ಪಾತಕಿ ದಾವೂದ್ ಇಬ್ರಾಹಿಂ ವಿಷಪ್ರಾಶನವಾಗಿದೆ ಎಂಬ ಸಾವಿನ ಸುಳ್ಳುಸುದ್ದಿ ವೈರಲ್‌

| Published : Dec 19 2023, 01:45 AM IST

ಪಾತಕಿ ದಾವೂದ್ ಇಬ್ರಾಹಿಂ ವಿಷಪ್ರಾಶನವಾಗಿದೆ ಎಂಬ ಸಾವಿನ ಸುಳ್ಳುಸುದ್ದಿ ವೈರಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಅನಾಮಿಕ ವ್ಯಕ್ತಿಗಳಿಂದ ವಿಷಪ್ರಾಶನ, ಆಸ್ಪತ್ರೆಯಲ್ಲಿ ಸಾವು ಎಂಬ ಪಾಕ್‌ ಯೂಟ್ಯೂಬರ್‌ನ ಹೇಳಿಕೆ ಹಾಗೂ ಪ್ರಧಾನಿ ಹೆಸರಲ್ಲಿನ ನಕಲಿ ಟ್ವೀಟಿಂದ ದಾವೂದ್‌ ಸಾವಿನ ವದಂತಿ ಸೃಷ್ಟಿ. ಇದೆಲ್ಲ ಸುಳ್ಳು ಎಂದು ಖಚಿತಪಡಿಸಿದ ಭಾರತೀಯ ಗುಪ್ತಚರ ಮೂಲಗಳು

ಅನಾಮಿಕ ವ್ಯಕ್ತಿಗಳಿಂದ ವಿಷಪ್ರಾಶನ, ಆಸ್ಪತ್ರೆಯಲ್ಲಿ ಸಾವು ಎಂಬ ಗುಸುಗುಸು

ಪಾಕ್‌ ಯೂಟ್ಯೂಬರ್‌ನ ಹೇಳಿಕೆ, ಪ್ರಧಾನಿ ಹೆಸರಲ್ಲಿನ ನಕಲಿ ಟ್ವೀಟಿಂದ ವದಂತಿ

ಇದೆಲ್ಲ ಸುಳ್ಳು: ಗುಪ್ತಚರ ಮೂಲಗಳು

ವದಂತಿ ಕಾರುಬಾರು

ಇಸ್ಲಾಮಾಬಾದ್‌: ಭಾರತಕ್ಕೆ ಬೇಕಾದ 20 ಉಗ್ರರು ವಿದೇಶಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬೆನ್ನಲ್ಲೇ, ಭಾರತಕ್ಕೆ ಬೇಕಾದ ಮೋಸ್ಟ್‌ ವಾಂಟೆಡ್‌ ಉಗ್ರ, 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ಎನ್ನಲಾದ ದಾವೂದ್‌ ಇಬ್ರಾಹಿಂ ಸಾವನ್ನಪ್ಪಿದ್ದಾನೆ ಎಂಬ ವದಂತಿಯೊಂದು ಭಾನುವಾರ ರಾತ್ರಿಯಿಂದೀಚೆಗೆ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಈ ವದಂತಿಗೆ ಪೂರಕವಾಗಿ ಪಾಕ್‌ನಾದ್ಯಂತ ಇಂಟರ್ನೆಟ್‌ ಸ್ಥಗಿತಗೊಂಡಿದ್ದು ಜನರು ದಾವೂದ್‌ ಸಾವಿನ ಸುದ್ದಿಯನ್ನು ನಂಬುವಂತೆ ಮಾಡಿತ್ತು.

ಆದರೆ ಪಾಕಿಸ್ತಾನದ ಯೂಟ್ಯೂಬರ್‌ನೊಬ್ಬ ಮಾಡಿದ ಎಡವಟ್ಟಿನಿಂದ ಹಾಗೂ ಪಾಕ್‌ ಹಂಗಾಮಿ ಪ್ರಧಾನಿ ಹೆಸರಲ್ಲಿನ ನಕಲಿ ಟ್ವೀಟ್‌ನಿಂದ ಇಂಥದ್ದೊಂದು ವದಂತಿ ಹಬ್ಬಿದೆ ಎಂದು ಫ್ಯಾಕ್ಟ್‌ಚೆಕ್‌ ಆದ ಬಳಿಕ ಗೊತ್ತಾಗಿದೆ. ಹೀಗಾಗಿ ದಾವೂದ್‌ ಸಾವಿನ ಸುದ್ದಿ ಸುಳ್ಳು ಎಂದು ಖಚಿತಪಟ್ಟಿದೆ. ಮತ್ತೊಂದೆಡೆ ದಾವೂದ್‌ನ ಆಪ್ತ ಛೋಟಾ ಶಕೀಲ್‌ ಕೂಡಾ ಸಾವಿನ ಸುದ್ದಿಯನ್ನು ಅಲ್ಲಗಳೆದಿದ್ದಾನೆ.

ಭಾನುವಾರ ರಾತ್ರಿ ಆರಂಭವಾದ ಈ ಸುಳ್ಳು ಸುದ್ದಿ, ಸೋಮವಾರವೂ ಭಾರೀ ಪ್ರಮಾಣದಲ್ಲಿ ಮುಂದುವರೆದಿತ್ತು. ಆದರೆ ಈ ಬಗ್ಗೆ ಪಾಕ್‌ ಅಥವಾ ಭಾರತ ಸರ್ಕಾರಗಳಾಗಲೀ, ಪಾಕ್‌ ಮಾಧ್ಯಮಗಳಾಗಲೀ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ವಿಷಪ್ರಾಶನಕ್ಕೆ ಬಲಿ ಎಂಬ ವದಂತಿ:

1993ರ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ದಾವೂದ್‌ ಇಬ್ರಾಹಿಂ, ಅನಾಮಿಕ ವ್ಯಕ್ತಿಗಳ ವಿಷಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿದ್ದ. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಕರಾಚಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಆತನಿಗೆ ರಹಸ್ಯ ರೀತಿಯಲ್ಲಿ ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೇ ರಾತ್ರಿ 8-9ರ ಅವಧಿಯಲ್ಲಿ ದಾವೂದ್‌ ಸಾವನ್ನಪ್ಪಿದ್ದಾನೆ ಎಂದು ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಜೊತೆಗೆ ಈ ಸುದ್ದಿ ಎಲ್ಲಿಯೂ ಹರಡದಿರಲಿ ಎನ್ನುವ ಕಾರಣಕ್ಕೆ ಪಾಕ್‌ ಸರ್ಕಾರ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಿತ್ತು ಎಂದೂ ವರದಿಯಾಗಿತ್ತು. ಇದನ್ನು ಹಲವು ನೆಟ್ಟಿಗರು ಖಚಿತಪಡಿಸಿದ್ದರು. ಮತ್ತೊಂದೆಡೆ ಪಾಕಿಸ್ತಾನದ ಖ್ಯಾತ ಪತ್ರಕರ್ತೆ ಆರ್ಜೂ ಕಾಜ್ಮಿ, ‘ಸರ್ಕಾರ ಟ್ವೀಟರ್‌, ಗೂಗಲ್‌, ಯುಟ್ಯೂಬ್‌ ಸೇವೆಗಳನ್ನು ವ್ಯತ್ಯಯ ಮಾಡುವ ಮೂಲಕ ಯಾವುದೇ ಬೃಹತ್‌ ಘಟನೆಯನ್ನು ಮುಚ್ಚಿಡುವ ಯತ್ನ ಮಾಡುತ್ತಿದೆ’ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು.

ಮಿಯಾಂದಾದ್‌ ಗೊಂದಲ:

ಜೊತೆಗೆ ದಾವೂದ್‌ ಬೀಗರಾದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಬಳಿ ದಾವೂದ್‌ ಸಾವಿನ ಕುರಿತು ಸ್ಪಷ್ಟನೆ ಬಯಸಿದಾಗ, ಅವರ ಕುರಿತು ಪಾಕಿಸ್ತಾನ ಸರ್ಕಾರ ಏನು ಹೇಳಬೇಕೋ ಅದನ್ನು ಹೇಳುತ್ತದೆ ಎಂದು ಹಾರಿಕೆಯ ಉತ್ತರ ನೀಡಿದ್ದರು. ಹೀಗೆ ಎಲ್ಲಾ ವಿಷಯಗಳು ದಾವೂದ್‌ ಸಾವಿನ ಸುದ್ದಿ ಖಚಿತಪಡಿಸುವಂತಿತ್ತು.

ಯೂಟ್ಯೂಬರ್‌ ಎಡವಟ್‌:

ಆದರೆ ಬಳಿಕ ಸುದ್ದಿಯ ಮೂಲವನ್ನು ಹುಡುಕಿದಾಗ ಪಾಕಿಸ್ತಾನದ ಮೂಲದ ಯೂಟ್ಯೂಬರ್‌ ಒಬ್ಬ ಜಾಲತಾಣದಲ್ಲಿದ್ದ ಅಸ್ಪಷ್ಟ ಮಾಹಿತಿ ಆಧರಿಸಿ ದಾವೂದ್‌ ಕುರಿತ ಸುದ್ದಿ ಹರಿಯಬಿಟ್ಟಿದ್ದ. ಅದರ ಜೊತೆಗೆ ಇಂಟರ್ನೆಟ್‌ ಸಂಪರ್ಕ ಏಕಾಏಕಿ ಕಡಿತ ಆದ ವಿಷಯವನ್ನೂ ಜೋಡಿಸಿದ್ದ. ಮತ್ತೊಂದೆಡೆ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್‌ ಹಕ್‌ ಕಾಕರ್ ಹೆಸರಿನಲ್ಲಿ ನಕಲಿ ಟ್ವೀಟರ್‌ ಸಂದೇಶದಲ್ಲಿ ದಾವೂದ್‌ ಸಾವಿಗೆ ಸಂತಾಪ ಸೂಚಿಸಲಾಗಿತ್ತು. ಹೀಗೆ ಮೂರೂ ವಿಷಯಗಳು ಒಂದಕ್ಕೊಂದು ಪೂರಕವಾಗಿದ್ದ ಕಾರಣ, ಕೆಲವೇ ಕ್ಷಣಗಳಲ್ಲಿ ದಾವೂದ್‌ ಕುರಿತ ಸುದ್ದಿ ಜಾಲತಾಣದಲ್ಲಿ ವೈರಲ್ ಆಗಿದ್ದು ಪತ್ತೆಯಾಗಿದೆ. ಹೀಗಾಗಿ ದಾವೂದ್‌ಗೆ ವಿಷಪ್ರಾಶನ ಸುದ್ದಿ ಸುಳ್ಳು ಎಂದು ಖಚಿತಪಟ್ಟಿದೆ. ಇನ್ನು ದಾವೂದ್‌ ಬದುಕಿದ್ದಾನೆ ಎಂಬ ವಿಷಯವನ್ನು ಗುಪ್ತಚರ ಇಲಾಖೆ ಮೂಲಗಳು ಕೂಡಾ ಖಚಿತಪಡಿಸಿವೆ.

ಸಾವಿನ ‘ಸುದ್ದಿ’ ಇದೇ ಮೊದಲಲ್ಲ

ದಾವೂದ್ ಸಾವಿನ ಕುರಿತ ಸುದ್ದಿಗಳು ಹಬ್ಬಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ದಾವೂಡ್‌ ಏಡ್ಸ್‌, ಕಾಲರಾ, ಟೈಫಾಯ್ಡ್‌, ಕೋವಿಡ್‌ನಿಂದ ಸಾವನ್ನಪ್ಪಿದ್ದಾನೆ ಎಂದು ವದಂತಿಗಳು ಹಬ್ಬಿದ್ದವು. ಆದರೆ ಭೂಗತ ಪಾತಕಿ ತನ್ನ ದೇಶದಲ್ಲಿ ಇದ್ದಾನೆ ಎಂದು ಇದುವರೆಗೂ ಒಪ್ಪಿಕೊಳ್ಳದ ಪಾಕಿಸ್ತಾನ ಈ ಬೆಳವಣಿಗಳ ಕುರಿತ ಕೂಡಾ ಪ್ರತಿಕ್ರಿಯೆ ನೀಡಿರಲಿಲ್ಲ.