ಸಾರಾಂಶ
ನವದೆಹಲಿ: ಅಮೆರಿಕ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಭಿನಂದನೆ ತಿಳಿಸಿದ್ದಾರೆ.
ಟ್ರಂಪ್ ಅವರನ್ನು ನನ್ನ ಗೆಳೆಯ ಎಂದು ಟ್ವೀಟ್ ಮೂಲಕ ಪ್ರಶಂಸಿಸಿರುವ ಮೋದಿ, ‘ಈ ನಿಮ್ಮ ಐತಿಹಾಸಿಕ ಗೆಲುವಿಗಾಗಿ ನನ್ನ ಗೆಳೆಯ ಟ್ರಂಪ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ಸಂಬಂಧವನ್ನು ಇನ್ನಷ್ಟು ಬಲ ಪಡಿಸಲು ನಾನು ಎದರು ನೋಡುತ್ತಿದ್ದೇನೆ. ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ಒಟ್ಟಾಗಿ ಕೆಲಸ ಮಾಡೋಣ’ ಎಂದಿದ್ದಾರೆ.
ಇನ್ನು ಇತ್ತ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ‘ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಗಳು. ಹಾಗೆಯೇ ಪ್ರತಿಸ್ಪರ್ಧಿಯಾದ ಕಮಲಾ ಹ್ಯಾರಿಸ್ ಅವರಿಗೆ ಭವಿಷ್ಯದಲ್ಲಿನ ಪ್ರಯತ್ನಗಳಲ್ಲಿ ಶುಭವಾಗಲಿ’ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿ, ‘ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆಗಳು. ಭಾರತ ಮತ್ತು ಅಮೆರಿಕದ ನಡುವಿನ ರಾಜತಾಂತ್ರಿಕ ಸಂಬಂಧಗಳು ದೀರ್ಘ ಕಾಲದಿಂದ ಬೆಸೆದುಕೊಂಡಿವೆ. ಇವು ಪ್ರಜಾಪ್ರಭುತ್ವದ ಮೌಲ್ಯಗಳು, ಸಾಮ್ಯ ಆಸಕ್ತಿಗಳಗೆ ಆಧಾರವಾಗಿವೆ’ ಎಂದಿದ್ದಾರೆ.