ಸಾರಾಂಶ
ನ್ಯೂಯಾರ್ಕ್/ನವದೆಹಲಿಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯ ವರದಿಯಿಂದಾಗಿ ಸಂಕಷ್ಟ ಎದುರಿಸಿದ್ದ ಭಾರತದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಇದೀಗ ಅಮೆರಿಕದ ಸರ್ಕಾರವೇ ಮತ್ತೊಂದು ಗಂಭೀರ ಆರೋಪ ಮಾಡಿದೆ.
‘ಅದಾನಿ ಗ್ರೀನ್ ಎನರ್ಜಿ ಕಂಪನಿಯಿಂದ ಭಾರತದ ಕೆಲ ರಾಜ್ಯ ಸರ್ಕಾರಗಳು ಮಾರುಕಟ್ಟೆ ದರಕ್ಕಿಂತ ದುಬಾರಿ ದರಕ್ಕೆ ಸೌರವಿದ್ಯುತ್ ಖರೀದಿಸುವಂತೆ ಒಪ್ಪಂದ ಮಾಡಿಕೊಳ್ಳಲು ಅದಾನಿ ಗ್ರೂಪ್ ಸುಮಾರು 2100 ಕೋಟಿ ರು.ಗಳಷ್ಟು ಲಂಚವನ್ನು ಆಯಾ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನೀಡಿದೆ’ ಎಂದು ಅಮೆರಿಕದ ಕಾನೂನು ಇಲಾಖೆ ಕೋರ್ಟ್‌ಗೆ ವರದಿ ಸಲ್ಲಿಸಿದೆ.
ಅದರ ಬೆನ್ನಲ್ಲೇ ನ್ಯಾಯಾಲಯ ಗೌತಮ್ ಅದಾನಿ ಸೇರಿದಂತೆ 7 ಜನರ ವಿರುದ್ಧ ಬಂಧನದ ವಾರಂಟ್ ಜಾರಿ ಮಾಡಿದೆ.ಈ ವರದಿಯು ಭಾರತದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಕೂಡಲೇ ಅದಾನಿಯನ್ನು ಬಂಧಿಸಬೇಕು ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಇರುವವರೆಗೆ ಅದಾನಿ ಭಾರತದಲ್ಲಿ ಸುರಕ್ಷಿತವಾಗಿರುತ್ತಾರೆ ಎಂದೂ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಅದಾನಿ ವಿರುದ್ಧ ಆರೋಪ ಬಂದರೆ ಅದು ಸುಳ್ಳೆಂದು ಸಾಬೀತುಪಡಿಸುವುದು ಅದಾನಿ ಕೆಲಸ. ಮೋದಿಗೂ ಇದಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದೆ. ಇನ್ನೊಂದೆಡೆ ತನ್ನ ಮೇಲಿನ ಆರೋಪವನ್ನು ಅದಾನಿ ಸಮೂಹ ತಳ್ಳಿಹಾಕಿದೆ.
2021ರಲ್ಲಿ ನಡೆದ ಹಗರಣ:
ಅದಾನಿ ಗ್ರೀನ್ ಕಂಪನಿಯು ಭಾರತದಲ್ಲಿ ಸೌರಶಕ್ತಿ ಘಟಕಗಳನ್ನು ಸ್ಥಾಪಿಸಿ, ಅಲ್ಲಿ ಉತ್ಪಾದನೆಯಾದ ಸೌರವಿದ್ಯುತ್ತನ್ನು ಖರೀದಿಸುವಂತೆ ವಿವಿಧ ರಾಜ್ಯ ಸರ್ಕಾರಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. 2021ರಲ್ಲಿ ಹೀಗೆ ಒಪ್ಪಂದ ಮಾಡಿಕೊಳ್ಳುವಾಗ, ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ರಾಜ್ಯ ಸರ್ಕಾರಗಳು ಸೌರವಿದ್ಯುತ್ ಖರೀದಿಸುವಂತೆ ಮಾಡಲು ಅದಾನಿ ಕಂಪನಿಯ ಅಧಿಕಾರಿಗಳು ಸುಮಾರು 2100 ಕೋಟಿ ರು.ಗಳಷ್ಟು ಲಂಚವನ್ನು ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಅಮೆರಿಕದ ಕಾನೂನು ಇಲಾಖೆ ಹೇಳಿದೆ. ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಛತ್ತೀಸ್‌ಗಢ ಹಾಗೂ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎಂದು ಅಮೆರಿಕ ಆರೋಪಿಸಿದೆ. ಈ ಒಪ್ಪಂದದಿಂದ ಅದಾನಿ ಸಮೂಹ ಮುಂದಿನ 20 ವರ್ಷಗಳಲ್ಲಿ ಅಂದಾಜು 16000 ಕೋಟಿ ರು. ಆದಾಯ ಸಾಧ್ಯತೆ ಹೊಂದಿತ್ತು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.
ಮೆಗಾವ್ಯಾಟ್‌ಗೆ 25 ಲಕ್ಷ ರು.ಲಂಚ:
2021ರಲ್ಲಿ ನಡೆದ ಹಗರಣದ ಕುರಿತು 2022ರಲ್ಲಿ ತನಿಖೆ ಆರಂಭಿಸಲಾಗಿತ್ತು. ಈ ವೇಳೆ ಅದಾನಿ ಸಮೂಹ ವಿವಿಧ ರಾಜ್ಯಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಒಂದು ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ತಲಾ 25 ಲಕ್ಷ ರು.ನಂತೆ ಲಂಚ ಪಾವತಿಸುವ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಒಟ್ಟು 8 ಗಿಗಾವ್ಯಾಟ್ ವಿದ್ಯುತ್ ಖರೀದಿಗೆ ಡೀಲ್ ನಡೆದಿತ್ತು. ಒಪ್ಪಂದದ ವೇಳೆ ಹಲವು ಅಧಿಕಾರಿಗಳನ್ನು ಸ್ವತಃ ಗೌತಮ್ ಅದಾನಿ ಭೇಟಿ ಮಾಡಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಕೋಡ್‌ನೇಮ್:
ಇಡೀ ಹಗರಣದಲ್ಲಿ ಲಂಚ ಪಾವತಿಯ ಮಾಹಿತಿಯನ್ನು ಅದಾನಿ ಗ್ರೀನ್ ಎನರ್ಜಿ ಸಿಇಒ ವಿನೀನ್ ಜೈನ್ ತಮ್ಮ ಮೊಬೈಲ್‌ನಲ್ಲಿ ಫೋಟೋ ಮೂಲಕ ಸಂಗ್ರಹಿಸಿದ್ದರು. ಜೊತೆಗೆ ಆರೋಪಿಗಳು ಲಂಚ ಪಾವತಿ ವೇಳೆ ಗಣ್ಯರ ಹೆಸರನ್ನು ಕೋಡ್‌ನೇಮ್‌ಗಳ ಮೂಲಕ ಬಳಸುತ್ತಿದ್ದರು. ಉದಾಹರಣೆಗೆ ಗೌತಮ್ ಅದಾನಿಯನ್ನು ‘ಎಸ್‌ಎಜಿ’, ‘ಸೂಪರ್ ಅಗ್ರಿಗೇಟರ್’, ‘ನ್ಯುಮೆರೋ ಉನೋ’, ‘ದ ಬಿಗ್ ಮ್ಯಾನ್’ ಎಂದು ಹೆಸರಿಸಲಾಗುತ್ತಿತ್ತು. ಇನ್ನು ಜೈನ್ ಅವರನ್ನು ‘ವಿ’, ‘ಸ್ನೇಕ್’, ‘ನ್ಯುಮೆರೋ ಉನ್ ಮೈನಸ್ ಒನ್’ ಎಂದು ಬಳಸಲಾಗುತ್ತಿತ್ತು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಅಮೆರಿಕದಲ್ಲಿ ಇದು ಭ್ರಷ್ಟಾಚಾರ:
ಈ ವ್ಯವಹಾರ ನಡೆದಿರುವುದು ಭಾರತದಲ್ಲಾದರೂ, ಅದಾನಿ ಗ್ರೀನ್ ಎನರ್ಜಿ ಕಂಪನಿಯ ಸೌರವಿದ್ಯುತ್ ಘಟಕಗಳಲ್ಲಿ ಅಮೆರಿಕದ ಕಂಪನಿಗಳು ಬಂಡವಾಳ ಹೂಡಿಕೆ ಮಾಡಿವೆ. ಅಲ್ಲದೆ ಅಮೆರಿಕದ ಬ್ಯಾಂಕುಗಳಿಂದ ಅದಾನಿ ಈ ಘಟಕಗಳಿಗೆ ಸಾಲ ಪಡೆದಿದ್ದಾರೆ. ಬಂಡವಾಳ ಆಕರ್ಷಿಸುವಾಗ ಮತ್ತು ಸಾಲ ಪಡೆಯುವಾಗ ಅದಾನಿ ಕಂಪನಿಯು ‘ಈ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ’ ಎಂದು ಮುಚ್ಚಳಿಕೆ ನೀಡಿದೆ. ಆದರೆ, ಲಂಚ ನೀಡುವ ಮೂಲಕ ಭ್ರಷ್ಟಾಚಾರ ಎಸಗಿದೆ. ಹೀಗಾಗಿ ಇದು ಅಮೆರಿಕದ ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಅಮೆರಿಕದ ಕಾನೂನು ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಅದಾನಿ ಸೇರಿ 7 ಮಂದಿ ವಿರುದ್ಧ ಆರೋಪ:
ಅಮೆರಿಕದ ಕಾನೂನು ಇಲಾಖೆಯ ಜೊತೆಗೆ ಅಮೆರಿಕದ ಷೇರು ವಿನಿಮಯ ಆಯೋಗ ಕೂಡ ಅದಾನಿ ಕಂಪನಿ ಭ್ರಷ್ಟಾಚಾರ ಎಸಗಿದೆ ಎಂದು ನ್ಯೂಯಾರ್ಕ್ ಕೋರ್ಟ್‌ಗೆ ವರದಿ ಸಲ್ಲಿಸಿದೆ. ವರದಿಯಲ್ಲಿ ಗೌತಮ್ ಅದಾನಿ, ಅವರ ಸಂಬಂಧಿ ಸಾಗರ್ ಅದಾನಿ, ದೆಹಲಿ ಮೂಲದ ಅಜೂರ್ ಪವರ್ ಕಂಪನಿಯ ಅಧಿಕಾರಿಗಳು ಸೇರಿ ಒಟ್ಟು ಏಳು ಮಂದಿಯ ವಿರುದ್ಧ ಆರೋಪ ಮಾಡಲಾಗಿದೆ. ಆರೋಪ ಸಾಬೀತಾದರೆ ಆರೋಪಿಗಳಿಗೆ ಅಮೆರಿಕದಲ್ಲಿ ಭಾರೀ ದಂಡ ವಿಧಿಸಲಾಗುತ್ತದೆ ಮತ್ತು ಅಮೆರಿಕದಲ್ಲಿ ವ್ಯವಹಾರ ನಡೆಸುವುದನ್ನು ನಿಷೇಧಿಸಲಾಗುತ್ತದೆ.
- ದುಬಾರಿ ದರಕ್ಕೆ ವಿದ್ಯುತ್ ಖರೀದಿಸಲು 5 ರಾಜ್ಯಗಳ ಅಧಿಕಾರಿಗಳಿಗೆ ಹಣ- ಅಮೆರಿಕ ಸರ್ಕಾರದಿಂದ ಕೋರ್ಟ್‌ಗೆ ವರದಿ । ಬೆನ್ನಲ್ಲೇ ಬಂಧನ ವಾರಂಟ್- ಅದಾನಿ ಅರೆಸ್ಟ್‌ಗೆ ರಾಹುಲ್ ಗಾಂಧಿ ಆಗ್ರಹ । ಆರೋಪ ನಿರಾಧಾರ: ಅದಾನಿ
ಏನು ಪರಿಣಾಮ?
1. ಕಂಪನಿಯ ವರ್ಚಸ್ಸಿನ ಮೇಲೆ ಜಾಗತಿಕ ಪರಿಣಾಮ
2. ಅಮೆರಿಕ ಮಾರುಕಟ್ಟೆಯಿಂದ ಹಣ ಸಂಗ್ರಹ ಅಸಾಧ್ಯ
3. ಬಂಧನ ವಾರಂಟ್‌ನ ಕಾರಣ ವಿದೇಶ ಪ್ರವಾಸ ಕಷ್ಟ
4. ಭಾರತದಲ್ಲೂ ರಾಜ್ಯಗಳಲ್ಲಿ ಹೂಡಿಕೆ ಮೇಲೆ ಪರಿಣಾಮ
5. ಆರೋಪ ಕೇಳಿಬಂದ ರಾಜ್ಯಗಳಲ್ಲೂ ತನಿಖೆ ಸಂಭವ
ಏನಿದು ಅಕ್ರಮ?- ಅದಾನಿ ಕಂಪನಿಯು ಭಾರತದ ವಿವಿಧ ರಾಜ್ಯಗಳಲ್ಲಿ ಸೌರಶಕ್ತಿ ಘಟಕಗಳನ್ನು ಸ್ಥಾಪನೆ ಮಾಡಿದೆ- ತನ್ನ ವಿದ್ಯುತ್ ಖರೀದಿಸಲು ವಿವಿಧ ರಾಜ್ಯ ಸರ್ಕಾರಗಳ ಜತೆ ಒಪ್ಪಂದವನ್ನೂ ಮಾಡಿಕೊಂಡಿದೆ- ಮಾರುಕಟ್ಟೆ ದರಕ್ಕಿಂತ ಹೆಚ್ಚು ಬೆಲೆಗೆ ಖರೀದಿಯಾಗುವಂತೆ ಮಾಡಲು ಅಧಿಕಾರಿಗಳಿಗೆ ಲಂಚ ನೀಡಿದೆ- ಒಡಿಶಾ, ಆಂಧ್ರ, ತಮಿಳುನಾಡು, ಛತ್ತೀಸ್‌ಗಢ, ಕಾಶ್ಮೀರದ ಅಧಿಕಾರಿಗಳಿಗೆ 2100 ಕೋಟಿ ರು. ಕೊಟ್ಟಿದೆ- ಈ ಅಕ್ರಮ ಒಪ್ಪಂದದಿಂದ ಅದಾನಿ ಗ್ರೂಪ್‌ಗೆ 20 ವರ್ಷದಲ್ಲಿ 16 ಸಾವಿರ ಕೋಟಿ ರು. ಆದಾಯ ಸಾಧ್ಯತೆ- ಅಮೆರಿಕ ಕಾನೂನು ಇಲಾಖೆಯಿಂದ ನ್ಯಾಯಾಲಯಕ್ಕೆ ವರದಿ.
ಅದಾನಿ ಸೇರಿ 7 ಜನರ ವಿರುದ್ಧ ವಾರಂಟ್
ಭಾರತದಲ್ಲಿನ ಅಕ್ರಮಕ್ಕೆ ಅಮೆರಿಕದಲ್ಲೇಕೆ ಕೇಸ್?
- ಅದಾನಿ ಗ್ರೀನ್ ಎನರ್ಜಿ ಕಂಪನಿಯ ಘಟಕಗಳಲ್ಲಿ ಅಮೆರಿಕ ಕಂಪನಿಗಳು ಬಂಡವಾಳ ಹೂಡಿವೆ- ಅಮೆರಿಕದ ಬ್ಯಾಂಕುಗಳಿಂದ ಅದಾನಿ ತಮ್ಮ ಸೌರ ವಿದ್ಯುತ್ ಘಟಕಗಳಿಗೆ ಸಾಲ ಪಡೆದಿದ್ದಾರೆ- ಈ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಮುಚ್ಚಳಿಕೆ ಕೊಟ್ಟು ಅದಾನಿ ಸಾಲ ಪಡೆದಿದ್ದಾರೆ- ಆದರೆ ಈಗ ಲಂಚ ಪಡೆದಿರುವುದರಿಂದ ಅಮೆರಿಕದಲ್ಲಿ ಅದು ಭ್ರಷ್ಟಾಚಾರವಾಗುತ್ತದೆ. ಹೀಗಾಗಿ ಕೇಸ್
ಆರೋಪಗಳು ಸುಳ್ಳು
ಅದಾನಿ ಗ್ರೀನ್‌ನ ಕಂಪನಿ ಮೇಲೆ ಮಾಡಿರುವ ಎಲ್ಲಾ ಆರೋಪಗಳೂ ಆಧಾರರಹಿತ. ನಾವು ಎಲ್ಲಾ ಕಾನೂನುಗಳಿಗೆ ಬದ್ಧವಾಗಿದ್ದೇವೆ. ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲಾ ಕಾನೂನಿನ ನೆರವುಗಳನ್ನು ಪಡೆಯುತ್ತೇವೆ. ಅದಾನಿ ಸಮೂಹವು ಸದಾ ಉತ್ತಮ ಆಡಳಿತ, ಪಾರದರ್ಶಕತೆ ಹಾಗೂ ಕಾನೂನುಪಾಲನೆಗೆ ಬದ್ಧವಾಗಿದೆ. ಆರೋಪಗಳು ಸಾಬೀತಾಗುವ ತನಕ ನಿರಪರಾಧಿಗಳೆಂದೇ ಪರಿಗಣಿಸಲಾಗುತ್ತದೆ. ನಾವು ಎಲ್ಲಾ ಕಾನೂನುಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿದ್ದೇವೆ ಎಂದು ನಮ್ಮ ಪಾಲುದಾರರು ಮತ್ತು ಉದ್ಯೋಗಿಗಳಿಗೆ ಭರವಸೆ ನೀಡುತ್ತೇವೆ.
- ಅದಾನಿ ಸಮೂಹ