ತಮ್ಮ ವಿರೋಧಿ ಯೆಮೆನ್‌ ಸರ್ಕಾರವನ್ನು ಬೆಂಬಲಿಸುತ್ತಿರುವ ಸೌದಿ ಅರೇಬಿಯಾ ಮೇಲೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ದಾಳಿ ನಡೆಸುತ್ತಿರುವ ಯೆಮೆನ್‌ನ ಇರಾನ್‌ ಬೆಂಬಲಿತ ಹೌತಿ ಬಂಡುಕೋರರು, ಇದೀಗ ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳವಾದ ಮೆಕ್ಕಾದ ಮೇಲೆ ಡ್ರೋನ್‌ ದಾಳಿಗೆ ಪ್ರಯತ್ನಿಸಿದ್ದಾರೆ.

ಮೆಕ್ಕಾ: ತಮ್ಮ ವಿರೋಧಿ ಯೆಮೆನ್‌ ಸರ್ಕಾರವನ್ನು ಬೆಂಬಲಿಸುತ್ತಿರುವ ಸೌದಿ ಅರೇಬಿಯಾ ಮೇಲೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ದಾಳಿ ನಡೆಸುತ್ತಿರುವ ಯೆಮೆನ್‌ನ ಇರಾನ್‌ ಬೆಂಬಲಿತ ಹೌತಿ ಬಂಡುಕೋರರು, ಇದೀಗ ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳವಾದ ಮೆಕ್ಕಾದ ಮೇಲೆ ಡ್ರೋನ್‌ ದಾಳಿಗೆ ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ವಿಫಲವಾಗಿದೆ. ಆದಾಗ್ಯೂ ಪವಿತ್ರ ಸ್ಥಳದ ಮೇಲೆ ಮೊದಲ ಬಾರಿ ನಡೆದ ಇಂಥ ದಾಳಿ ಯತ್ನ ಅನೇಕರ ಹುಬ್ಬೇರಿಸಿದೆ.

ಹೌತಿಗಳು ಹಾರಿಸಿದ ಕ್ಷಿಪಣಿ ಯನ್ನು ಆಗಸದಲ್ಲೇ ಹೊಡೆದುರುಳಿಸಿ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಸೌದಿ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ ಮೆಕ್ಕಾದ ಮೇಲಿನ ದಾಳಿಯ ಪ್ರಯತ್ನವು ಎಲ್ಲೆ ಮೀರಿದ ವರ್ತನೆಯಾಗಿದ್ದು ಎಂದು ಎಚ್ಚರಿಕೆ ನೀಡಿದೆ.

ಈ ನಡುವೆ ಕಳೆದ 3 ತಿಂಗಳ ಕಾಲ ಇರಾನ್‌ ನಡೆಸಿದ ದಾಳಿಯ ವೇಳೆ ಸೌದಿ ನೆರವಿಗೆ ಬಂದಿದ್ದ ಅಮೆರಿಕ ಸದ್ಯಕ್ಕೆ ಯುದ್ಧದಿಂದ ದೂರ ಉಳಿಯಲು ನಿರ್ಧರಿಸಿದೆ. ಮತ್ತೊಂದೆಡೆ ಸೌದಿ ಮೇಲೆ ದಾಳಿ ನಡೆದರೆ ರಕ್ಷಣೆಗೆ ಬರುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಪಾಕಿಸ್ತಾನ ಕೂಡಾ ಸುಮ್ಮನೆ ಕುಳಿತಿದೆ. ಹೀಗಾಗಿ ಹೌತಿ ಉಗ್ರರ ಮಟ್ಟಹಾಕಲು ಸೌದಿ ಅರೇಬಿಯಾ ಸರ್ಕಾರ ಇದೀಗ ಇಸ್ರೇಲ್ ನೆರವು ಕೋರಿದೆ.

ಪವಿತ್ರ ಸ್ಥಳ ನಮ್ಮ ಗುರಿ ಅಲ್ಲ- ಹೌತಿ:

ಆದರೆ ಮೆಕ್ಕಾ ಮೇಲಿನ ದಾಳಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೌತಿ ವಕ್ತಾರರು, ‘ನಮ್ಮ ಗುರಿಯು ಧಾರ್ಮಿಕ ಸ್ಥಳದಿಂದ ದೂರದಲ್ಲಿರುವ ತೈಲ ಸೌಲಭ್ಯ ಮತ್ತು ಸೇನಾ ನೆಲೆಗಳಾಗಿದ್ದವು. ಪವಿತ್ರ ಸ್ಥಳಗಳಿಗೆ ನಮ್ಮಿಂದ ಅಪಾಯವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಭಾರತ ಖಂಡನೆ

ಮೆಕ್ಕಾ ಮೇಲಿನ ದಾಳಿಗೆ ಭಾರತ ಕಳವಳ ವ್ಯಕ್ತಪಡಿಸಿದೆ. ‘ಸೌದಿಯ ಸಾರ್ವಭೌಮ ಭೂಪ್ರದೇಶದ ಮೇಲಿನ ದಾಳಿ, ನಾಗರಿಕರ ಜೀವ ಮತ್ತು ಮೂಲಸೌಕರ್ಯಗಳಿಗೆ ಅಪಾಯವನ್ನುಂಟುಮಾಡುವ ಕ್ರಮಗಳನ್ನು ಖಂಡಿಸುತ್ತೇವೆ’ ಎಂದಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆಯನ್ನು ಶೀಘ್ರ ಪುನಃಸ್ಥಾಪಿಸಲು ಭಾರತ ಬಯಸುತ್ತದೆ’ ಎಂದರು.

ಆಗಿದ್ದೇನು?

- ಇತ್ತೀಚೆನಿಂದ ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಉಗ್ರರಿಂದ ಸೌದಿ ಅರೇಬಿಯಾ ಮೇಲೆ ದಾಳಿ

- ತಮ್ಮ ವಿರೋಧಿ ಯೆಮೆನ್‌ ಸರ್ಕಾರವನ್ನು ಸೌದಿ ಬೆಂಬಲಿಸುತ್ತಿದೆ ಎಂಬ ಕೋಪ ಹೌತಿಗಳಿಗಿದೆ

- ಇದರ ನಡುವೆ ಮೊದಲ ಬಾರಿ ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ ಮೇಲೆ ದಾಳಿಗೆ ಹೌತಿಗಳ ಯತ್ನ

- ಆದರೆ ಆಗಸದಲ್ಲೇ ಕ್ಷಿಪಣಿಯನ್ನು ಹಿಮ್ಮೆಟ್ಟಿಸಿದ ಸೌದಿ. ಇಂಥ ದುಸ್ಸಾಹಸ ಮಾಡದಂತೆ ಎಚ್ಚರಿಕೆ

- ನಮ್ಮ ಗುರಿ ಮೆಕ್ಕಾ ಮಸೀದಿ ಆಗಿರಲಿಲ್ಲ. ಬದಲಿಗೆ ಸನಿಹದ ತೈಲ ಘಟಕ ಆಗಿತ್ತು: ಹೌತಿ ಸ್ಪಷ್ಟನೆ

- ಭಾರತ ಸೇರಿ ವಿಶ್ವದ ಹಲವು ದೇಶಗಳಿಂದ ದಾಳಿ ಯತ್ನ ಖಂಡನೆ. ಶಾಂತಿ ಸ್ಥಾಪನೆಗೆ ಆಗ್ರಹ