ಪೂರ್ವ ಅಫ್ಘಾನಿಸ್ತಾನದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪದಲ್ಲಿ 850ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 2500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಾಬೂಲ್‌: ಪೂರ್ವ ಅಫ್ಘಾನಿಸ್ತಾನದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪದಲ್ಲಿ 850ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 2500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಾತ್ರಿ 11.45ರ ಸುಮಾರಿಗೆ ಸಂಭವಿಸಿದ ರಿಕ್ಟರ್‌ ಮಾಪಕದಲ್ಲಿ ಸುಮಾರು 6.0 ತೀವ್ರತೆಯ ಈ ಭೂಕಂಪದಿಂದಾಗಿ ಕುನಾರ್‌ ಪ್ರಾಂತ್ಯದಲ್ಲಿ ಭಾರೀ ಸಾವು-ನೋವು ಸಂಭವಿಸಿದೆ. ಪ್ರಮುಖ ನಗರ ಜಲಾಲಾಬಾದ್‌ನಿಂದ 27 ಕಿ.ಮೀ. ದೂರದಲ್ಲಿರುವ ನಂಗರ್‌ಹಾರ್‌ ಪ್ರಾಂತ್ಯದಲ್ಲಿ ಸುಮಾರು 8 ಕಿ.ಮೀ. ಆಳದಲ್ಲಿ ಈ ಭೂಕಂಪನದ ಕೇಂದ್ರಬಿಂದು ಇತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೆ ಹೇಳಿದೆ. ಭೂಕಂಪನ ಮತ್ತು ಆ ಬಳಿಕದ ಕಂಪನಗಳಿಂದಾಗಿ ಕುನಾರ್‌ ಪ್ರಾಂತ್ಯದಲ್ಲಿ ಹಳ್ಳಿಗೆ ಹಳ್ಳಿಗಳೇ ನೆಲಸಮವಾಗಿವೆ. ಬೆಟ್ಟಗುಡ್ಡಗಳಿಂದಾವೃತವಾದ ಈ ಗ್ರಾಮಗಳಲ್ಲಿ ಅವಶೇಷಗಳಡಿ ಸಿಲುಕಿಹಾಕಿಕೊಂಡಿರುವವರ ರಕ್ಷಣೆ ಮತ್ತು ಮೃತ ಶರೀರ ಮೇಲೆತ್ತಲೂ ಪರದಾಡುವಂಥ ಸ್ಥಿತಿ ಇದೆ.

ಅಫ್ಘಾನಿಸ್ತಾನದ ಹಳ್ಳಿಗಳಲ್ಲಿ ಹೆಚ್ಚಿನ ಮನೆಗಳನ್ನು ಮಣ್ಣು ಮತ್ತು ಮರಗಳಿಂದ ಕಟ್ಟಿರುವ ಹಿನ್ನೆಲೆಯಲ್ಲಿ ಭೂಕಂಪನದ ತೀವ್ರತೆಗೆ ಅವರು ತರಗೆಲೆಗಳಂತೆ ಉದುರಿಬಿದ್ದಿವೆ. ಈಗಾಗಲೇ ಹೆಲಿಕಾಪ್ಟರ್‌ ಬಳಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಾಲಿಬಾನ್‌ ಸರ್ಕಾರದ ವಕ್ತಾರರು ಹೇಳಿಕೊಂಡಿದ್ದಾರೆ.

2023ರ ಅಕ್ಟೋಬರ್‌ನಲ್ಲಿ ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಆ ಸಂದರ್ಭದಲ್ಲಿ ಸುಮಾರು 4,000 ಮದಿ ಸಾವಿಗೀಡಾಗಿದ್ದರು ಎಂದು ತಾಲಿಬಾನ್‌ ಸರ್ಕಾರ ಹೇಳಿಕೊಂಡಿತ್ತು.

ಮಾನವೀಯ ನೆರವು ನೀಡಲು ಸಿದ್ಧ-ಮೋದಿ

ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತರ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅ‍ವರು, ಇಂಥ ಸಂಕಷ್ಟದ ಸಂದರ್ಭದಲ್ಲಿ ಭಾರತವು ಅಫ್ಘಾನಿಸ್ತಾನದ ಜತೆಗೆ ನಿಲ್ಲಲಿದೆ. ಸಾಧ್ಯವಾದ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.ಅಪ್ಘಾನ್‌ ನೆರವಿಗೆ ಭಾರತಭೂಕಂಪಕ್ಕೆ ತುತ್ತಾಗಿರುವ ಅಪ್ಘಾನಿಸ್ತಾನದ ನೆರವಿಗೆ ಭಾರತ ಧಾವಿಸಿದೆ. 

ಈ ಬಗ್ಗೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ, ‘ಅಪ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮಿರ್‌ ಖಾನ್ ಮುತ್ತಕಿ ಅವರೊಂದಿಗೆ ಮಾತನಾಡಿ, ಮೃತಪಟ್ಟವರಿಗೆ ಸಂತಾಪ ಸೂಚಿಸಿದೆ, ಕಾಬೂಲ್‌ನಲ್ಲಿ 1000 ಕುಟುಂಬಗಳಿಗೆ ಭಾರತ ಟೆಂಟ್‌ ನೀಡಿದೆ. ಭಾರತೀಯ ಮಿಷನ್ 15 ಟನ್‌ ಆಹಾರ ಸಾಮಾಗ್ರಿಗಳನ್ನು ತಕ್ಷಣವೇ ಕಾಬೂಲ್‌ನಿಂದ ಕುನಾರ್‌ಗೆ ಸಾಗಿಸುತ್ತಿದೆ. ನಾಳೆಯಿಂದ ಭಾರತದಿಂದ ಹೆಚ್ಚಿನ ಸಾಮಾಗ್ರಿಗಳನ್ನು ಕಳುಹಿಸಲಾಗುವುದು. ಈ ಕಷ್ಟದ ಸಮಯದಲ್ಲಿ ಭಾರತ ಅಪ್ಘಾನಿಸ್ತಾನದ ಬೆಂಬಲಕ್ಕೆ ನಿಂತಿದೆ’ ಎಂದಿದ್ದಾರೆ.

- ಕುನಾರ್‌ ಪ್ರಾಂತ್ಯ ಗಡಗಡ । ಹಲವು ಇಡೀ ಗ್ರಾಮಗಳೇ ನೆಲಸಮ

- 6.0 ತೀವ್ರತೆಯ ಕಂಪನ । 2500ಕ್ಕೂ ಹೆಚ್ಚು ಮಂದಿಗೆ ಗಾಯ--

- ಭಾನುವಾರ ರಾತ್ರಿ ರಾತ್ರಿ 11.45ರ ಸುಮಾರಿಗೆ ಆಫ್ಘಾನಿಸ್ತಾನದ ಹಲವು ಕಡೆ ಭಾರಿ ಭೂಕಂಪ

- ಜಲಾಲಾಬಾದ್‌ನಿಂದ 27 ಕಿ.ಮೀ. ದೂರದ ನಂಗರ್‌ಹಾರ್‌ ಬಳಿ 8 ಕಿ.ಮೀ. ಆಳದಲ್ಲಿ ಕಂಪನ ಕೇಂದ್ರ

- ಇದಾದ ನಂತರ ಹಲವು ಪಶ್ಚಾತ್‌ ಕಂಪನ. ಬೆಟ್ಟ ಗುಡ್ಡದಿಂದ ಆವೃತವಾದ ಹಲವು ಹಳ್ಳಿಗಳು ನಾಶ

- ಸಿಲುಕಿ ಹಾಕಿಕೊಂಡಿರುವ ವ್ಯಕ್ತಿಗಳ ರಕ್ಷಣೆ, ಮೃತರ ಶರೀರ ಮೇಲೆತ್ತಲೂ ಪರದಾಡುವಂಥ ಸ್ಥಿತಿ

- ಮನೆಗಳು ಮಣ್ಣಿಂದ ನಿರ್ಮಿತ. ಇದರಿಂದ ಸಾವು ಅಧಿಕ. ಸಾವು-ನೋವಿನ ಸಂಖ್ಯೆ ಏರುವ ಆತಂಕ

- ದುರಂತಕ್ಕೆ ಭಾರತ ಪ್ರಧಾನಿ ಮೋದಿ ಆಘಾತ. ಮಾನವೀಯ ನೆರವು ನೀಡಲು ಸಿದ್ಧ ಎಂದು ಘೋಷಣೆ