ದುಬೈ : ಭಾರತದಿಂದ ಒಮಾನ್‌ನತ್ತ ತೆರಳುತ್ತಿದ್ದ ಭಾರತದ ವಾಣಿಜ್ಯ ಹಡಗೊಂಡು ಮಾರ್ಗಮಧ್ಯೆ ಎಂಜಿನ್‌ ವೈಫಲ್ಯಕ್ಕೆ ತುತ್ತಾದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಈ ವೇಳೆ ಹಡಗಿನಲ್ಲಿದ್ದ ಎಲ್ಲಾ 14 ಭಾರತೀಯ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಮಸ್ಕತ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.

ಭಾರತದ ಧ್ವಜ ಹೊತ್ತ ‘ವಿರಾಟ್‌ 1’ ಹೆಸರಿನ ವಾಣಿಜ್ಯ ಹಡಗು ಒಮಾನ್‌ನತ್ತ ಹೊರಟಿತ್ತು. ಅದರಲ್ಲಿ 14 ಭಾರತೀಯ ಸಿಬ್ಬಂದಿಯಿದ್ದರು. ಒಮಾನ್‌ನ ರಾಸ್‌ ಅಲ್‌ ಹದ್ದ್‌ನಿಂದ 80 ನಾಟಿಕಲ್‌ ಮೈಲು ದೂರದಲ್ಲಿರುವಾಗ ಎಂಜಿನ್‌ ವಿಫಲಗೊಂಡಿದೆ. ತಕ್ಷಣ ಒಮಾನಿ ಅಧಿಕಾರಿಗಳ ಸಹಾಯದೊಂದಿಗೆ ಎಲ್ಲಾ 14 ಸಿಬ್ಬಂದಿಯನ್ನು ಸುರಕ್ಷಿತವಾಗಿ ಲೈಫ್ ರಾಫ್ಟ್‌ಗೆ ಸ್ಥಳಾಂತರಿಸಲಾಗಿದೆ.

ಅಮೆರಿಕ ನೌಕಾಪಡೆ ನೆರವು:

ಒಮಾನ್‌ ಕಡಲಿನಲ್ಲಿ ಸಿಲುಕಿದ್ದ ಭಾರತೀಯ ಹಡಗಿಗೆ ಅಮೆರಿಕ ನೌಕಾಪಡೆ ನೆರವು ನೀಡಿದ ಪ್ರಸಂಗ ನಡೆದಿದೆ. ಹಡಗಿನ ಎಂಜಿನ್‌ ವಿಫಲಗೊಂಡಿದ್ದನ್ನು ತಿಳಿದ ಅಮೆರಿಕ ನೌಕಾಪಡೆ, ಸೋಹಾರ್‌ನಿಂದ ಮುಂಬೈಗೆ ತೆರಳುತ್ತಿದ್ದ ಸೇಂಟ್ ಕಿಟ್ಸ್ ಮತ್ತು ನೆವಿಸ್ ಧ್ವಜ ಹೊತ್ತ ಎಂವಿ ಜಬಲ್ ಅಲಿ 9 ಎಂಬ ಹತ್ತಿರದ 2 ವ್ಯಾಪಾರಿ ಹಡಗುಗಳ ಸಹಾಯ ಕೋರಿತು. ಆ ಬಳಿಕ ಒಮಾನ್‌ ಅಧಿಕಾರಿಗಳ ಸಮನ್ವಯದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.


ಕಳೆದ ವಾರ ಒಮಾನ್‌ ಬಳಿ 3 ಭಾರತೀಯ ಹಡಗುಗಳ ಮೇಲೆ ದಾಳಿ

ಕಳೆದ ವಾರ ಒಮಾನ್‌ ಬಳಿ 3 ಭಾರತೀಯ ಹಡಗುಗಳ ಮೇಲೆ ದಾಳಿ ನಡೆಸಲಾಗಿತ್ತು. ಒಂದು ದಾಳಿಯಲ್ಲಿ, ಹಡಗಿನಲ್ಲಿದ್ದ 3 ಭಾರತೀಯ ನಾವಿಕರು ಸಾವನ್ನಪ್ಪಿದ್ದರು. ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಭಾರತ, ತನ್ನ ನೌಕೆಗಳ ಮೇಲೆ ದಾಳಿ ನಡೆಸದಂತೆ ಅಮೆರಿಕಕ್ಕೆ ತಾಕೀತು ಮಾಡಿತ್ತು. ಅಮೆರಿಕ ರಾಯಭಾರ ಕಚೇರಿ ಅಧಿಕಾರಿಯನ್ನು ಕರೆಸಿ ಎಚ್ಚರಿಕೆ ನೀಡಿ ಕಳಿಸಿತ್ತು. ಅದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.