಕುರಿತು ಶನಿವಾರ ಬೆಳಗ್ಗೆ ಮಾಹಿತಿ ನೀಡಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌, ‘ಅಮೆರಿಕ ಮತ್ತು ಇರಾನ್‌ ದೇಶಗಳು ಪ್ರಸ್ತಾವಿತ ಶಾಂತಿ ಒಪ್ಪಂದದ ಚೌಕಟ್ಟುಗಳನ್ನು ಒಪ್ಪಿದ್ದು, ಎಲೆಕ್ಟ್ರಾನಿಕ್‌ ಸಹಿ ಮಾಡಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಮುಂದಿನ ವಾರ ತಾಂತ್ರಿಕ ವಿಷಯಕ್ಕೆ(ಅಣ್ವಸ್ತ್ರ, ಆರ್ಥಿಕ ನಿರ್ಬಂಧ ಇತ್ಯಾದಿ) ಸಂಬಂಧಿಸಿದಂತೆ ಎರಡೂ ದೇಶಗಳು ಮಾತುಕತೆ ನಡೆಸಲಿವೆ. ಈ ಐತಿಹಾಸಿಕ ಶಾಂತಿ ಒಪ್ಪಂದವು ಶಾಶ್ವತ ಶಾಂತಿಗೆ ಅಡಿಪಾಯ ಹಾಕುತ್ತದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದರು.

ಸಮಯವನ್ನು ನಿಗದಿಪಡಿಸಲಾಗಿಲ್ಲ

ಆದರೆ ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ಇರಾನ್‌ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್‌ ಬಘಾಯ್‌, ‘ಆದಷ್ಟು ಬೇಗ ಒಪ್ಪಂದ ಏರ್ಪಡಲಿದೆಯಾದರೂ ಅದಕ್ಕಿನ್ನೂ ಸಮಯವನ್ನು ನಿಗದಿಪಡಿಸಲಾಗಿಲ್ಲ. ಇಂತಹ ವರದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ’ ಎಂದಿದ್ದಾರೆ. ಇದಕ್ಕೂ ಮುನ್ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ ಮಾತನಾಡಿ, ‘ಎಲ್ಲಾ ಮಾಹಿತಿಯನ್ನು ಸರಿಯಾದ ಸಮಯದಲ್ಲಿ ಸಾರ್ವಜನಿಕರೆದುರು ತೆರೆದಿಡಲಾಗುವುದು’ ಎಂದಿದ್ದರು.

ಆದರೆ ಇದಾದ ಬೆನ್ನಲ್ಲೇ ಭಾರತೀಯ ಕಾಲಮಾನ ಶನಿವಾರ ರಾತ್ರಿ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾನುವಾರವೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಹೇಳಿದ್ದಾರೆ.