ಸಾರಾಂಶ
ವಾಷಿಂಗ್ಟನ್ : ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಟ್ರಂಪ್ 2ನೇ ಬಾರಿಗೆ ಅಧ್ಯಕ್ಷರಾದ ಬಳಿಕ ನಡೆದ ಈ ಮೊದಲ ಭೇಟಿ ವೇಳೆ ಉಭಯ ನಾಯಕರು ಅತ್ಯಂತ ಆತ್ಮೀಯತೆಯಿಂದ ಚರ್ಚೆಯಲ್ಲಿ ಭಾಗಿಯಾಗಿದ್ದು, ಇಬ್ಬರ ನಡುವಿನ ಸ್ನೇಹ ಮತ್ತು ಉಭಯ ದೇಶಗಳ ನಡುವೆ ವೃದ್ಧಿಸುತ್ತಿರುವ ಸಂಬಂಧಕ್ಕೆ ಸಾಕ್ಷಿಯಾಗಿ ಹೊರಹೊಮ್ಮಿತು.
ಮಾತುಕತೆ ವೇಳೆ ಉಭಯ ನಾಯಕರು ವ್ಯಾಪಾರ, ರಕ್ಷಣೆ, ಬಾಹ್ಯಾಕಾಶ ತಂತ್ರಜ್ಞಾನ ಹಂಚಿಕೆ, ಜಾಗತಿಕ ಉಗ್ರವಾದ ನಿಗ್ರಹ ಸೇರಿದಂತೆ ವಿವಿಧ ವಿಷಯಗಳ ಕುರಿತು ದ್ವಿಪಕ್ಷೀಯ ಚರ್ಚೆ ನಡೆಸಿದರು. ಈ ವೇಳೆ ದ್ವಿಪಕ್ಷೀಯ ವ್ಯಾಪಾರ ಕೊರತೆ ನೀಗಿಸುವ ಸಲುವಾಗಿ ಅಮೆರಿಕದಿಂದ ಹೆಚ್ಚಿನ ತೈಲ, ಅನಿಲ ಖರೀದಿಗೆ ಭಾರತ ಸಮ್ಮತಿಸಿದರೆ, ಭಾರತಕ್ಕೆ ಅತ್ಯಾಧುನಿಕ ಎಫ್ -35 ವಿಮಾನ ಪೂರೈಕೆ, ಭಾರತದಲ್ಲೇ ಕೆಲ ರಕ್ಷಣಾ ಉಪಕರಣಗಳ ಜಂಟಿ ಉತ್ಪಾದನಾ ಘಟಕ ಆರಂಭ ಬಗ್ಗೆ ಅಮೆರಿಕ ಘೋಷಿಸಿತು. ಜೊತೆಗೆ 2030ರ ವೇಳೆಗೆ ಉಭಯ ದೇಶಗಳ ನಡುವಿನ ವಹಿವಾಟನ್ನು ವಾರ್ಷಿಕ 40 ಲಕ್ಷ ಕೋಟಿ ರು. (500 ಬಿಲಿಯನ್ ಡಾಲರ್) ದಾಟಿಸುವ ‘ಮಿಷನ್ 500’ ಬೃಹತ್ ಗುರಿಯನ್ನೂ ಉಭಯ ನಾಯಕರು ಹಾಕಿಕೊಂಡಿದ್ದಾರೆ.
ಈ ನಡುವೆ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ವೇಳೆ ಅವರು ಸೃಷ್ಟಿಸಿದ್ದ ‘ಮಗಾ’ (ಮೇಕ್ ಅಮೆರಿಕ ಗ್ರೇಟ್ ಅಗೇನ್- ಎಂಎಜಿಎ) ಪದಕ್ಕೆ ಪ್ರತಿಯಾಗಿ ಮೋದಿ ‘ಮಿಗಾ’ (ಮೇಕ್ ಇಂಡಿಯಾ ಗ್ರೇಟ್ ಅಗೇನ್) ಎಂಬ ಪದದ ಮೂಲಕ ಚಟಾಕಿ ಹಾರಿಸಿದರು. ‘ಟ್ರಂಪ್ ಅವರು ಅಮೆರಿಕವನ್ನು ಮಹಾನ್ ದೇಶ ಮಾಡಲು ‘ಮಗಾ’ ಪದ ಕಂಡುಹಿಡಿದಿದ್ದಾರೆ. ನಾವು ಭಾರತವನ್ನು ಮಹಾನ್ ವಿಕಸಿತ ದೇಶ ಮಾಡುತ್ತೇವೆ. ಅದೇ ‘ಮಗಾ ಪ್ಲಸ್ ಮಿಗಾ ಸೇರಿಕೊಂಡರೆ ಉಭಯ ದೇಶಗಳ ನಡುವೆ ‘ಮೆಗಾ’ ಸಹಭಾಗಿತ್ವ ಸ್ಥಾಪನೆ ಆಗಲಿದ್ದು, ಸಮೃದ್ಧಿಗೆ ನಾಂದಿ ಹಾಡಲಿದೆ’ ಎಂದು ಮೋದಿ ಹೇಳಿದರು.
ಟ್ರಂಪ್ ಶಾಕ್:
ಮೋದಿ ಜೊತೆಗಿನ ಆತ್ಮೀಯ ಮಾತುಕತೆ ಹೊರತಾಗಿಯೂ ಟ್ರಂಪ್ ಅವರು ಭಾರತದ ವಸ್ತುಗಳು ಸೇರಿದಂತೆ ವಿದೇಶಗಳ ಮೇಲೆ ಹೇರುತ್ತಿರುವ ಪ್ರತೀಕಾರ ತೆರಿಗೆಯನ್ನು ಹಿಂಪಡೆಯುವುದಿಲ್ಲ ಎಂದು ಘೋಷಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್, ‘ಭಾರತವು ಅಮೆರಿಕದ ವಸ್ತುಗಳ ಮೇಲೆ ಭಾರಿ ಆಮದು ಸುಂಕ ಹೇರುತ್ತಿದೆ. ಇದು ನ್ಯಾಯಸಮ್ಮತವಲ್ಲ. ಅದು ಕಠಿಣ ಕೂಡ. ಭಾರತ ಏನು ನಮ್ಮ ಮೇಲೆ ಸುಂಕ ಹೇರುತ್ತದೋ ಅದೇ ಸುಂಕವನ್ನು ನಾವೂ ಹೇರುತ್ತೇವೆ’ ಎಂದು ಖಂಡತುಂಡವಾಗಿ ಹೇಳಿದರು.ಭಾರತಕ್ಕೆ ಅಮೆರಿಕ ತೈಲ:
‘ನಾನು ಹಾಗೂ ಮೋದಿ ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಆ ಪ್ರಕಾರ ಅಮೆರಿಕವು ಭಾರತಕ್ಕೆ ನಂ.1 ತೈಲ ಹಾಗೂ ಅನಿಲ ಪೂರೈಕೆದಾರ ದೇಶವಾಗಲಿದೆ. ಇದರಿಂದ 45 ಶತಕೋಟಿ ಡಾಲರ್‌ನಷ್ಟು ವ್ಯಾಪಾರ ವಿನಿಮಯ ನಡೆಸುತ್ತಿರುವ ಎರಡೂ ದೇಶಗಳ ನಡುವಿನ ವ್ಯಾಪಾರ ಅಸಮತೋಲನ ತಗ್ಗಲಿದೆ’ ಎಂದರು.ಭಾರತಕ್ಕೆ ಎಫ್-35 ಯುದ್ಧವಿಮಾನ:
ಉಭಯ ದೇಶಗಳು ಮಿಲಿಟರಿ ಸಹಕಾರ ಮತ್ತಷ್ಟು ವಿಸ್ತರಿಸಲಿವೆ. ಭಾರತಕ್ಕೆ ನಾವು ವಿಶ್ವದ ಅತ್ಯಂತ ಬಲಶಾಲಿ ಎಫ್-35 ಯುದ್ಧವಿಮಾನ ಪೂರೈಸಲಿದ್ದೇವೆ. ಶತಕೋಟಿ ಡಾಲರ್‌ನಷ್ಟು ವಹಿವಾಟು ಹೆಚ್ಚಲಿದೆ ಎಂದರು.
ಜೊತೆಗೆ ಉಭಯ ನಾಯಕರು ಗಡಿಯಾಚೆಗಿನ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಕಠಿಣ ಧೋರಣೆ ತರುವ ಅಗತ್ಯವನ್ನು ಪ್ರತಿಪಾದಿಸುವ ಜೊತೆಗೆ, ಮುಂಬೈ ಸರಣಿ ದಾಳಿಕೋರರಿಗೆ ಶಿಕ್ಷೆ ಆಗುವಂತೆ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು ಎಂದು ಉಭಯ ನಾಯಕರು ಆಗ್ರಹಿಸಿದರು. ಅದರೆ ಉಗ್ರವಾದದ ವಿಷಯದಲ್ಲಿ ಕಠಿಣ ನಿಲುವಿನ ಭಾಗವಾಗಿ ಉಗ್ರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಟ್ರಂಪ್ ಘೋಷಿಸಿದರು.
- ಅಮೆರಿಕದಿಂದ ತೈಲ, ಅನಿಲ, ಶಕ್ತಿಶಾಲಿ ಎಫ್-35 ವಿಮಾನ ಭಾರತಕ್ಕೆ ಪೂರೈಕೆ- ಇನ್ನು ಭಾರತದ ಅತಿದೊಡ್ಡ ತೈಲೋತ್ಪನ್ನ ಪೂರೈಕೆ ದೇಶವಾಗಲಿದೆ ಅಮೆರಿಕ!- ವ್ಯಾಪಾರಕ್ಕೆ ‘ಮಿಷನ್ 500’ ಮಂತ್ರ । ಗಡಿಯಾಚೆಗಿನ ಉಗ್ರವಾದ ವಿರುದ್ಧ ಕಿಡಿ
ಏನಿದು ಮಗಾ? ಮಿಗಾ?ಅಮೆರಿಕವನ್ನು ಮತ್ತೆ ಶಕ್ತಿಶಾಲಿ ದೇಶವನ್ನಾಗಿಸಲು ‘ಮಗಾ’ (ಮೇಕ್ ಅಮೆರಿಕ ಗ್ರೇಟ್ ಅಗೇನ್) ಮಂತ್ರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಬಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಅವರು ಬಳಸಿದ ಪದವೇ ‘ಮಿಗಾ’. ಇದರರ್ಥ ಭಾರತವನ್ನೂ ಮತ್ತೆ ಶಕ್ತಿಶಾಲಿಯಾಗಿಸುವುದು (ಮೇಕ್ ಇಂಡಿಯಾ ಗ್ರೇಟ್ ಅಗೇನ್) .
ಭಾರತಕ್ಕೂ ಟ್ರಂಪ್ ಆಮದು ತೆರಿಗೆ ಶಾಕ್
ವಾಷಿಂಗ್ಟನ್: ‘ಭಾರತವು ಅಮೆರಿಕದ ವಸ್ತುಗಳ ಮೇಲೆ ಭಾರಿ ಆಮದು ಸುಂಕ ಹೇರುತ್ತಿದೆ. ಇದು ನ್ಯಾಯಸಮ್ಮತವಲ್ಲ. ಅದು ಕಠಿಣ ಕೂಡ. ಆದರೆ ಅದು ಅವರಿಗೆ ಬಿಟ್ಟ ವಿಚಾರ. ಆದರೆ ಭಾರತ ಏನು ನಮ್ಮ ಮೇಲೆ ಸುಂಕ ಹೇರುತ್ತದೋ ಅದೇ ಸುಂಕವನ್ನು ನಾವೂ ಹೇರುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತನ್ಮೂಲಕ ಕೆನಡಾ, ಚೀನಾ, ಮೆಕ್ಸಿಕೋದಂತಹ ದೇಶಗಳ ಮೇಲೆ ಹೇರಿ, ಬಳಿಕ ತಡೆ ಹಿಡಿದಿರುವ ತೆರಿಗೆಯನ್ನು ಭಾರತಕ್ಕೂ ವಿಧಿಸುವುದಾಗಿ ಸಾರಿದ್ದಾರೆ. ಇದರಿಂದಾಗಿ ಭಾರತದಿಂದ ರಫ್ತಾದ ವಸ್ತುಗಳನ್ನು ಅಮೆರಿಕದಲ್ಲಿ ಖರೀದಿಸಲು ಅಲ್ಲಿನ ನಿವಾಸಿಗಳು ಹೆಚ್ಚು ಹಣ ತೆರಬೇಕಾಗುತ್ತದೆ.
26/11 ಉಗ್ರ ರಾಣಾ ಗಡೀಪಾರು ಮಾಡಲು ಟ್ರಂಪ್ ಅನುಮತಿ
ವಾಷಿಂಗ್ಟನ್: 26/11 ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ತಹಾವುರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರಿಂದಾಗಿ 16 ವರ್ಷದಿಂದ ರಾಣಾ ಗಡೀಪಾರಿಗೆ ಯತ್ನಿಸುತ್ತಿದ್ದ ಭಾರತಕ್ಕೆ ಯಶಸ್ಸು ಸಿಕ್ಕಿದೆ. 2008ರ ಮುಂಬೈ ದಾಳಿಗೆ ಮುನ್ನ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ಸ್ಥಳಗಳ ಸಮೀಕ್ಷೆ ನಡೆಸಿದ್ದ. ಆತನಿಗೆ ಈ ರಾಣಾ ಆಶ್ರಯ ನೀಡಿದ್ದ.