ಕೋವಿಡ್‌ ಬಳಿಕ ಚೀನಾದಲ್ಲಿ ಮತ್ತೊಂದು ನಿಗೂಢ ಸೋಂಕು

| Published : Nov 24 2023, 01:30 AM IST

ಸಾರಾಂಶ

ಉತ್ತರ ಚೀನಾದ ಶಾಲೆ ಮಕ್ಕಳಲ್ಲಿ ಶ್ವಾಸಕೋಶ ಉರಿ, ತೀವ್ರ ಜ್ವರದ ಬಾಧೆ. ಸೋಂಕಿತರಿಂದ ಆಸ್ಪತ್ರೆಯ ಬೆಡ್‌ಗಳು ಫುಲ್‌ । ಎಲ್ಲೆಂದರಲ್ಲಿ ಮಲಗಿಸಿ ಚಿಕಿತ್ಸೆ. ಕೋವಿಡ್‌ ಬಗ್ಗೆ ಮೊದಲು ತಿಳಿಸಿದ್ದ ಸಂಸ್ಥೆಯಿಂದ ಈಗ ಮತ್ತೆ ಚೀನಾಕ್ಕೆ ಎಚ್ಚರಿಕೆ.

ನಿಗೂಢ ಹೇಗೆ?

- ಶ್ವಾಸಕೋಶದ ಉರಿ, ತೀವ್ರ ಜ್ವರ

- ಸಾಮಾನ್ಯ ಜ್ವರ, ಉಸಿರಾಟದ ತೊಂದರೆ, ಕೋವಿಡ್‌ ರೀತಿಯ ಲಕ್ಷಣಗಳು ಇಲ್ಲ

- ನ್ಯುಮೋನಿಯಾ ರೀತಿ ಇದೆ. ಆದರೆ ನ್ಯುಮೋನಿಯಾ ಅಲ್ಲ

--

ಚೀನಾದಿಂದ ವರದಿ ಕೇಳಿದ ಡಬ್ಲ್ಯುಎಚ್‌ಒ

ಉತ್ತರ ಚೀನಾದ ಮಕ್ಕಳಲ್ಲಿ ಕಂಡುಬಂದಿರುವ ಹೊಸ ಸೋಂಕಿನ ಕುರಿತು ತನ್ನೊಂದಿಗೆ ಅಗತ್ಯ ಮಾಹಿತಿ ಹಂಚಿಕೊಳ್ಳುವಂತೆ ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಧಿಕೃತವಾಗಿ ಸೂಚಿಸಿದೆ. ಕಾಯಿಲೆ ಬಗ್ಗೆ ಮುಚ್ಚುಮರೆ ಬೇಡ, ಮಾಹಿತಿ ನೀಡಿ ಎಂದೂ ಸೂಚನೆ ನೀಡಿದೆ.

----ಬೀಜಿಂಗ್‌: ಸರಿಯಾಗಿ 4 ವರ್ಷಗಳ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡು ಬಳಿಕ ಇಡೀ ಜಗತ್ತನ್ನೇ ನಡುಗಿಸಿದ್ದ ಕೋವಿಡ್‌ ಸೋಂಕಿನ ಕರಾಳ ನೆನಪು ಮಾಸುತ್ತಿರುವ ಹೊತ್ತಿನಲ್ಲೇ ಕಮ್ಯುನಿಸ್ಟ್‌ ದೇಶದಲ್ಲಿ ಮತ್ತೊಂದು ನಿಗೂಢ ಸೋಂಕು ಭಾರೀ ಪ್ರಮಾಣದಲ್ಲಿ ವ್ಯಾಪಿಸುತ್ತಿದ್ದು, ಆತಂಕ ಹುಟ್ಟುಹಾಕಿದೆ. ರಾಜಧಾನಿ ಬೀಜಿಂಗ್‌ ಮತ್ತು ರಾಜಧಾನಿಯಿಂದ 500 ಮೈಲು ದೂರದ ನಿಯಾನ್‌ನಿಂಗ್‌ ಹಾಗೂ ಇತರೆ ಕೆಲ ಪ್ರಾಂತ್ಯದ ಶಾಲಾ ಮಕ್ಕಳಲ್ಲಿ ನಿಗೂಢ ಸ್ವರೂಪದ ನ್ಯುಮೋನಿಯಾ ಕಾಣಿಸಿಕೊಂಡಿದೆ.ಕಳೆದ ಕೆಲ ದಿನಗಳಲ್ಲಿ ಈ ಸೋಂಕು ತೀವ್ರ ಪ್ರಮಾಣದಲ್ಲಿ ಪ್ರಸರಣಗೊಂಡಿದ್ದು, ಆಸ್ಪತ್ರೆಗೆ ಮಕ್ಕಳ ದಾಖಲಾತಿ ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಹೆಚ್ಚಿದೆ. ಪರಿಣಾಮ ಆಸ್ಪತ್ರೆಗಳು ಇನ್ನು ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಟ್ಟ ತಲುಪಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಇದು 2019ರಲ್ಲಿ ಆರಂಭಗೊಂಡು 2020ರ ವೇಳೆಗೆ ವ್ಯಾಪಿಸಿದ್ದ ಕೋವಿಡ್‌ ಪರಿಸ್ಥಿತಿಯನ್ನೇ ನೆನಪಿಸಿದೆ.

ಸೋಂಕು ತಗುಲಿದ ಮಕ್ಕಳು ಶ್ವಾಸಕೋಶದ ಉರಿ ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಆದರೆ ಫ್ಲ್ಯೂ, ಆರ್‌ಎಸ್‌ವಿ ಅಥವಾ ಕೋವಿಡ್‌ನಂಥ ಇತರೆ ಶ್ವಾಸಕೋಶ ಸಂಬಂಧಿ ಸಮಸ್ಯೆ ವೇಳೆ ಕಾಣಿಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಸಂಪೂರ್ಣ ಭಿನ್ನವಾಗಿದೆ. ಹೀಗಾಗಿ ಕಳವಳಕ್ಕೆ ಕಾರಣವಾಗಿದೆ. ದೇಶದಲ್ಲಿ ಚಳಿಗಾಲ ವ್ಯಾಪಕವಾಗುತ್ತಿರುವ ಹೊತ್ತಿನಲ್ಲೇ ಕಾಣಿಸಿಕೊಂಡ ಈ ಸೋಂಕು ಪ್ರಸಕ್ತ ವಾತಾವರಣದಲ್ಲಿ ಇನ್ನಷ್ಟು ವ್ಯಾಪಕವಾಗುವ ಆತಂಕವೂ ಇದೆ.ಆಸ್ಪತ್ರೆಗಳು ಭರ್ತಿ:

ನಿಗೂಢ ನ್ಯುಮೋನಿಯಾದ ಕಾರಣ ಬೀಜಿಂಗ್‌ ಮತ್ತು ನಿಯಾನ್‌ನಿಂಗ್‌ ಪ್ರಾಂತ್ಯದ ಆಸ್ಪತ್ರೆಗಳು ಮಕ್ಕಳಿಂದ ತುಂಬಿ ತುಳುಕುತ್ತಿದ್ದು, ಇನ್ನಷ್ಟು ಸೋಂಕಿತರು ಬಂದರೆ ದಾಖಲು ಮಾಡಲಾಗದ ಸ್ಥಿತಿಗೆ ತಲುಪಿವೆ. ಆಸ್ಪತ್ರೆಯ ಬೆಡ್‌ಗಳೆಲ್ಲಾ ತುಂಬಿ ಹೋಗಿವೆ. ಎಲ್ಲೆಡೆ ಮಕ್ಕಳಿಗೆ ಡ್ರಿಪ್ ಹಾಕಿ ಚಿಕಿತ್ಸೆ ನೀಡುತ್ತಿರುವ, ಆಸ್ಪತ್ರೆಯ ಕಾರಿಡಾರ್‌ ಮಕ್ಕಳು ಮತ್ತು ಪೋಷಕರಿಂದ ತುಂಬಿ ತುಳುಕುತ್ತಿರುವುದು ಕಂಡುಬಂದಿದೆ. ಅಲೋಪತಿ ಜೊತೆಗೆ ಚೀನಾದ ಸಾಂಪ್ರದಾಯಿಕ ಔಷಧ ನೀಡುವ ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ಹೀಗಾಗಿ ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ಸರ್ಕಾರ ಶಾಲೆಗಳಿಗೆ ಶೀಘ್ರವೇ ರಜೆ ಘೋಷಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಅಲರ್ಟ್‌:ಜಾಗತಿಕ ಮಟ್ಟದಲ್ಲಿ ಹೊಸ ಸೋಂಕುಗಳ ಬಗ್ಗೆ ನಿಗಾ ಇಡುವ ಪ್ರೊಮೆಡ್‌ ಮೀಡಿಯಾ, ಚೀನಾದಲ್ಲಿ ನಿಗೂಢವಾದ ನ್ಯುಮೋನಿಯಾ ಸೋಂಕು ವ್ಯಾಪಿಸಿರುವ ಬಗ್ಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಅಧಿಕಾರಿಗಳು ಇಂಥದ್ದೊಂದು ಸೋಂಕಿನ ವಿಷಯವನ್ನು ಮುಚ್ಚಿಡುವ ಯತ್ನ ಮಾಡುತ್ತಿದ್ದಾರೆಯೇ ಎಂದು ವಿದ್ಯಾರ್ಥಿಗಳ ಪೋಷಕರು ಪ್ರಶ್ನಿಸಿದ್ದಾರೆ ಎಂದು ಪ್ರೊಮೆಡ್‌ ತನ್ನ ಹೇಳಿಕೆಯಲ್ಲಿ ಪ್ರಸ್ತಾಪಿಸಿದೆ. ಅದರ ಬೆನ್ನಲ್ಲೇ ಚೀನಾ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.

2019ರಲ್ಲಿ ಕೋವಿಡ್‌ ಸೋಂಕು ಆರಂಭದ ವೇಳೆಯೂ ಪ್ರೊಮೆಡ್‌ ಇದೇ ರೀತಿಯ ಅಲರ್ಟ್‌ ನೀಡಿತ್ತು. ಅದಾದ ಬಳಿಕ ಚೀನಾ ಅಧಿಕಾರಿಗಳು, ಜಾಗತಿಕ ವಿಜ್ಞಾನಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ವಿಜ್ಞಾನಿಗಳು ಕೋವಿಡ್‌ ಸೋಂಕಿನ ಬಗ್ಗೆ ಗಮನ ಹರಿಸಿದ್ದರು ಎಂಬುದು ಗಮನಾರ್ಹ.

ಅಧಿಕಾರಿಗಳು ಹೇಳೋದೇನು?:

ಕೆಲ ದಿನಗಳ ಹಿಂದಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ಚೀನಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ವಿಜ್ಞಾನಿಗಳು, ‘ದೇಶದಲ್ಲಿ ಕೋವಿಡ್‌ ನಿಯಂತ್ರಣಾ ಕ್ರಮಗಳನ್ನು ತೆಗೆದು ಹಾಕಲಾಗಿದೆ. ಜೊತೆಗೆ ಈ ಸಂದರ್ಭದಲ್ಲಿ ಸೃಷ್ಟಿಯಾಗುವ ಇನ್‌ಫ್ಲ್ಯೂಯೆನ್ಜಾ, ಮೈಕೋಪ್ಲಾಸ್ಮಾ ನ್ಯುಮೋನಿಯಾದಂಥ ರೋಗಕಾರಕ ಬ್ಯಾಕ್ಟೀರಿಯಾಗಳು ಮಕ್ಕಳನ್ನು ಕಾಡಿವೆ. ಇದು ಕೂಡಾ ಕೋವಿಡ್‌ಗೆ ಕಾರಣವಾದ ರೀತಿಯದ್ದೇ ವೈರಸ್‌. ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾ ಮಕ್ಕಳಲ್ಲಿ ಶ್ವಾಸಕೋಶದಲ್ಲಿ ಸೋಂಕಿಗೆ ಕಾರಣವಾಗುತ್ತದೆ. ಕೆಲವೊಂದು ವೇಳೆ ಆಸ್ಪತ್ರೆಗೆ ದಾಖಲಾಗಬೇಕಾದ ಸ್ವರೂಪದ ಸೋಂಕು ಕಾಣಿಸಿಕೊಳ್ಳುತ್ತದೆ. ಈಗ ಕೂಡಾ ಅದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದಿದ್ದರು. ಆದರೆ ನಿರ್ದಿಷ್ಟವಾಗಿ ನಿಗೂಢ ನ್ಯುಮೋನಿಯಾದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ಅದರೆ ಈ ವೇಳೆ ಉಪಸ್ಥಿತರಿದ್ದ ಕೆಲ ಅಧಿಕಾರಿಗಳು, ಇದು ಮೂರು ವರ್ಷದ ಹಿಂದೆ ಕಾಣಿಸಿಕೊಂಡಿದ್ದ ಸೋಂಕಿನ ರೂಪದಲ್ಲೇ ಇದೆ ಎಂಬ ಸುಳಿವು ನೀಡಿದ್ದರು.

--