ತಿರಂಗಾ ಅವಮಾನಿಸಿ ಮಾಲ್ಡೀವ್ಸ್‌ ಮಾಜಿ ಸಚಿವೆ ಕ್ಷಮೆ

| Published : Apr 09 2024, 12:58 AM IST / Updated: Apr 09 2024, 03:12 AM IST

ತಿರಂಗಾ ಅವಮಾನಿಸಿ ಮಾಲ್ಡೀವ್ಸ್‌ ಮಾಜಿ ಸಚಿವೆ ಕ್ಷಮೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತವನ್ನು ಅವಮಾನಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಾಲ್ಡೀವ್ಸ್‌ನ ಮಾಜಿ ಸಚಿವೆ ಮರಿಯಮ್‌ ಶಿಯುನಾ, ಮತ್ತೆ ಭಾರತವನ್ನು ಕೆಣಕುವ ಯತ್ನ ಮಾಡಿದ್ದಾರೆ.

ಮಾಲೆ (ಮಾಲ್ಡೀವ್ಸ್): ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತವನ್ನು ಅವಮಾನಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಾಲ್ಡೀವ್ಸ್‌ನ ಮಾಜಿ ಸಚಿವೆ ಮರಿಯಮ್‌ ಶಿಯುನಾ, ಮತ್ತೆ ಭಾರತವನ್ನು ಕೆಣಕುವ ಯತ್ನ ಮಾಡಿದ್ದಾರೆ. 

ಈ ಬಾರಿ ಮತ್ತೆ ಭಾರತ ಮತ್ತು ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸಿ ಅವರು ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾರೆ.ಈ ಬಗ್ಗೆ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ತಮ್ಮ ಪೋಸ್ಟ್‌ ಕುರಿತು ಮರಿಯಮ್‌ ಕ್ಷಮೆ ಕೇಳಿದ್ದಾರೆ.

ಏನಿದು ವಿವಾದ?: ಏ.21ರಂದು ಮಾಲ್ಡೀವ್ಸ್‌ ಸಂಸತ್ತಿಗೆ ಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರ ಪಿಪಿಎಂ ಪಕ್ಷದ ನಾಯಕಿ ಮತ್ತು ಭಾರತ ವಿರೋಧ ಹೇಳಿಕೆ ಪ್ರಕರಣದಲ್ಲಿ ಅಮಾನತುಗೊಂಡ ಮರಿಯಮ್‌ ಶಿಯುನಾ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದರು. ಅದರಲ್ಲಿ ‘ಎಂಡಿಪಿ (ವಿಪಕ್ಷ) ಈಗಾಗಲೇ ಗುಂಡಿಯತ್ತ (ಭಾರತ) ಸಾಗುತ್ತಿದೆ ನಾವು ಮತ್ತೆ ಆ ಗುಂಡಿಯಲ್ಲಿ ಬೀಳಬಾರದು’ ಎಂದು ಪರೋಕ್ಷವಾಗಿ ಭಾರತ ಪರ ನಿಲುವ ಹೊಂದಿರುವ ಎಂಡಿಪಿ ಮತ್ತು ಭಾರತದ ವಿರುದ್ಧ ಟೀಕೆ ಮಾಡಿದ್ದರು. 

ಜೊತೆಗೆ ಎಂಡಿಪಿ ಪಕ್ಷದ ಚಿಹ್ನೆಯನ್ನು ತಿರುಚಿ, ಧ್ವಜದಲ್ಲಿನ ಕಂಪಾಸ್‌ ಜಾಗದಲ್ಲಿ ಭಾರತದ ರಾಷ್ಟ್ರಧ್ವಜದಲ್ಲಿರುವ ಅಶೋಕ ಚಕ್ರವನ್ನು ಹಾಕಿದ್ದರು. ಈ ಮೂಲಕ ಎಂಡಿಪಿ ಮತ್ತು ಭಾರತದ ಸಂಬಂಧವನ್ನು ವಿಶ್ಲೇಷಿಸುವ ಯತ್ನ ಮಾಡಿದ್ದರು.ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಲೇ ತಮ್ಮ ಪೋಸ್ಟ್‌ ಅಳಿಸಿ ಹಾಕಿರುವ ಮಾರಿಯಮಂ ‘ಮಾಲ್ಡೀವ್ಸ್‌ನ ವಿಪಕ್ಷ ಎಂಡಿಪಿ ಉದ್ಧೇಶಿಸಿ ನಾನು ಹಾಕಿದ್ದ ಪೋಸ್ಟ್‌ ಒಂದರಲ್ಲಿನ ಚಿತ್ರವು ಭಾರತದ ರಾಷ್ಟ್ರಧ್ವಜಕ್ಕೆ ಹೋಲಿಕೆಯಾಗುತ್ತಿದೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿದೆ. 

ಇದು ಸಂಪೂರ್ಣ ಉದ್ದೇಶಪೂರ್ವಕವಲ್ಲದ ಸಂಗತಿ ಮತ್ತು ಈ ವಿಷಯದಲ್ಲಿ ಉಂಟಾದ ಗೊಂದಲಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದ್ದಾರೆ.ಜೊತೆಗೆ ಭಾರತದ ಜೊತೆಗಿನ ಸಂಬಂಧವನ್ನು ಮಾಲ್ಡೀವ್ಸ್‌ ಅತ್ಯಂತ ಆಳವಾಗಿ ಗೌರವಿಸುತ್ತದೆ. ಮುಂದಿನ ದಿನಗಳಲ್ಲಿ ಇಂಥ ಸಂಗತಿಗಳನ್ನು ಹಂಚಿಕೊಳ್ಳುವಾಗ ಇನ್ನಷ್ಟು ಎಚ್ಚರವಾಗಿರುತ್ತೇನೆ’ ಎಂದು ಹೇಳಿದ್ದಾರೆ.ಈ ಹಿಂದೆ ಮೋದಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟು, ಭಾರತೀಯ ಪ್ರವಾಸಿಗರಿಗೆ ಈ ಪ್ರದೇಶವನ್ನು ಅನ್ವೇಷಿಸುವಂತೆ ಕರೆಕೊಟ್ಟಾಗ, ಮೋದಿಯನ್ನು ವಿದೂಷಕ ಎಂದು ಮರಿಯಮ್‌ ವ್ಯಂಗ್ಯವಾಡಿದ್ದರು.