ದುಬೈ: ಕದನ ವಿರಾಮ ಘೋಷಣೆಯಾದ 52 ದಿನಗಳ ಬಳಿಕ ಇದೇ ಮೊದಲ ಬಾರಿಗೆಭಾನುವಾರ ತಡರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಇಸ್ರೇಲ್‌-ಇರಾನ್‌ ಪರಸ್ಪರ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಸಂಘರ್ಷ ತೀವ್ರಗೊಳ್ಳುವ ಆತಂಕ ಶುರುವಾಗಿದೆ. ಆದರೆ ಸೋಮವಾರ ಸಂಜೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉಭಯ ದೇಶಗಳಿಗೆ ದಾಳಿ ನಿಲ್ಲಿಸಲು ಸೂಚಿಸಿದ್ದಾರೆ. ಇದಕ್ಕೆ ಒಪ್ಪಿದ ಇರಾನ್‌ ದಾಳಿ ನಿಲ್ಲಿಸುವುದಾಗಿ ಹೇಳಿದೆ.

ಲೆಬನಾನ್‌ ಮೇಲಿನ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಮೇಲೆ ಸೋಮವಾರ ಇರಾನ್‌ ದಿಢೀರ್‌ ಕ್ಷಿಪಣಿ ದಾಳಿ ನಡೆಸಿದ್ದು, ಇದಕ್ಕೆ ಇಸ್ರೇಲ್‌ ಕೂಡ ಇರಾನ್‌ ಮೇಲೆ ವೈಮಾನಿಕ ದಾಳಿ ಮೂಲಕ ಪ್ರತ್ಯುತ್ತರ ನೀಡಿದೆ. ಇಸ್ರೇಲ್‌ ದಾಳಿಯಿಂದ ಇರಾನ್‌ ಹೊಸದಾಗಿ ಅಳವಡಿಸಿದ್ದ ವಾಯುರಕ್ಷಣಾ ವ್ಯವಸ್ಥೆ ನಷ್ಟವಾಗಿದ್ದು, ಪೆಟ್ರೋಲ್‌ ಕೆಮಿಕಲ್‌ ಕಾರ್ಖಾನೆಯೊಂದಕ್ಕೂ ಹಾನಿಯಾಗಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಯೆಮೆನ್‌ನ ಹೌತಿ ಉಗ್ರರು ಕೂಡ ತಾವು ಇಸ್ರೇಲ್‌ ಅನ್ನು ಗುರಿಯಾಗಿರಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ.

ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಸ್ರೇಲ್‌-ಇರಾನ್‌ ಎರಡೂ ದೇಶಗಳಿಗೆ ಸಂಯಮ ಕಾಯ್ದುಕೊಳ್ಳುವಂತೆ ಸಾಮಾಜಿಕ ಜಾಲತಾಣ ಮೂಲಕ ಮನವಿ ಮಾಡಿದ್ದಾರೆ. ಆದರೆ, ಇರಾನ್‌ ಮಾತ್ರ ಅಮೆರಿಕದ ನಿರ್ದೇಶನವಿಲ್ಲದೆ ಇಸ್ರೇಲ್‌ ಈ ರೀತಿ ಮಾಡಲು ಸಾಧ್ಯವೇ ಇಲ್ಲ. ಮತ್ತೆ ಸಂಘರ್ಷ ಶುರುವಾದರೆ ಅದಕ್ಕೆ ಅಮೆರಿಕವೇ ಹೊಣೆ ಎಂದು ಆರೋಪಿಸಿದೆ. ಇಷ್ಟೆಲ್ಲಾ ಆದ ಬಳಿಕ ಟ್ರಂಪ್‌ ಮನವಿಯಂತೆ ದಾಳಿ ಸ್ಥಗಿತಗೊಳಿಸಿರುವುದಾಗಿ ಇರಾನ್‌ ಪ್ರಕಟಿಸಿದೆ.


ಆಗಿದ್ದೇನು?:

ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿರಿಸಿಕೊಂಡು ಲೆಬನಾನ್‌ ರಾಜಧಾನಿ ಬೈರೂತ್‌ ಮೇಲೆ ಭಾನುವಾರ ಇಸ್ರೇಲ್‌ ದಾಳಿ ನಡೆಸಿತ್ತು. ಹಿಜ್ಬುಲ್ಲಾ ದಾಳಿಯಿಂದ ತನ್ನ ಯೋಧನ ಸಾವಿಗೆ ಪ್ರತಿಯಾಗಿ ಈ ದಾಳಿ ನಡೆಸಿದ್ದಾಗಿ ಇಸ್ರೇಲ್‌ ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ ಸೋಮವಾರ ಬೆಳಗ್ಗೆ ಇಸ್ರೇಲ್‌ನ ಸೇನಾ ನೆಲೆಗಳನ್ನು ಗುರಿಯಾಗಿರಿಸಿ ಇರಾನ್‌ ಕ್ಷಿಪಣಿ ದಾಳಿ ನಡೆಸಿದ್ದು, ಆಗ ಇಸ್ರೇಲ್‌ ಕೂಡ ಕೇಂದ್ರ, ಪಶ್ಚಿಮ ಇರಾನ್‌ನ ಮಿಲಿಟರಿ ನೆಲೆ, ಕ್ಷಿಪಣಿ ಉತ್ಪಾದನೆಗೆ ನೆರವಾಗುತ್ತಿದ್ದ ಮಹಷರ್‌ ಪೆಟ್ರೋ ಕೆಮಿಕಲ್‌ ಕಾರ್ಖಾನೆ ಗುರಿಯಾಗಿರಿಸಿ ವೈಮಾನಿಕ ದಾಳಿ ನಡೆಸಿದೆ.

ಆಗಿದ್ದೇನು?

- ಇರಾನ್‌ ಮಿತ್ರದೇಶ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್‌ ದಾಳಿ ನಿಲ್ಲಿಸಿರಲಿಲ್ಲ

- ಇದರಿಂದ ಕುಪಿತಗೊಂಡ ಇರಾನ್‌ನಿಂದ ಇಸ್ರೇಲ್‌ ಮೇಲೆ ಭಾನುವಾರ ರಾತ್ರಿ ಕ್ಷಿಪಣಿ ದಾಳಿ

- ಇದಕ್ಕೆ ಪ್ರತಿಯಾಗಿ ಇರಾನ್‌ನ ಇರಾನ್‌ ಪೆಟ್ರೋಕೆಮಿಕಲ್‌ ಘಟಕದ ಮೇಲೆ ಇಸ್ರೇಲ್‌ ಕ್ಷಿಪಣಿ

- ಇದರಿಂದಾಗಿ ಮತ್ತೆ ಯುದ್ಧಾತಂಕ. ಮಧ್ಯಪ್ರವೇಶಿಸಿದ ಟ್ರಂಪ್‌. ದಾಳಿ ಸ್ಥಗಿತಕ್ಕೆ ಸೂಚನೆ

- ಟ್ರಂಪ್‌ ಮನವಿಗೆ ಓಗೊಟ್ಟು ದಾಳಿ ನಿಲ್ಲಿಸುವುದಾಗಿ ಇರಾನ್‌ ಘೋಷಣೆ ಕೊಂಚ ತಣಿದ ಆತಂಕ