ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಮತ್ತು ಅಂತಾರಾಷ್ಟ್ರೀಯ ಕೋರ್ಟ್‌ನ ನ್ಯಾಯಮೂರ್ತಿ ನವನೀತಂ ನವಿ ಪಿಳ್ಳೈ ಅವರಿಗೆ 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ.

ಓಸ್ಲೊ : ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವಲ್ಲಿ ನೀಡಿದ ಅನನ್ಯ ಕೊಡುಗೆಗಳಿಗಾಗಿ, ಭಾರತ ಮೂಲದ ದಕ್ಷಿಣ ಆಫ್ರಿಕಾದ ನ್ಯಾಯವಾದಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಮತ್ತು ಅಂತಾರಾಷ್ಟ್ರೀಯ ಕೋರ್ಟ್‌ನ ನ್ಯಾಯಮೂರ್ತಿ ನವನೀತಂ ನವಿ ಪಿಳ್ಳೈ ಅವರಿಗೆ 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ.

ತಮಿಳು ಮೂಲದ ಭಾರತೀಯ ದಂಪತಿಗೆ ಪಿಳ್ಳೈ ಜನಿಸಿದರು

1941ರ ಸೆ.23ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ತಮಿಳು ಮೂಲದ ಭಾರತೀಯ ದಂಪತಿಗೆ ಪಿಳ್ಳೈ ಜನಿಸಿದರು. ವರ್ಣಭೇದ ನೀತಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಹುಟ್ಟಿದ ಅವರು ಅದರ ದುಷ್ಪರಿಣಾಮಗಳನ್ನು ನೋಡುತ್ತಾ ಬೆಳೆದರು. ನಂತರ ವಕೀಲಿ ವೃತ್ತಿ ಪ್ರವೇಶಿಸಿದ ಅವರು, ವರ್ಣಭೇದ ನೀತಿ ವಿರೋಧಿ ಹೋರಾಟಗಾರರ ಪರವಾಗಿ ವಾದಿಸುವುದು ಹಾಗೂ ಮಾನವ ಹಕ್ಕುಗಳು ಮತ್ತು ಸಮಾನತೆಯನ್ನು ಉತ್ತೇಜಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡರು.

1967ರಲ್ಲಿ, ದಕ್ಷಿಣ ಆಫ್ರಿಕಾದ ನಟಾಲ್ ಪ್ರಾಂತ್ಯದಲ್ಲಿ ಕಾನೂನು ವೃತ್ತಿಯನ್ನು ಆರಂಭಿಸಿದ ಮೊದಲ ಮಹಿಳೆ ಇವರಾಗಿದ್ದರು. ನಂತರ, ಅಲ್ಲಿನ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಮೊದಲ ಕಪ್ಪು ವರ್ಣೀಯ ಮಹಿಳೆ ಎಂಬ ಇತಿಹಾಸ ನಿರ್ಮಿಸಿದರು. ರುವಾಂಡಾಕ್ಕಾಗಿನ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಜಡ್ಜ್‌ ಆಗಿ ಮತ್ತು ಅಧ್ಯಕ್ಷರಾಗಿ, ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ಜಡ್ಜ್‌ ಆಗಿ, 2008ರಿಂದ 2014ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರಾಗಿಯೂ ಸೇವೆ ಸಲ್ಲಿಸಿದರು.

ಯುದ್ಧ ಬೇಡ

ನಾಯಕರಿಗೆ ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಯುದ್ಧದಿಂದ ದೂರವಿರುವ ಕಾನೂನುಬದ್ಧ ಹೊಣೆಗಾರಿಕೆ ಇದೆ. ನೀವು ಇದಕ್ಕೆ ಅರ್ಹರು ಎಂದು ಸಾರ್ವಜನಿಕರು ಒಪ್ಪದ ಹೊರತು, ಯಾವುದೇ ಪ್ರಶಸ್ತಿ ಅಥವಾ ಬಹುಮಾನವನ್ನು ಪಡೆಯಲು ಸಾಧ್ಯವಿಲ್ಲ.

- ನವನೀತಂ ಪಿಳ್ಳೈ, ನೊಬೆಲ್‌ ಶಾಂತಿ ವಿಜೇತೆ