ಇಸ್ರೇಲ್‌ - ಹಿಜ್ಬುಲ್ಲಾ ಸಂಘರ್ಷ : ಲೆಬನಾನ್‌ನಲ್ಲಿ 274 ಸಾವು, ಭೀಕರ ದಾಳಿಗೆ ಸೇಡು

| Published : Sep 24 2024, 01:56 AM IST / Updated: Sep 24 2024, 04:17 AM IST

ಸಾರಾಂಶ

ಉತ್ತರ ಇಸ್ರೇಲ್‌ನ ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಗೆ ಪ್ರತಿಯಾಗಿ ಇಸ್ರೇಲ್, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 274 ಜನರು ಸಾವನ್ನಪ್ಪಿದ್ದು, 700 ಮಂದಿ ಗಾಯಗೊಂಡಿದ್ದಾರೆ.

ಜೆರುಸಲೇಂ: ಉತ್ತರ ಇಸ್ರೇಲ್‌ನ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಹಿಜ್ಬುಲ್ಲಾ ಉಗ್ರರು 100ಕ್ಕೂ ಹೆಚ್ಚು ರಾಕೆಟ್‌ ದಾಳಿ ನಡೆಸಿದ ಬೆನ್ನಲ್ಲೇ, ಹಿಜ್ಬುಲ್ಲಾ ಉಗ್ರ ನೆಲೆ ಎನ್ನಲಾದ 300 ಸ್ಥಳಗಳ ಮೇಲೆ ಇಸ್ರೇಲ್‌ ಸೋಮವಾರ ವೈಮಾನಿಕ ದಾಳಿ ನಡೆಸಿದೆ. ದಾಳಿಯಲ್ಲಿ 274 ಜನರು ಸಾವನ್ನಪ್ಪದ್ದು, 700 ಮಂದಿ ಗಾಯಗೊಂಡಿದ್ದಾರೆ. ಇದು 1 ವರ್ಷದಲ್ಲೇ ದೇಶದ ಅತಿ ಡೆಡ್ಲಿ ದಿನ ಎಂದು ಲೆಬನಾನ್‌ ಹೇಳಿಕೊಂಡಿದೆ.

ಈ ನಡುವೆ, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಗುಡುಗಿರುವ ಇಸ್ರೇಲ್‌, ಹಿಜ್ಬುಲ್ಲಾ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಮನೆಗಳು ಮತ್ತು ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಲೆಬನಾನ್‌ ನಾಗರಿಕರಿಗೆ ಸೂಚಿಸಿದೆ.

ಹಮಾಸ್ ಮೇಲಿನ ಇಸ್ರೇಲ್‌ ಯುದ್ಧದಲ್ಲಿ ಹಿಜ್ಬುಲ್ಲಾ ಉಗ್ರರು, ಹಮಾಸ್‌ಗೆ ನೇರ ಬೆಂಬಲ ಘೋಷಿಸಿದ್ದಾರೆ. ಅದರ ಭಾಗವಾಗಿ ಆಗಾಗ್ಗೆ ಇಸ್ರೇಲ್‌ ಸೇನಾ ನೆಲೆಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ರಾಕೆಟ್‌, ಕ್ಷಿಪಣಿ ಬಳಸಿ ದಾಳಿ ನಡೆಸುತ್ತಿದೆ. ಇದರಿಂದ ಸಿಟ್ಟಿಗೆದ್ದಿರುವ ಇಸ್ರೇಲ್‌, ಕಳೆದೊಂದು ವಾರದಿಂದ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರರ ಮೇಲೆ ಹಲವು ರೀತಿಯಲ್ಲಿ ದಾಳಿ ನಡೆಸಿದೆ. ಇತ್ತೀಚೆಗೆ ಇಸ್ರೇಲ್‌ ದೇಶವು ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಹೊಂದಿದ್ದ ಪೇಜರ್‌ ಹಾಗೂ ವಾಕಿಟಾಕಿಗಳನ್ನು ಸ್ಫೋಟಿಸಿದ ನಂತರ ಸಂಘರ್ಷ ತೀವ್ರಗೊಂಡಿದೆ. ಇದು ಅನಿರ್ದಿಷ್ಟ ಯುದ್ದಕ್ಕೆ ನಾಂದಿ ಹಾಡಿದೆ ಎಂದು ಹಿಜ್ಬುಲ್ಲಾ ಉಗ್ರರು ಘೋಷಿಸಿದ್ದಾರೆ.